ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾಲಯಲ್ಲಿ (Private University) ಪಿಎಚ್‌ಡಿ ಅಧ್ಯಯನ (PhD Study) ನಡೆಸುತ್ತಿದ್ದು ಕಳೆದ ಫೆಬ್ರವರಿ 17ರಿಂದ ನಾಪತ್ತೆಯಾಗಿದ್ದ ಪುತ್ತೂರು ಮೂಲದ ಬ್ರಾಹ್ಮಣ ಯುವತಿ ಚೈತ್ರಾ ಹೆಬ್ಬಾರ್ (Chaithra Hebbar Missing Case) ಮಿಸ್ಸಿಂಗ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಚೈತ್ರಾ ಹೆಬ್ಬಾರ್ ಯಾರ ಜತೆ ಓಡಿ ಹೋಗಿದ್ದಾಳೆ ಎಂದು ನಂಬಲಾಗಿತ್ತೋ ಆ ಯುವಕ ಈಗ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ. ಆದರೆ, ಚೈತ್ರಾ ಹೆಬ್ಬಾರ್ ಆತನ ಜತೆಗಿಲ್ಲ. ಆಕೆ ವಿಸಿಟಿಂಗ್ ವಿಸಾ ಪಡೆದು ಕತಾರ್‌ಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದೆ.
ಆಕೆ ನಾಪತ್ತೆಯಾದ ದಿನದಿಂದ ಆಕೆಯೊಂದಿಗೆ ಆತ್ಮೀಯತೆಯಿಂದ ಇದ್ದ ಶಾರುಖ್ ಶೇಖ್ (Sharukh Shekh) ಎಂಬಾತ ಕೂಡಾ ನಾಪತ್ತೆಯಾಗಿದ್ದಾನೆ. ಹೀಗಾಗಿ ಇದು ಹಿಂದು-ಮುಸ್ಲಿಂ ಜೋಡಿ (Hindu Muslim) ಪಲಾಯನ, ಲವ್ ಜಿಹಾದ್ (Love Jihad) ಎಂಬಿತ್ಯಾದಿ ವ್ಯಾಖ್ಯಾನಗಳಿಗೂ ಕಾರಣವಾಗಿತ್ತು. ಹೀಗಾಗಿ ಇಬ್ಬರನ್ನೂ ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸಿದ್ದರು.
ಚೈತ್ರಾ ಹೆಬ್ಬಾರ್ ಮೂಲತಃ ಪುತ್ತೂರಿನ ಪುರುಷರ ಕಟ್ಟೆ ನಿವಾಸಿ. ತಂದೆಯ ನಿಧನದ ಬಳಿಕ ಆಕೆ ಮಂಗಳೂರಿನ ದೊಡ್ಡಪ್ಪನ ಮನೆಯಲ್ಲಿದ್ದು, ಎಂಎಸ್‌ಸಿ ಮಾಡಿದ್ದಳು. ಮುಂದೆ ದೇರಳಕಟ್ಟೆಯ ಖಾಸಗಿ ವಿವಿಯಲ್ಲಿ ಪಿಎಚ್‌ಡಿ ಮಾಡಲು ಆರಂಭಿಸಿದ್ದಳು. ಅದಕ್ಕೆ ಅನುಕೂಲವಾಗಲಿ ಎಂಬಂತೆ ಮಾಡೂರಿನಲ್ಲಿ ಪಿಜಿ ಒಂದಕ್ಕೆ ಸೇರಿದ್ದಳು.
ಚೈತ್ರಾ ಪಿಜಿಯಲ್ಲಿ ಉಳಿದುಕೊಂಡಿದ್ದಾಗ ಆಕೆಯನ್ನು ಭೇಟಿಯಾಗಲು ಒಬ್ಬ ಮುಸ್ಲಿಂ ಹುಡುಗ ಬರುತ್ತಿದ್ದ ಎನ್ನಲಾಗಿದೆ. ಆತನ ಹೆಸರು ಶಾರುಖ್ ಶೇಖ್. ಶಾರುಖ್ ಶೇಖ್ ಮೂಲತಃ ಬಂಟ್ವಾಳ ತಾಲೂಕಿನ ನೇರಳ ಕಟ್ಟೆಯವನು. ಆದರೆ, ಅವನು ಇದ್ದದ್ದು ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ. ಕೂರ್ನಡ್ಕ ಮತ್ತು ಪುರುಷರ ಕಟ್ಟೆ ಹತ್ತಿರ ಹತ್ತಿರ. ಹೀಗಾಗಿ ಚೈತ್ರಾ ಪುತ್ತೂರಿನಲ್ಲಿ ಇದ್ದಾಗಲೇ ಅವರಿಬ್ಬರಿಗೆ ಪರಿಚಯವಾಗಿರಬಹುದು ಎಂದು ಹೇಳಲಾಗಿದೆ.
ಶಾರುಖ್ ಶೇಖ್ ಚೈತ್ರಾ ಹೆಬ್ಬಾರ್‌ಳನ್ನು ಭೇಟಿಯಾಗುತ್ತಿರುವುದು ಮಾಡೂರಿನ ಬಜರಂಗ ದಳದ ಯುವಕರ ಕಣ್ಣಿಗೆ ಬಿದ್ದಿತ್ತು, ಇದರಿಂದ ಮುಂದೆ ಅಪಾಯವಿದೆ ಎಂದು ಅರಿತ ಅವು ಚೈತ್ರಾಳ ದೊಡ್ಡಪ್ಪನಿಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ. ದೊಡ್ಡಪ್ಪ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಈ ನಡುವೆ ಕಳೆದ ಫೆಬ್ರವರಿ 17ರಂದು ಆಕೆ ನಾಪತ್ತೆಯಾಗಿದ್ದಾಳೆ.
ಇದನ್ನೂ ಓದಿ: Chaithra Hebbar : ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಿಗೂಢ ನಾಪತ್ತೆ; ಯಾರು ಈ ಶಾರುಖ್ ಶೇಖ್?
ಆಕೆ ಶಾರುಖ್ ಶೇಖ್ ಜತೆ ಸ್ಕೂಟರ್‌ನಲ್ಲಿ ಹೋಗಿದ್ದು ತಿಳಿದುಬಂದಿತ್ತು. ಆ ಸ್ಕೂಟರ್ ಮಂಗಳೂರಿನಲ್ಲಿ ಪತ್ತೆಯಾಗಿತ್ತು. ಆಕೆಯ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಚೈತ್ರಾ ನಾಪತ್ತೆಯಾದ ಬಳಿಕ ಆಕೆಯ ಸುರತ್ಕಲ್‌ನ ಎಟಿಎಂನಲ್ಲಿ ಆಕೆಯ ಅಕೌಂಟ್‌ನಿಂದ ಹಣ ಡ್ರಾ ಮಾಡಲಾಗಿತ್ತು. ಈಗ ಪೊಲೀಸರು ಅಕೌಂಟ್ ಬ್ಲಾಕ್ ಮಾಡಿದ್ದಾರೆ.
ಶಾರುಖ್ ಶೇಖರ್‌ಗೆ ಡ್ರಗ್ಸ್ ಜಾಲದ ಜತೆ ಸಂಪರ್ಕವಿದ್ದು ಆತ ಚೈತ್ರಾ ಹೆಬ್ಬಾರ್‌ಗೂ ಡ್ರಗ್ಸ್ ಆಸೆ ತೋರಿಸಿ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ಎಂಬ ಗುಮಾನಿ ಇದೆ. ಐಟಿಐ ವಿದ್ಯಾಭ್ಯಾಸ ಪಡೆದ ಆತ ಕತಾರ್‌ಗೆ ಹೋಗಿದ್ದ. ಅಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದ. ಜೈಲು ಸೇರಿ ಬಳಿಕ ಬಿಡುಗಡೆಯಾಗಿ ಊರಿಗೆ ಬಂದವನೇ ಇಲ್ಲೂ ಅಂತಹುದೇ ಕೃತ್ಯದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.
Chaithra Hebbar : ಹಿಮಾಚಲ ಪ್ರದೇಶದಲ್ಲಿ ಸಿಕ್ಕಿಬಿದ್ದ ಶಾರುಖ್
ಈ ನಡುವೆ, ಮಂಗಳೂರು ಪೊಲೀಸರು ನಾನಾ ತನಿಖಾ ತಂಡಗಳನ್ನು ರಚಿಸಿ ಚೈತ್ರಾ ಮತ್ತು ಶಾರುಖ್ ಶೇಖ್ ಪತ್ತೆಗೆ ಪ್ರಯತ್ನ ನಡೆಸಿದ್ದರು. ಅದರ ಫಲವಾಗಿ ಈಗ ಶಾರುಖ್ ಶೇಖ್ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ.
ಆದರೆ, ಚೈತ್ರಾ ಆತನ ಜತೆಗೆ ಇರಲಿಲ್ಲ. ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಚೈತ್ರಾ ವಿಸಿಟಿಂಗ್ ವೀಸಾ ಪಡೆದು ಕತಾರ್ಗೆ ತೆರಳಿದ್ದಾಳೆ. ಹಾಗಿದ್ದರೆ ಆಕೆ ಶಾರುಖ್ ಶೇಖ್ ಜತೆ ಹೋಗಿರಲಿಲ್ಲವಾ? ಆಕೆ ನಾಪತ್ತೆಯಾಗುತ್ತಿದ್ದಂತೆಯೇ ಶಾರುಖ್ ಕೂಡಾ ಕಣ್ಮರೆಯಾಗಿದ್ದೇಕೆ? ಆಕೆಯನ್ನು ಮೊದಲು ಕತಾರ್‌ಗೆ ಕಳುಹಿಸಿ ತಾನು ಬಳಿಕ ತೆರಳಲು ಪ್ಲ್ಯಾನ್ ಮಾಡಿದ್ದನಾ? ಎನ್ನುವ ಹಲವು ಪ್ರಶ್ನೆಗಳಿಗೆ ಈಗ ಉಳ್ಳಾಲ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.