Site icon Vistara News

Chaitra Kundapura : ಚೈತ್ರಾ ಕುಂದಾಪುರ ವಂಚನೆ ಕೇಸಿನಲ್ಲಿ ವಜ್ರದೇಹಿ ಸ್ವಾಮೀಜಿ ಹೆಸರು; ಹಾಗಿದ್ದರೆ ಅವರ ಪಾತ್ರವೇನು?

Vajradehi matt swameeji and Chaitra Kundapura

ಮಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP ticket) ಹೆಸರಿನಲ್ಲಿ ನಡೆದ ಐದು ಕೋಟಿ ರೂ. ವಂಚನೆ ಪ್ರಕರಣ ಹಲವಾರು ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಹೊಸ ಹೊಸ ಹೆಸರುಗಳು ಕೇಳಿಬಂದಿವೆ. ಇದೀಗ ಹೊಸದಾಗಿ ಹೆಸರು ಕೇಳಿಬಂದಿರುವುದು ಮಂಗಳೂರಿನ ಮಂಗಳೂರಿನ ವಜ್ರದೇಹಿ ಮಠದ (Mangalore Vajradehi matt) ಶ್ರೀ ರಾಜಶೇಖರಾನಂದ ಸ್ವಾಮೀಜಿ (Shri Rajashekharananda Swamiji) ಹೆಸರು. ಗೋವಿಂದ ಪೂಜಾರಿ (Govinda Poojari) ಟಿಕೆಟ್‌ ಪ್ರಕರಣಕ್ಕೆ ಸಂಬಂಧಿಸಿ ರಾಜಶೇಖರಾನಂದ ಸ್ವಾಮೀಜಿ ಅವರು ತನಗೆ ಫೋನ್‌ ಮಾಡಿದ್ದರು ಎಂದು ಚೈತ್ರಾ ಕುಂದಾಪುರ (Chaitra Kundapura) ಅವರು ಆದಾಯ ತೆರಿಗೆ ಇಲಾಖೆಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿ (Letter to IT Department) ಉಲ್ಲೇಖವಾಗಿದೆ.

ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದು ಕರಾವಳಿಯಲ್ಲಿ ನಡೆಯುವ ಹಿಂದು ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ, ಪ್ರಧಾನ ಭಾಷಣಕಾರರೂ ಆಗಿರುತ್ತಾರೆ. ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ವಿದ್ಯಮಾನದ ಬಗ್ಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ಪಾತ್ರದ ಬಗ್ಗೆ, ಗೋವಿಂದ ಪೂಜಾರಿ ವಂಚನೆ ಪ್ರಕರಣದ ಬಗ್ಗೆ, ತಾನು ಯಾಕಾಗಿ ಚೈತ್ರಾ ಕುಂದಾಪುರಗೆ ಫೋನ್‌ ಮಾಡಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಾಗಿದ್ದರೆ, ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ವಜ್ರದೇಹಿ ಸ್ವಾಮೀಜಿಗಳ ಬಗ್ಗೆ ಏನಿದೆ ಎಂದು ಮೊದಲು ತಿಳಿಯೋಣ.. ಬಳಿಕ ಸ್ವಾಮೀಜಿ ಪ್ರತಿಕ್ರಿಯೆ.

ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ವಜ್ರದೇಹಿ ಸ್ವಾಮೀಜಿ ಬಗ್ಗೆ ಇರುವುದು ಇಷ್ಟು:

1.ಕೃಷ್ಣ ಪೂಜಾರಿ ಎಂದು ಪರಿಚಯಿಸಿ ಕೊಂಡ ವ್ಯಕ್ತಿಯಿಂದ ಜುಲೈ 21,2023ರಂದು 918217220747 ಎಂಬ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಅವರು ನನ್ನ ಗೋವಿಂದ ಬಾಬು ಪೂಜಾರಿ ಅವರು ಚುನಾವಣೆ ಟಿಕೆಟ್ ಗಾಗಿ 5 ಕೋಟಿ ರೂಪಾಯಿ ಕೊಟ್ಟಿರುವ ಕುರಿತು ನನ್ನನ್ನು ಪ್ರಶ್ನಿಸಿರುತ್ತಾರೆ ಈ ಕುರಿತು ನಾನು ಅವರ ಬಳಿ ನನ್ನ ಅಭಿಪ್ರಾಯವನ್ನು ಹಂಚಿಕೊಂಡು ಪೊಲೀಸ್ ಕೇಸ್ ದಾಖಲಿಸುವಂತೆ ಸಲಹೆ ನೀಡಿರುತ್ತೇನೆ.

