Site icon Vistara News

Cracker Blast : ಪಟಾಕಿ ಗೋಡೌನ್‌ ಮಾಲೀಕ ಬಶೀರ್‌ ಅರೆಸ್ಟ್‌; ಸ್ಫೋಟದ ಹಿಂದಿದ್ಯಾ ಸಂಚು?

Cracker Blast Accused Basheer

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಬೆಳ್ತಂಗಡಿ ತಾಲೂಕಿನ ವೇಣೂರಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿರುವ ಸಾಲಿಡ್ ಫೈರ್ ವರ್ಕ್ಸ್ ಪಟಾಕಿ ಕಾರ್ಖಾನೆಯಲ್ಲಿ (Solid Fire Works Crackers factory) ಸಂಭವಿಸಿರುವ ಸ್ಫೋಟ (Cracker Blast) ಮೂವರನ್ನು ಬಲಿ ಪಡೆದಿದೆ. ಈ ನಡುವೆ, ಪೊಲೀಸರು ಈ ಕಾರ್ಖಾನೆಯ ಮಾಲೀಕ ಬಶೀರ್‌ ಎಂಬಾತನನ್ನು ಬಂಧಿಸಿದ್ದಾರೆ (Basheer Arrested). ಈ ಸ್ಫೋಟ ನಿಜಕ್ಕೂ ಒಂದು ಪಟಾಕಿ ಸ್ಫೋಟವೇ ಅಥವಾ ಇದರ ಹಿಂದೆ ಬೇರೇನಾದರೂ ಸಂಚು ಇದೆಯೇ ಎನ್ನುವ ಗುಮಾನಿಯೂ ಇದ್ದು, ತನಿಖೆ ನಡೆಯುತ್ತಿದೆ.

ಸಾಲಿಡ್‌ ಫೈರ್‌ ವರ್ಕ್ಸ್‌ನಲ್ಲಿ ಭಾನುವಾರ ಸಂಜೆ ಏಕಾಏಕಿ ಸ್ಪೋಟ ಸಂಭವಿಸಿದ್ದು ಕೇರಳದ ಸ್ವಾಮಿ (55), ಕೇರಳದ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಮೃತಪಟ್ಟಿದ್ದಾರೆ. ಸ್ವಾಮಿ ಹಾಗೂ ಚೇತನ್ ಸ್ಥಳದಲ್ಲೇ ಅಸುನೀಗಿದ್ದರೆ, ವರ್ಗೀಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಹಾಗೂ ಕೇರಳದ ಪ್ರೇಮ್, ಕೇಶವ ಎಂಬವರು ಗಾಯಗೊಂಡಿದ್ದಾರೆ. ಚಿಕಿತ್ಸೆ‌ ಪಡೆಯುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: Blast in Stone Crusher : ಬಂಡೆ ಬ್ಲಾಸ್ಟ್‌ ವೇಳೆ ಅವಘಡ; ಸಿಡಿದು ಚೂರಾದ ಇಬ್ಬರು ಕಾರ್ಮಿಕರು

Cracker Blast : ಸ್ಫೋಟ ಸ್ಥಳ ಪರಿಶೀಲಿಸಿದ‌ ಎಸ್ಪಿ, ಸಮಗ್ರ ತನಿಖೆ ಭರವಸೆ

ವೇಣೂರು ಬಳಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಹೇಳಿಕೆ ನೀಡಿರುವ ಅವರು, ಸಯ್ಯದ್‌ ಬಶೀರ್‌ ಎಂಬವರು 50 ಸೆನ್ಸ್ ಜಾಗದಲ್ಲಿ ಪಟಾಕಿ ಕಾರ್ಖಾನೆ ಮಾಡಲು ಲೈಸೆನ್ಸ್ ಪಡೆದಿದ್ದರು. 2011-2012ರಲ್ಲಿ ಪಡೆದ ಲೈಸೆನ್ಸ್‌ 2019ರಲ್ಲೂ ನವೀಕರಣಗೊಂಡಿದೆ. ಅದು 2024ರ ಮಾರ್ಚ್ ವರೆಗೂ ಚಾಲ್ತಿಯಲ್ಲಿದೆ. ಇಲ್ಲಿ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪಟಾಕಿ ಉತ್ಪಾದನೆ ಮಾಡಲಾಗುತ್ತಿತ್ತು. ಇದೇ ರೀತಿ ಪಟಾಕಿ ತಯಾರಿ ನಡೆಯುತ್ತಿತ್ತು. ಪಟಾಕಿ ತಯಾರಿ ಮಾಡುವಾಗ ಯಾವ ಕಾರಣಕ್ಕೆ ಬ್ಲಾಸ್ಟ್ ಆಗಿದೆ ಅನ್ನುವುದು ಗೊತ್ತಾಗಿಲ್ಲ. ಮೊಬೈಲ್ ಫೊರೆನ್ಸಿಕ್ ಟೀಮ್, ಸ್ಫೋಟಕ ಪರೀಕ್ಷಾ ತಂಡ ಆಗಮಿಸಿ ತನಿಖೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

