ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಯಾವುದೇ ಚುನಾವಣೆ ಎದುರಿಸಲು ಸಿದ್ಧವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ದೇಶಾದ್ಯಂತ ಬಾಕಿ ಇರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಚುನಾವಣೆಯನ್ನು ನಡೆಸಬೇಕಾಗಿದೆ ಎಂದು ಕಟೀಲ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ |ಕರಾವಳಿ ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರಿಗೆ ಇನ್ನೂ ಬೇಗ ತಲುಪಿ
ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯ ಕೊಡಿಸುವ ನಿಟ್ಟಿನಲ್ಲಿ ಆಯೋಗವನ್ನೂ ರಚಿಸಲಾಗಿದೆ ಎಂದು ಕಟೀಲ್ ನುಡಿದರು.
ಒಬಿಸಿ ಮೀಸಲಾತಿಗೆ ಬಿಜೆಪಿ ಅಡ್ಡ ಬರುವುದಿಲ್ಲ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸೇರಿದಂತೆ ಯಾವುದೇ ಚುನಾವಣೆ ಎದುರಿಸಲು ಪರಿಪೂರ್ಣ ರೀತಿಯಲ್ಲಿ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಎಲ್ಲೆಲ್ಲಿ ಅಗತ್ಯವೋ ಅಲ್ಲಲ್ಲಿ ಒಬಿಸಿ ಸಮುದಾಯಕ್ಕೆ ಶೇ. 33ಕ್ಕಿಂತ ಹೆಚ್ಚು ಮೀಸಲಾತಿ ಕೊಟ್ಟು ಅವರಿಗೆ ಅವಕಾಶವನ್ನು ಬಿಜೆಪಿ ಕಲ್ಪಿಸಲಿದೆ ಎಂದವರು ತಿಳಿಸಿದರು.
ಮತಗಟ್ಟೆಗಳ ಸಿದ್ಧತೆ
ಚುನಾವಣೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಅತ್ಯುತ್ತಮ ತಂಡವಿದ್ದು, ಹಿಂದೆ ಗ್ರಾಮಕ್ಕೆ ಒಂದು ಸಮಿತಿ ಇತ್ತು. ಬಳಿಕ ಅದನ್ನು ಬೂತ್ ಸಮಿತಿಗೆ ವಿಸ್ತರಿಸಲಾಯಿತು. ಇದೀಗ ಅದನ್ನು ಪೇಜ್ ಕಮಿಟಿವರೆಗೆ ವಿಸ್ತರಿಸಲಾಗಿದೆ. ಮತದಾರರ ಪಟ್ಟಿಯ ಒಂದು ಪುಟಕ್ಕೊಬ್ಬರು ಪ್ರಮುಖರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಒಂದು ಬೂತ್‌ನಲ್ಲಿ ತಲಾ ಒಬ್ಬರು ಎಸ್‌ಸಿ, ಎಸ್‌ಟಿ, ಮಹಿಳೆ, ಸಾಮಾನ್ಯ ವರ್ಗದವರು, ಒಬಿಸಿಯವರು ಸೇರಿದಂತೆ ಪಂಚರತ್ನ ಸಮಿತಿ ರಚಿಸಿದ್ದೇವೆ. ಹಾಗಾಗಿ ಪರಿಪೂರ್ಣ ರೀತಿಯಲ್ಲಿ ನಾವು ಸಿದ್ಧರಾಗಿದ್ದೇವೆ. ಬಿಜೆಪಿ ಮೂರು ತಂಡಗಳ ಸಂಘಟನಾತ್ಮಕ ಪ್ರವಾಸದಲ್ಲಿ ಪಕ್ಷದ ಪರವಾಗಿ ಅಲೆ ಇರುವುದು ವ್ಯಕ್ತವಾಗಿದೆ ಎಂದು ಕಟೀಲ್ ವಿವರ ನೀಡಿದರು.
ಪಿಎಸ್‌ಐ ಹಗರಣ
ಪಿಎಸ್‌ಐ (PSI) ನೇಮಕ ಹಗರಣದ ತನಿಖೆಗೆ ನಮ್ಮ ಸರಕಾರ ಆದೇಶ ನೀಡಿದೆ. ಪಾರದರ್ಶಕವಾದ ತನಿಖೆ ಆಗುತ್ತಿದೆ. ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದಿಲ್ಲ ಎಂದವರು ತಿಳಿಸಿದರು.
ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಜಿಲ್ಲಾ ವಕ್ತಾರರಾದ ರವಿಶಂಕರ್ ಮಿಜಾರ್, ಜಿಲ್ಲಾ ಸಹ ವಕ್ತಾರರಾದ ರಾಧಾಕೃಷ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ | ಒಂದೇ ದಿನ ₹1,680 ಕೋಟಿ ಚಿನ್ನ ಮಾರಾಟ