ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾದ ಪುತ್ತಿಲ ಪರಿವಾರವನ್ನು (Puttila Parivara) ಮತ್ತೆ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ತರಬೇಕು ಎಂಬ ಪ್ರಯತ್ನಗಳು ತೆರೆ ಮನೆಯಲ್ಲಿ ನಡೆಯುತ್ತಿದ್ದವು. ಈಗ ಅದು ಬಹಿರಂಗವಾಗಿಯೇ ನಡೆಯುತ್ತಿದೆ. ಇದರ ಭಾಗವಾಗಿ ಪುತ್ತಿಲ ಪರಿವಾರ ಒಂದು ಸಮಾಲೋಚನಾ ಸಭೆಯನ್ನು ನಡೆಸಿ ಬಿಜೆಪಿ ಜತೆ ವಿಲೀನಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ (Conditions to Merger). ಜತೆಗೆ ಅವುಗಳ ಪೂರೈಕೆಗೆ ಮೂರು ದಿನಗಳ ಗಡುವನ್ನು ವಿಧಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಅವರು 62 ಸಾವಿರ ಮತಗಳನ್ನು ಪಡೆದಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಿರುದ್ಧ ಸಣ್ಣ ಅಂತರದಿಂದ ಸೋತಿದ್ದರು. ಬಿಜೆಪಿ ದೂರದ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂದಿತ್ತು. ಈ ಚುನಾವಣೆಯ ಬಳಿಕ ಪುತ್ತಿಲ ಪರಿವಾರ ಲೋಕಸಭಾ ಚುನಾವಣೆಯ ಟಿಕೆಟ್ ಬೇಡಿಕೆಯನ್ನು ಇಟ್ಟಿತ್ತು. ಇದರ ನಡುವೆ ಸಂಘ ಪರಿವಾರ, ಬಿಜೆಪಿ ನಾಯಕರು ಪುತ್ತಿಲ ಪರಿವಾರವನ್ನು ಸಮಾಧಾ ಮಾಡಿ ಮರಳಿ ಪಕ್ಷದ ತೆಕ್ಕೆಗೆ ತರುವ ಪ್ರಯತ್ನ ಆರಂಭಿಸಿದ್ದರು. ಅರುಣ್ ಕುಮಾರ್ ಪುತ್ತಿಲ ಅವರು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವ ಉದ್ದೇಶದಿಂದ ದ್ವೇಷ ಮರೆತು ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದ್ದರು. ಆದರೆ, ಬಿಜೆಪಿ ಪರಿವಾರದಲ್ಲಿ ತಮ್ಮ ಪರಿವಾರದಲ್ಲಿ ಸಣ್ಣಮಟ್ಟಿಗಿನ ಗೌರವವಾದರೂ ಬೇಕು ಎಂಬ ಕಾರಣಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಲು ಬಯಸಿದ್ದರು.
ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಸೋಮವಾರ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ನಡೆದು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಮಾತನಾಡಿದ ಮಾಧ್ಯಮದ ಜತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ಪರಿವಾರದ ಅನಿಸಿಕೆಗಳನ್ನು ಸ್ಪಷ್ಟವಾಗಿ ಹೇಳಿದರು. ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ಪರಿವಾರದ ಪ್ರಧಾನ ಬೇಡಿಕೆ. ಜತೆಗೆ ಪದಾಧಿಕಾರಿಗಳಲ್ಲೂ ಅವಕಾಶ ನೀಡಬೇಕು ಎಂದು ಕೋರಲಾಗಿದೆ.
ಇದನ್ನೂ ಓದಿ: Congress Protest : ಸತ್ಯ ಮುಚ್ಚಿಟ್ಟು ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ; ಬೊಮ್ಮಾಯಿ ಆಕ್ರೋಶ
ಷರತ್ತಿನ ಜತೆಗೆ ಎಚ್ಚರಿಕೆಯನ್ನೂ ನೀಡಿದ ಪುತ್ತಿಲ
ದ.ಕ. ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್ ಗಳಲ್ಲಿ 4,23,400 ಜನ ಬೆಂಬಲಿಗರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೇ ದೊಡ್ಡ ಸಂಗತಿಯೇ ಇಲ್ಲ, ವ್ಯವಸ್ಥೆಗಳ ಅಗತ್ಯವೂ ಇಲ್ಲ. ಆದರೂ ಅದನ್ನು ಬಿಟ್ಟು ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದ್ದೇವೆ.
ನಾವೆಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ರಕ್ತವನ್ನು ಬೆವರು ಮಾಡಿ ಮಾತೃ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯಬೇಕು ಇದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನ ತೆಗೊಂಡಿದ್ದಾರೆ ಅವರ ನಿರ್ಧಾರಕ್ಕೆ ನಾನು ಕಟಿಬದ್ಧನಾಗಿದ್ದೇನೆ.
ಮಾತೃ ಪಕ್ಷದವರು ಈ ಬಗ್ಗೆ ಸೂಕ್ತ ನಿರ್ಧಾರ ಮೂರು ದಿನಗಳೊಳಗೆ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ.
ಕಾರ್ಯಕರ್ತರ ಭಾವನೆಗಳಿಗೆ ಸೂಕ್ತವಾದ ನಿರ್ಧಾರವನ್ನು ಮಾತೃ ಪಕ್ಷ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪುತ್ತೂರಿನಲ್ಲಿ ನಡೆದ ವಿದ್ಯಾಮಾನಗಳು ಇಡೀ ರಾಜ್ಯದಲ್ಲಿ ನಡೆಯಲಿದೆ ಎನ್ನುವ ಎಚ್ಚರಿಕೆಯನ್ನು ಅರುಣ್ ಕುಮಾರ್ ಪುತ್ತಿಲ ನೀಡಿದರು.