2.ತದ ನಂತರ ಪುನಃ ಜುಲೈ 29ರಂದು ಮಧ್ಯಾಹ್ನ 12:43ಕ್ಕೆ ನನಗೆ ಪರಿಚಿತರಾಗಿರುವ ರಾಜಶೇಖರಾನಂದ ಸ್ವಾಮೀಜಿಯವರ ಫೋನ್ ನಂಬರ್+919986126131ರಿಂದ ಕರೆ ಬಂದಿದ್ದು, ಅದರಲ್ಲಿ ಅವರು ಗೋವಿಂದ ಬಾಬು ಪೂಜಾರಿಯವರು ಬಿಜೆಪಿ ಟಿಕೆಟ್ ಗಾಗಿ 5 ಕೋಟಿ ರೂಪಾಯಿಯನ್ನು ನೀಡಿರುವ ಕುರಿತು ಅವರ ಆಪ್ತರೊಬ್ಬರು ಅವರಿಗೆ ಮಾಹಿತಿ ನೀಡಿರುವ ಬಗ್ಗೆ ನನ್ನ ಬಳಿ ಚರ್ಚಿಸುತ್ತಾರೆ.

3.ಅದಾದ ಬಳಿಕ ಮತ್ತೆ ಜುಲೈ 30ರಂದು ನನಗೆ ಪರಿಚಿತರರಾದ ಸಂತೋಷ್ ಕೆಲ್ಲೋಜಿ ಎನ್ನುವವರು ಮಧ್ಯಾಹ್ನ 2:05 ಕ್ಕೆ ಕರೆಯಲ್ಲಿ ನನ್ನೊಂದಿಗೆ ಮಾತನಾಡಿ ಗೋವಿಂದ ಬಾಬು ಪೂಜಾರಿಯವರಿಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಹಣ ನೀಡಿರುವ ಸುದ್ದಿಯೊಂದು ವಾಟ್ಸಾಪ್ ಗಳಲ್ಲಿ ಶೇರ್ ಆಗಿರುವ ಕುರಿತು ನನ್ನ ಬಳಿ ವಿಚಾರಿಸಿರುತ್ತಾರೆ, ಈ ಎಲ್ಲಾ ಕರೆಗಳಿಗೆ ಸಂಬಂಧಿಸಿದಂತೆ ಕರೆಗಳನ್ನು ನಾನು ರೆಕಾರ್ಡ್ ಮಾಡಿ ಕೊಂಡಿದ್ದು, ಅದನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ. (File no 005, 006, 007).

ಇದರ ಬಗ್ಗೆ ವಜ್ರದೇಹಿ ಮಠದ ಸ್ವಾಮೀಜಿ ಹೇಳುವುದೇನು?

ನಾನು ಜುಲೈ 29ರಂದು ನಾನು ಚೈತ್ರಾ ಕುಂದಾಪುರಗೆ ಕಾಲ್‌ ಮಾಡಿದ್ದು ಹೌದು. ಆದರೆ, ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ. ನನ್ನ ಹೆಸರು ಥಳುಕುಹಾಕಿಕೊಂಡಿದೆ ಎಂದು ಕೆಲವರು ಈ ಹಿಂದೆ ಹೇಳಿದ್ದರು. ಅವರಿಗೆಲ್ಲ ನಾನು ಬೈದು ಫೋನ್‌ ಇಟ್ಟಿದ್ದೇನೆ. ನಾನು ಇಂಥ ಬೇನಾಮಿ ವ್ಯವಹಾರ ಮಾಡುವವನಲ್ಲ. ನನ್ನನ್ನು ನೇರಾನೇರ ಎಂದು ಸ್ವಾಮೀಜಿ ಹೇಳಿದ್ದಾರೆ. ಈ ಸಂಗತಿಯ ಕೆಲವೊಂದು ಒಳಸುಳಿಗಳು ಹಿಂದಿನಿಂದಲೇ ತನಗೆ ಗೊತ್ತೆಂದೂ, ಅದರ ಬಗ್ಗೆ ತಾನು ಹಾಲಶ್ರೀ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಜತೆ ಚರ್ಚೆ ಮಾಡಿದ್ದಾಗಿಯೂ ಹೇಳಿದ್ದಾರೆ.

