ಬೆಂಗಳೂರು: ಮಂಗಳೂರಿನ ನಾಗುರಿ ಬಳಿ ನವೆಂಬರ್ 19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಹಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ, ರಾಜ್ಯ ಸರ್ಕಾರವು ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ನಿರ್ಧಾರ ಮಾಡುವ ಒಂದು ದಿನ ಮೊದಲೇ ಕೇಂದ್ರ ಗೃಹ ಇಲಾಖೆ ನಿರ್ಧಾರ ಕೈಗೊಂಡು ಆಗಿತ್ತು ಎನ್ನುವ ವಿಚಾರ ಬಹಿರಂಗವಾಗಿದೆ.
ಸ್ಫೋಟ ಸಂಭವಿಸಿದ ನಂತರದಲ್ಲಿ ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು. ನವೆಂಬರ್ 20ರಂದು ಎಫ್‌ಐಆರ್ ದಾಖಲಾಗಿತ್ತು. ಕುಕ್ಕರ್ ಬಾಂಬ್ ಅನ್ನು ಒಯ್ಯುತ್ತಿದ್ದ ಶಾರಿಕ್‌ನನ್ನು ಪತ್ತೆ ಹಚ್ಚಿ, ಆತನ ಹಿನ್ನೆಲೆಯನ್ನೂ ರಾಜ್ಯ ಪೊಲೀಸರು ಬಯಲಿಗೆಳೆದಿದ್ದರು. ಇದು ಸಾಮಾನ್ಯ ಸ್ಫೋಟ ಅಲ್ಲ, ಭಯೋತ್ಪಾದಕ ಚಟುವಟಿಕೆ ಎನ್ನುವುದನ್ನು ಖಚಿತಪಡಿಸಿದ್ದರು.
ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂಬ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಎನ್‌ಐಎಗೆ ವಹಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದಿದ್ದರು. ಇದೀಗ ಕೇಂದ್ರ ಗೃಹ ಸಚಿವಾಲಯದ ಆದೇಶ ಪತ್ರ ಲಭ್ಯವಾಗಿದ್ದು, ಅದು ನವೆಂಬರ್ 23ರ ದಿನಾಂಕವನ್ನು ಹೊಂದಿದೆ.
ಅಂದರೆ ರಾಜ್ಯ ಸರ್ಕಾರ ಶಿಫಾರಸು ಮಾಡುವ ಒಂದು ದಿನ ಮೊದಲೇ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ಆದೇಶದಲ್ಲಿ ತಿಳಿಸಿರುವಂತೆ, ನವೆಂಬರ್ 20ರಂದು ಸ್ಫೋಟದ ಕುರಿತು ಎಫ್‌ಐಆರ್ ದಾಖಲಾಗಿರುವ ವಿಚಾರ ತಿಳಿದು ಬಂದಿತು.
ನಂತರ ಸ್ಥಳೀಯ ಪೊಲೀಸರ ತನಿಖೆ ವೇಳೆ, ಸ್ಫೋಟಕ್ಕೆ ಬಳಸಿದ ವಸ್ತುಗಳು ಮತ್ತು ಆರೋಪಿಗಳ ಮಾಹಿತಿ ಲಭ್ಯವಾಗಿದೆ. ಇದೆಲ್ಲವನ್ನೂ ನೋಡಿದಾಗ, ಈ ಅಪರಾಧದ ತೀವ್ರತೆಯು ದೇಶದ ಭದ್ರತೆಗೆ ಅಪಾಯಕಾರಿಯಾದದ್ದು ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಆಗಿದೆ.
ಈ ಪ್ರಕರಣವು ರಾಷ್ಟ್ರೀಯ ತನಿಖಾ ದಳ ಕಾಯ್ದೆ 2008ರ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯಕ್ಕೆ ಬರಲಾಗಿದ್ದು, ಈ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಭಯೋತ್ಪಾದಕ ನಿಗ್ರಹ ಮತ್ತು ಮೂಲಭೂತವಾದಿ ಚಟುವಟಿಕೆ ನಿಗ್ರಹ (CTCR) ವಿಭಾಗ ಆದೇಶದಲ್ಲಿ ತಿಳಿಸಿದೆ.
ಇಡೀ ಆದೇಶ ಪತ್ರದಲ್ಲಿ ಎಲ್ಲಿಯೂ ರಾಜ್ಯ ಸರ್ಕಾರದ ಶಿಫಾರಸಿನ ಕುರಿತು ನಮೂದು ಮಾಡಲಾಗಿಲ್ಲ. ಅಲ್ಲಿಗೆ, ಈ ಪ್ರಕರಣವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಸರ್ಕಾರದ ಶಿಫಾರಸಿಗೂ ಕಾಯ್ದೆ, ದೇಶದ ಭದ್ರತೆಯನ್ನು ಮನಗಂಡು ಎನ್‌ಐಎಗೆ ವಹಿಸಿದೆ ಎನ್ನುವ ವಿಚಾರ ಬಹಿರಂಗವಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕದ್ರಿ ದೇವಸ್ಥಾನವೇ ಉಗ್ರರ ಟಾರ್ಗೆಟ್: ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು