ಮಂಗಳೂರು: ಫುಟ್ಬಾಲ್ ಆಟದಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಿರಿಕ್ ಶುರುವಾಗಿದ್ದು, ಕಿಡ್ನ್ಯಾಪ್ ಮಾಡಿ ಹಲ್ಲೆ (Assault Case) ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಯದ್ವಾತದ್ವಾ ಹಲ್ಲೆ ಮಾಡಿದ್ದು,ವಿಡಿಯೊ ವೈರಲ್ ಆಗಿದೆ.
ಮಂಗಳೂರಿನ ಎರಡು ಕಾಲೇಜಿನ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಮಂಗಳೂರಿನ ಯೆನಪೊಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ ನಡೆದಿದೆ. ಘಟನೆಯಲ್ಲಿ ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜನ್ಮದ್ ಎಂಬ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ ದಿಯಾನ್,ಅನ್ನೈ, ತಸ್ಮಿನ್,ಸಲ್ಮಾನ್, ಅನಾಸ್ ಎಂಬ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಹಾಕಾಳಿ ಪಡ್ಪು ಬಳಿ ಮನಬಂದಂತೆ ಥಳಿಸಿ, ಸಿಗರೇಟ್‌ನಿಂದ ಸುಟ್ಟು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಅರೆಬೆತ್ತಲು ಗೊಳಿಸಿ ಬಸ್ಕಿ ಹೊಡೆಸಿ ಕ್ಷಮೆ ಕೇಳುವಂತೆ ಥಳಿಸಿದ್ದಾರೆ. ಈ ವಿಡಿಯೊವೆಲ್ಲವೂ ವೈರಲ್ ಆಗಿದೆ. ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Dowry Death : ವರದಕ್ಷಿಣೆ ಕಿರುಕುಳ ಆರೋಪ, ಗೃಹಿಣಿ ಆತ್ಮಹತ್ಯೆಗೆ ಶರಣು
ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟಿದ್ದಕ್ಕೆ ಕಾರು ಚಾಲಕನ ಮೇಲೆ ದರ್ಪ
ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟಿದ್ದಕ್ಕೆ ಕಾರು ತಡೆದು ಚಾಲಕನಿಗೆ ಕೆಲವರು ಅವಾಜ್ ಹಾಕಿದ್ದಾರೆ. ಸಂಚಾರಿ ಪೊಲೀಸ್ ಸಿಬ್ಬಂದಿ ಮುಂದೆಯೇ ಅವಾಜ್ ಹಾಕಿದ್ದಾರೆ. ಕಾರು ಚಾಲಕ ಟ್ರಾಫಿಕ್ ವೇಳೆ ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟಿದ್ದ. ಈ ವೇಳೆ ಅಕ್ಕ ಪಕ್ಕದವರು ಬಂದು ಯಾಕೆ ಗಾಡಿ ಸೈಡಿಗೆ ಹಾಕಿದೆ ಎಂದು ಅವಾಜ್ ಹಾಕಿದ್ದಾರೆ. ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದು, ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದ್ದು ಎಂದು ಪೊಲೀಸರು ಮಾಹಿತಿ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಗೆ ಹಿಗ್ಗಾಮುಗ್ಗ ಥಳಿತ
ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಫುಡ್ ಡೆಲಿವರಿ ಬಾಯ್‌ಗೆ ನಾಲ್ಕೈದು ಮಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸೌತ್ ಎಂಡ್ ಸರ್ಕಲ್ ಸಿಗ್ನಲ್ ಬಳಿಯೇ ಮನಸೋ ಇಚ್ಚೆ ಹಲ್ಲೆ ಮಾಡಿದ್ದು, ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಬಿಎಂಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಗಲಾಟೆ ವಿಡಿಯೋ ಸೆರೆಯಾಗಿದೆ. ಸದ್ಯ ಹೊಡದಾಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರು ಅಡ್ಡಗಟ್ಟಿ ಗಲಾಟೆ
ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣವು ಮುಂದುವರಿದಿದ್ದು, ಬೈಕ್‌ನಲ್ಲಿ ಬಂದವರು ಕಾರನ್ನು ಚೇಸ್ ಮಾಡಿ ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ. ಜಿತಿನ್ ರಾಜ್ ಎಂಬುವವರು ತಮ್ಮ ಕಾರಲ್ಲಿ ಗೆಳೆಯನ ಜತೆ ಇಂದಿರಾನಗರದ ಗೆಳೆಯನ ಮನೆಗೆ ಹೋಗುತ್ತಿದ್ದರು. ಈ ವೇಳೆ ಸಿಗ್ನಲ್ ವೇಳೆ ಅಡ್ಡ ಬಂದು ಮೂರ್ನಾಲ್ಕು ಕಿಲೋ ಮೀಟರ್ ಕಾರನ್ನು ಫಾಲೋ ಮಾಡಿದ್ದಾರೆ. ನಂತರ ಇಂದಿರಾನಗರದ ಬಳಿ ಪಲ್ಸರ್ ಬೈಕಲ್ಲಿ ಓವರ್ ಟೇಕ್ ಮಾಡಿ, ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆರೋಪಿಗಳು ಕಾರು ಅಡ್ಡಗಟ್ಟುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಚಾಲಕ ಜಿತಿನ್ ರಾಜ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ
ರಾಜಧಾನಿ ಬೆಂಗಳೂರಿನಲ್ಲಿ ಒಂದಲ್ಲ ಎರಡಲ್ಲ ಹತ್ತಾರು ಕಡೆಗಳಲ್ಲಿ ರೋಡ್ ರೇಜ್ ಪ್ರಕರಣಗಳು ನಡೆಯುತ್ತಲೇ ಇವೆ. ಸದ್ಯ ಕಿಡಿಗೇಡಿಯೊಬ್ಬ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತು ಹಾಕಿ ಅಟ್ಟಹಾಸ ಮೆರೆದಿದ್ದಾನೆ. ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಲಿ ಬಳಿ ನಿನ್ನೆ ಸೋಮವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ. ಕಾರು ಅಡ್ಡಗಟ್ಟಿ ಗುಂಡಾ ವರ್ತನೆ ತೋರಿದ ಬೈಕ್ ಸವಾರನೊಬ್ಬ, ಕಾರಿನ ವೈಪರ್ ಕಿತ್ತು ಮುಂಭಾಗದ ಗಾಜಿಗೆ ಕಲ್ಲುಎತ್ತಿಹಾಕಿ ಹೊಡೆದು ಹಾಕಿದ್ದಾನೆ.
ಇತ್ತ ವ್ಯಕ್ತಿಯ ದೌರ್ಜನ್ಯ ಕಂಡು ಕಾರೊಳಗೆ ಇದ್ದ ಮಹಿಳೆ ಮತ್ತು ಮಗು ಕಿರುಚಾಡಿದ್ದಾರೆ. ಅಲ್ಲದೇ ಬೈಕ್ ಸವಾರನ ಗುಂಡಾ ವರ್ತನೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದೇ ವೇಳೆ ಸ್ಥಳೀಯರು ದರ್ಪ ತೋರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬೈಕ್ ಸವಾರನನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಅಸಲಿ ಕಾರಣ ಏನು ಎಂಬುದರ ಬಗ್ಗೆ ಇಬ್ಬರಿಂದ ಮಾಹಿತಿ ಪಡೆಯುತ್ತಿದ್ದಾರೆ.
ವ್ಹೀಲಿಂಗ್ ಚಾಳಿ ಮುಂದುವರಿಸಿದ ಸವಾರ
ಬೆಂಗಳೂರಿನಲ್ಲಿ ವ್ಹೀಲಿಂಗ್ ಹಾವಳಿ ಮಿತಿ ಮೀರಿದೆ. ಆರ್.ಟಿ.ನಗರ ಸಂಚಾರಿ ಪೊಲೀಸರು, ಮೂರು ಬಾರಿ ಬಂಧಿಸಿ ವ್ಹೀಲಿಂಗ್ ಮಾಡದಂತೆ ಎಚ್ಚರಿಕೆ ನೀಡಿದ್ದರೂ, ಮತ್ತೆ ಅದೆ ಚಾಳಿ ಮುಂದುವರಿಸಿದ್ದಾನೆ. ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದಾಗ, ನಾನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದರೆ ಹಣ ಬರುತ್ತೆ ಎಂದಿದ್ದ. ತಿಂಗಳಿಗೆ ಬೈಕ್ ವ್ಹೀಲಿಂಗ್ ಮಾಡಿ ಸಾವಿರಗಟ್ಟಲೆ ಸಂಪಾದನೆ ಮಾಡುತ್ತೆನೆ. ನನಗೆ ಏನು ಕೆಲಸವಿಲ್ಲ ,ಬೈಕ್ ವ್ಹೀಲಿಂಗ್ ಮಾಡಿದರೆ ಹಣ ಬರುತ್ತೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದಿದ್ದ. ಬಂಧಿಸಿ ದಂಡ ಹಾಕಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಬೈಕ್ ಸವಾರ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