ಇಲ್ಲಿವೆ ವಜ್ರದೇಹಿ ಸ್ವಾಮೀಜಿ ಅವರ ಮಾತಿನ ಪ್ರಮುಖ ಅಂಶಗಳು

ನಮ್ಮ ಹೆಸರು ಕೂಡಾ ಉಲ್ಲೇಖವಾಗಿದೆ, ಐಟಿಗೆ ಬರೆದ ಪತ್ರದಲ್ಲಿದೆ

ಚೈತ್ರಾ ಕುಂದಾಪುರ ಅವರು ಆದಾಯ ಇಲಾಖೆಗೆ ಬರೆದ ಪತ್ರದಲ್ಲಿ ನಮ್ಮ ಹೆಸರು ಉಲ್ಲೇಖ ಮಾಡಿರುವುದು ನನಗೆ ಮಾಧ್ಯಮಗಳ ಮೂಲಕ ತಿಳಿದುಬಂತು. ಹೀಗಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಜೂನ್‌ ತಿಂಗಳ ಮಧ್ಯಭಾಗದಲ್ಲಿ ಅಭಿನವ ಹಾಲಸ್ವಾಮಿಗಳು ನನಗೆ ಫೋನ್‌ ಮಾಡಿದ್ದರು. ʻನಂದೊಂದು ಒಂದು ಕೋಟಿ ರೂ. ಸಮಸ್ಯೆಯಾಗಿದೆ ಸ್ವಾಮೀಜಿ, ನೀವು ಸ್ವಲ್ಪ ಜಾಗೃತೆಯಾಗಿರಿ. ನಿಮ್ಮ ಹೆಸರು ಕೂಡಾ ಹಾಳಾಗಬಹುದು ಎಂದಿದ್ದರು. ಆಗ ನಾನು ಇಲ್ಲ ಅದು ಬೇನಾಮಿ ವ್ಯವಹಾರ ಮಾಡುವವರಿಗೆ ಮಾತ್ರ ಹೆದರಿಕೆ. ನಾವು ಅಂಥದ್ರಲ್ಲಿ ಇದ್ದರೆ ಮಾತ್ರ ಭಯ ಇರಬೇಕು, ಇಲ್ಲದಿದ್ದರೆ ಯಾಕೆ ಎಂದಿದ್ದೆ.

