ಮಂಗಳೂರು: ಬೋರ್‌ವೆಲ್ ಕೊರೆಯುತ್ತಿದ್ದ (Assault Case) ಲಾರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಪ್ರಸಿದ್ಧ ಬಿಂದು ನೀರಿನ ಫ್ಯಾಕ್ಟರಿ ಪುರುಷರಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದೆ. ಈ ಫ್ಯಾಕ್ಟರಿಗೆ ಸೇರಿದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುತ್ತಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಸಂಘಟನೆಗೆ ಸೇರಿದ ಗುಂಪಿನಿಂದ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಕಲ್ಲು ತೂರಾಟದಲ್ಲಿ ಸಣ್ಣ ಮಕ್ಕಳು ಕೂಡ ಭಾಗಿಯಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಅನ್ಯಕೋಮಿನಿಂದ ಕಲ್ಲು ತೂರಾಟದ ಬಳಿಕ ಎರಡೂ ಕಡೆಯಿಂದಲೂ ಪರಸ್ಪರ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ. ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುವ ಬದಲು ಹೊಸ ಬೋರ್‌ವೆಲ್ ಕೊರೆಯಲಾಗುತ್ತಿದೆ ಎಂದು ಆರೋಪಿಸಿ ಕಲ್ಲು ತೂರಾಟ ನಡೆಸಲಾಗಿದೆ. ಸದ್ಯ ಎರಡೂ ಗುಂಪುಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ದೂರಿನಲ್ಲಿ ಏನಿದೆ?
ನರಿಮೊಗರು ಗ್ರಾಮದ ಮೇಘಾ ಫ್ರುಟ್ ಪ್ರೊಸೆಸಿಂಗ್ ಪ್ರೈ ಲಿ. ನಲ್ಲಿ ಅನುಮತಿ ಇಲ್ಲದೇ ಕೊಳವೆ ಬಾವಿ ಶುದ್ದೀಕರಿಸಲಾಗುತ್ತಿತ್ತು. ಈ ವಿಚಾರ ತಿಳಿದ ಸ್ಥಳೀಯರು ಸಂಸ್ಥೆಯ ಒಳಗೆ ಹೋಗಿ ಗ್ರಾಮ ಪಂಚಾಯತ್ ಅಧಿಕಾರಿ ಬಂದ ಬಳಿಕ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ. ಆದರೆ ಸಂಸ್ಥೆಯವರು ಕೊಳವೆ ಬಾವಿಯ ಶುದ್ಧೀಕರಣ ಕೆಲಸವನ್ನು ಮುಂದುವರೆಸಿದ್ದಾರೆ. ಹೀಗಾಗಿ ಕೂಡಲೇ ಗ್ರಾ.ಪಂ ಅಧಿಕಾರಿ ರವಿಚಂದ್ರರವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ.
ಇತ್ತ ಸಂಸ್ಥೆಯ ಒಳಗಡೆ ನಡೆಯುತ್ತಿರುವುದನ್ನು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದಾಗ ಕೆಲಸಗಾರರೊಬ್ಬರು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆಯನ್ನು ಹಾಕಿದ್ದರಂತೆ. ಮಾತ್ರವಲ್ಲದೆ ಕೆಲವರು ಒಳಗಿನಿಂದ ಸ್ಥಳೀಯರ ಮೇಲೆ ಕಲ್ಲು ಬಿಸಾಡಿದ್ದರಿಂದ ಗಾಯಗೊಂಡಿದ್ದಾರೆ. ಕೆಲಸ ನಿರ್ವಹಿಸುವ ಸಂಸ್ಥೆಯಲ್ಲಿ ಹೊಸ ಕೊಳವೆ ಬಾವಿಯನ್ನು ಅನುಮತಿಯಿಲ್ಲದೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಕೃತ್ಯವನ್ನು ಎಸಗಿದ್ದಾರೆ ದೂರು ನೀಡಿದ್ದಾರೆ.
ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!
ಸಂಸ್ಥೆಯವರು ಹೇಳೋದು ಏನು?
ಮೇಘಾ ಫ್ರುಟ್ ಪ್ರೊಸೆಸಿಂಗ್ ಪ್ರೈ ಲಿ. ನಲ್ಲಿ ಮೆನೇಜರ್ ಆಗಿರುವ ಲಕ್ಷ್ಮಿನಾರಾಯಣ ಎಂಬುವವರು ಪ್ರತಿದೂರು ನೀಡಿದ್ದಾರೆ. ಆ ಪ್ರಕಾರ ಸಂಸ್ಥೆಯ ಕೊಳವೆ ಬಾವಿ ಶುದ್ದೀಕರಿಸುವ ಬಗ್ಗೆ ಭೂ ವಿಜ್ಞಾನ ಇಲಾಖೆ ಮತ್ತು ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದು ಕೊಂಡಿದ್ದೇವೆ. ಮೇ 27ರ ಸಂಜೆ ಸಂಸ್ಥೆಯ ಆವರಣದಲ್ಲಿ ಕೊಳವೆ ಬಾವಿ ಶುದ್ದೀಕರಿಸುವ ಸಮಯ ಸ್ಥಳೀಯ ನಿವಾಸಿಗಳಾಸ ಸಲೀಂ ಮತ್ತು ಇತರರು ಸೇರಿಕೊಂಡು ಸಂಸ್ಥೆಯ ಆವರಣದ ಒಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ.
ಬೋರ್‌ವೆಲ್ ಲಾರಿ ಹಾಗೂ ಅದರಲ್ಲಿದ್ದ ಕಾರ್ಮಿಕರ ಮೇಲೆ ಕಲ್ಲು ಬಿಸಾಡಿದ್ದಾರೆ. ಇದರಿಂದ ಕಾರ್ಮಿಕರಾದ ಸಾಂಗ್‌ಲಾಲ್ ಮತ್ತು ಶೇಖರ್ ಎಂಬವರಿಗೆ ಗಾಯವಾಗಿದೆ. ಲಾರಿಗೆ ಕಲ್ಲು ಬಿದ್ದು ಲಾರಿಯ ಗಾಜು ಪುಡಿಯಾಗಿದೆ. ಇದರಿಂದ ಸುಮಾರು ರೂ 10,000 ರೂ. ನಷ್ಟ ಉಂಟಾಗಿದೆ ಎಂದು ದೂರು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