Cracker Blast Accused Basheer1

ಬಶೀರ್‌ ಅವರು ಆರ್ಡರ್ ಪೂರೈಸಲು ಪಟಾಕಿ ತಯಾರಿಸುತ್ತಿದ್ದರು. ಒಂದು ಕಡೆ ತಯಾರಿ ಮಾಡಿ, ಮತ್ತೊಂದು ಕಡೆ ಶೇಖರಣೆ ಮಾಡುತ್ತಿದ್ದರು. ಮೈಸೂರಿನ ಆರ್ಡರ್‌ಗಾಗಿ ದೊಡ್ಡ ಸೈಜ್ ಪಟಾಕಿ ಮಾಡುತ್ತಿದ್ದರು. ಆದರೆ, ಯಾವುದೇ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಕ್ಕದ ಮನೆಯವರಿಂದ ಕಂಪ್ಲೇಂಟ್ ತೆಗೆದುಕೊಂಡಿದ್ದೇವೆ ಹಾಗೂ ಸಾವನ್ನಪ್ಪಿದ ಕುಟುಂಬದವರಿಗೂ ಮಾಹಿತಿ ಪಡೆಯಲಾಗಿದೆ. ದೇಹ ಛಿದ್ರವಾಗಿರುವ ಕಾರಣ ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

Cracker Blast : ಎನ್‌ಐಎ ತನಿಖೆಗೆ ಸಂಸದ ನಳಿನ್‌ ಕುಮಾರ್‌ ಆಗ್ರಹ

ವೇಣೂರಿನ ಗೋಳಿಯಂಗಡಿಯಲ್ಲಿ ನಡೆದ ಪಟಾಕಿ ಸ್ಫೋಟ ಪ್ರಕರಣದ ಘಟನಾ ಸ್ಥಳಕ್ಕೆ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ. ಸ್ಫೋಟಗೊಂಡ ಸ್ಥಳ, ಹಾನಿಗೊಳಗಾದ ಮನೆ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಸ್ಫೋಟದ ಹಿಂದೆ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಿದರು.

ಈ ಘಟನೆಗೆ ಕಾರಣ ಏನು ಎಂಬುವುದರ ಬಗ್ಗೆ ಗಂಭೀರ ತನಿಖೆ ನಡೆಯಬೇಕು, ಪರವಾನಗಿ ನೀಡಿದ್ದರ ಬಗ್ಗೆ ಸರ್ಕಾರ ಗಂಭೀರ ತನಿಖೆಯನ್ನು ಮಾಡಬೇಕು. ಸ್ಫೋಟದ ತೀವ್ರತೆ ಹಲವು ಅನುಮಾನಗಳನ್ನು ಸೃಷ್ಟಿಸಿದ್ದು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ದೊಡ್ಡ ದಾದ ಸ್ಫೋಟಕ ವಸ್ತುಗಳ ಸ್ಫೋಟವಾಗಿದೆ. ಹೀಗಾಗಿ ಸ್ಥಳೀಯ ಮನೆಗಳಿಗೆ ಸರ್ಕಾರ ಸಂಪೂರ್ಣ ಪರಿಹಾರ ಕೊಡಬೇಕು ಮತ್ತು ಬಲಿಯಾದ ಕಾರ್ಮಿಕ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡಬೇಕು ಒತ್ತಾಯಿಸಿದ್ದಾರೆ. ಈ ವೇಳೆ ಗ್ರಾಮದ ಜನರು ಸಂಸದರ ಬಳಿ ಸ್ಪೋಟದ ತೀವೃತೆ ಹಾಗೂ ಗೋಡೌನ್‌ನಲ್ಲಿ ನಡೆಯುತ್ತಿರುವ ರೀತಿಯ ಬಗ್ಗೆ ತಮ್ಮ‌ ಅನುಮಾನ ವ್ಯಕ್ತಪಡಿಸಿದ್ದಾರೆ.

Exit mobile version