ಜುಲೈ 29ಕ್ಕೆ ಸತ್ಯಜಿತ್‌ ಸುರತ್ಕಲ್‌ ಕಾಲ್‌ ಮಾಡಿ ಆರೋಪ ಮಾಡಿದರು

ಜುಲೈ 29ನೇ ತಾರೀಕು ಸತ್ಯಜಿತ್‌ ಸುರತ್ಕಲ್‌ (ಹಿಂದು ಮುಖಂಡ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಖ್ಯಾತಿ) ಅವರು ನನಗೆ ಫೋನ್‌ ಮಾಡಿದರು. ಅವರು ನನ್ನ ಮೇಲೆ ನೇರ ಆರೋಪ ಮಾಡಿದರು. ಸ್ವಾಮೀಜಿ ನೀವು ಒಂದುವರೆ ಕೋಟಿ ರೂ. ತೆಗೆದುಕೊಂಡಿದ್ದೀರಿ. ಅದನ್ನು ನೀವು ಗೋವಿಂದ ಬಾಬು ಪೂಜಾರಿ ಅವರಿಗೆ ವಾಪಸ್‌ ಕೊಡಿ. ಅದನ್ನು ಕೊಡದೆ ಹೋದರೆ ನಿಮ್ಮ ಹೆಸರು ಮೀಡಿಯಾದಲ್ಲಿ ಬರ್ತದೆ, ಪೊಲೀಸ್‌ ತನಿಖೆಯಲ್ಲಿ ಬರುತ್ತದೆ, ನಿಮ್ಮ ಹೆಸರಿಗೆ ಕಳಂಕ ಬರುತ್ತದೆ. ಹೀಗಾಗಿ ನೀವು ಈಗಲೇ ಅದನ್ನು ಮುಗಿಸಿಕೊಳ್ಳಿ ಎಂದು ಹೇಳಿದರು. ಆಗ ನನಗೆ ಸಿಟ್ಟುಬರ್ತದೆ. ಯಾಕೆ ನಮ್ಮ ಹೆಸರು ಬರ್ತದೆ? ನಾನು ಇದರಲ್ಲಿ ಇಲ್ವೇ ಇಲ್ವಲ್ಲ.. ನಾನು ಹಿಂದೆ ಒಮ್ಮೆ ಕೊಲ್ಲೂರಿನಲ್ಲಿ ಅವರನ್ನು ನೋಡಿದ್ದೇನೆ. ಅದು ಕೂಡಾ ಜಗದೀಶ್‌ ಕೊಲ್ಲೂರು ಎಂಬವರು ಆಯೋಜಿಸಿದ ಬಜರಂಗ ದಳ ಕಾರ್ಯಕ್ರಮದಲ್ಲಿ ಪರಿಚಯ ಮಾಡಿದ್ದರು ಅಷ್ಟೆ. ಅದು ಬಿಟ್ಟರೆ ಪರಿಚಯವೇ ನನಗಿಲ್ಲ.

ನಾನು ಶರಣ್‌ ಪಂಪ್‌ವೆಲ್‌ ಜತೆಗೆ ವಿಷಯದ ಚರ್ಚೆ ಮಾಡಿದೆ

ಈ ವಿಚಾರವನ್ನು ನಾನು ಶರಣ್‌ ಪಂಪ್‌ವೆಲ್‌, ಪುನೀತ್‌ ಕೊಟ್ಟಾರಿ, ಭುಜಂಗ ಕುಲಾಲ್‌ ಅವರಲ್ಲಿ ಚರ್ಚೆ ಮಾಡಿದೆ. ಹೀಗೀಗೆ ನನ್ನ ಹೆಸರು ಥಳುಕು ಬಿದ್ದಿದೆಯಂತೆ ಎಂದು. ಆಗ ಅವರು ನೀವು ಇಲ್ವಲ್ಲ ಇದರಲ್ಲಿ ಯಾಕೆ ಹೆದರಿ ಕೊಳ್ತೀರಿ ಎಂದು ಹೇಳಿ ಸಮಾಧಾನ ಮಾಡಿದರು. ಆಮೇಲೆ ಅರ್ಧ ಗಂಟೆಯಲ್ಲಿ ಸತ್ಯಜಿತ್‌ ಸುರತ್ಕಲ್‌ ಮತ್ತೆ ಫೋನ್‌ ಮಾಡ್ತಾರೆ. ಇದರಲ್ಲಿ ನೀವಿಲ್ಲ ಯಾರೋ ಒಬ್ಬರು ಅಭಿನವ ಹಾಲಶ್ರೀ ಸ್ವಾಮೀಜಿಯಂತೆ, ಅವರ ಹೆಸರು ಇದ್ಯಂತೆ ಎಂದು ಹೇಳಿದರು. ಅಲ್ಲಿಗೆ ಅದು ಮುಗಿಯಿತು.

ಅಭಿನವ ಹಾಲಶ್ರೀ ಸ್ವಾಮೀಜಿ

ನಾನು ನಂತರ ಕಾಲ್‌ ಮಾಡಿದ್ದು ಚಕ್ರವರ್ತಿ ಸೂಲಿಬೆಲೆಗೆ

ಸತ್ಯಜಿತ್‌ ಸುರತ್ಕಲ್‌ ಅಭಿನವ ಹಾಲಶ್ರೀ ಹೆಸರು ಹೇಳಿದಾಗ ನನಗೆ ಈ ಹಿಂದೆ ಅಭಿನವ ಹಾಲಶ್ರೀಗಳು ಹೇಳಿದ ಮಾತು ನೆನಪಾಯಿತು. ನಾನು ಕೂಡಲೇ ಚಕ್ರವರ್ತಿ ಸೂಲಿಬೆಲೆಯವರಿಗೆ ಫೋನ್‌ ಮಾಡಿದೆ. ಅವರ ಆಪ್ತ ಸಹಾಯಕರು ಎತ್ತಿದರು. ಅವರಿಲ್ಲ, ಪ್ರೋಗ್ರಾಂನಲ್ಲಿದ್ದಾರೆ ಎಂದು ಹೇಳಿದರು. ನನಗೆ ಸಿಟ್ಟು ಬಂದು ಬೈದೆ. ಆಗ ಅವರು ಚಕ್ರವರ್ತಿ ಸೂಲಿಬೆಲೆಯವರಿಗೆ ಫೋನ್‌ ಕೊಟ್ರು.

ಚಕ್ರವರ್ತಿಯವರೇ ವಂಚನೆ ಪ್ರಕರಣವೊಂದರಲ್ಲಿ ಅಭಿನವ ಹಾಲಸ್ವಾಮಿಗಳ ಹೆಸರು ಥಳುಕು ಹಾಕಿಕೊಂಡಿದೆ. ಇದು ಮುಂದೆ ನಿಮಗೂ ತೊಂದರೆಯಾಗಬಹುದು, ಹೀಗಾಗಿ ನೀವು ಇದು ಏನು ಎಂದು ವಿಚಾರಿಸಿ ಸರಿ ಮಾಡುವುದು ಒಳ್ಳೆಯದು ಎಂದು ಹೇಳಿದೆ. ಆಗ ಅವರು, ನಾನು ಈ ಬಗ್ಗೆ ಒಂದು ಸುತ್ತಿನ ಮಾತುಕತೆಯನ್ನು ಆಗಲೇ ಮಾಡಿದ್ದೇನೆ, ಸಿ.ಟಿ. ರವಿಯವರ ಗಮನಕ್ಕೂ ತಂದಿದ್ದೇನೆ. ಈ ವಿಷಯ ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ನೀವು ಒಂದು ಕೆಲಸ ಮಾಡಿ, ನಿಮಗೆ ಚೈತ್ರಾ ಕುಂದಾಪುರ ಪರಿಚಯ ಇದ್ದರೆ, ನೀವು ಅವಳಲ್ಲಿ ಮಾತನಾಡಿ, ವಿಷಯ ಏನೂ ಅಂತ ವಿಚಾರಿಸಿ ಎಂದು ನನಗೆ ಸಲಹೆ ನೀಡಿದರು.

ಇದನ್ನೂ ಓದಿ: Chaitra Kundapura : ಅಬ್ಬಬ್ಬಾ… ಗೋವಿಂದ ಪೂಜಾರಿಯೇ ವಂಚಕ ಎಂದು ಬಿಂಬಿಸಲು ಕ್ರಿಮಿನಲ್‌ ಐಡಿಯಾ; ITಗೆ ದೂರು

ಹಾಗೆ ನಾನು ಚೈತ್ರಾ ಕುಂದಾಪುರಕ್ಕೆ ಕರೆ ಮಾಡಿದ್ದು ಜುಲೈ 29ರಂದು

ನಾನು ಫೋನ್‌ ಮಾಡಿದ ಒಂದೇ ರಿಂಗ್‌ನಲ್ಲಿ ಚೈತ್ರಾ ಕುಂದಾಪುರ ಫೋನ್‌ ಎತ್ತಿಕೊಳ್ತಾರೆ. ನೋಡಮ್ಮಾ ಗೋವಿಂದ ಬಾಬು ಪೂಜಾರಿಯವರ ಹಣದ ವಿಷಯದಲ್ಲಿ ನಿನ್ನ ಹೆಸರು ಥಳುಕು ಹಾಕಿಕೊಂಡಿದೆ. ಇದೇನೋ ಒಂದು ದೊಡ್ಡ ಗೋಲ್‌ ಮಾಲ್‌ ಅಂತ ನನಗೆ ಅನಿಸ್ತಾ ಇದೆ. ಏನು ಸತ್ಯ ಇದ್ರೂ ನೀನು ನಮ್ಮಲ್ಲಿ ಹೇಳು, ಇದನ್ನು ಏನು ಅಂತ ವಿಚಾರಿಸೋಣ. ಯಾಕೆಂದರೆ ನನ್ನ ಹೆಸರು ಕೂಡಾ ಇದರಲ್ಲಿ ಥಳುಕು ಹಾಕಿಕೊಂಡಿದೆ ಎಂದು ಹೇಳಿದೆ.

ಚೈತ್ರಾ ಹೇಳಿದ ಮನೆ ಗೃಹಪ್ರವೇಶ ಕಾರ್ಯಕ್ರಮ. ಇದರಲ್ಲಿ ವಿನಯ ಗುರೂಜಿ, ಹಾಲಶ್ರೀ ಸ್ವಾಮೀಜಿ ಇದ್ದರು.

ಆಗ ಚೈತ್ರಾ ಕುಂದಾಪುರ, ಇಲ್ಲ ಸ್ವಾಮೀಜಿ, ಇದು ಏನೂ ನನಗೆ ಗೊತ್ತಿಲ್ಲ. ಅವರು ಯಾರಿಗೆ ಹಣ ಕೊಟ್ಟಿದ್ದಾರೆ, ಯಾರ ಜತೆ ವ್ಯವಹಾರ ಮಾಡಿದ್ದಾರೆ ಎನ್ನುವುದು ಒಂದೂ ಗೊತ್ತಿಲ್ಲ ಎಂದರು. ಆಗ ನಾನು ʻನಿನ್ನ ಹೆಸರು ಇದರಲ್ಲಿ ಹೇಗೆ ಬಂತುʼ ಎಂದು ಕೇಳಿದೆ. ಅದಕ್ಕೆ ಆಕೆ ʻʻಒಮ್ಮೆ ಗೋವಿಂದ ಪೂಜಾರಿ ಅವರು ಮನೆ ಗೃಹ ಪ್ರವೇಶಕ್ಕೆ ಒಬ್ಬ ಸ್ವಾಮೀಜಿ ಬೇಕು ಎಂದು ಕೇಳಿದ್ದರು. ನಂಗೆ ಹಾಲಶ್ರೀ ಸ್ವಾಮೀಜಿಗಳ ಪರಿಚಯ ಇದ್ದಿದ್ದರಿಂದ ಅವರನ್ನು ಶಿಫಾರಸು ಮಾಡಿದ್ದೆ. ಅವರ ಫೋನ್‌ ನಂಬರ್‌ ಕೊಟ್ಟು ಅವರ ಕಾಂಟಾಕ್ಟ್‌ ಮಾಡಿಸಿದೆ. ಹಾಗೆ ಗೋವಿಂದ ಬಾಬು ಪೂಜಾರಿ ಅವರಿಗೂ ಸ್ವಾಮೀಜಿಗೂ ನಂಟಿದೆ. ಅವರೊಳಗೆ ಏನು ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲʼʼ ಎಂದು ಹೇಳಿದಳು. ನನಗೆ ಒಂದೂ ವಿಷಯ ಗೊತ್ತಿಲ್ಲ ಎಂದು ಹೇಳಿದಳು. ನಾನು ಮತ್ತೆ ಮತ್ತೆ ಒತ್ತಾಯ ಮಾಡಿ ಕೇಳಿದೆ. ಏನಾದರೂ ವಿಷಯ ಇದ್ರೆ ಹೇಳು ಎಂದಾಗ, ಅದು ಏನೋ ಇಂದಿರಾ ಕ್ಯಾಂಟೀನ್‌ ಬಿಲ್‌ ಗೊಂದಲಗಳಿಗಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ 150 ಇಂದಿರಾ ಕ್ಯಾಂಟೀನ್‌ ಇದೆ ಎಂದೆಲ್ಲ ಹೇಳಿದರು.

ನಂತರ ಆಕೆಯ ಬಂಧನವಾದಾಗಲೇ ನನಗೆ ಇದು ಇಷ್ಟು ತೀವ್ರತೆ ಪಡೆದದ್ದು ಗೊತ್ತಾಗಿದ್ದು. ಹಣದ ವಿಚಾರದಲ್ಲಿ ನನಗೇನೂ ಗೊತ್ತಿಲ್ಲ, ಚೈತ್ರಾಳ ಪರಿಚಯ ಇದ್ದುದು ಹೌದು. ಹಾಗಂತ, ಆಕೆಯ ಜೊತೆಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Exit mobile version