ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಭೇಟಿ ನೀಡಿದ ವೇಳೆ ಭಕ್ತರು ಜೈಶ್ರೀರಾಮ್ (Jai Shreeram), ಮೋದಿ ಕೀ ಜೈ, ಅಬ್ ಕೀ ಬಾರ್ ಮೋದಿ ಸರ್ಕಾರ್, ಭಾರತ್ ಮಾತಾಕೀ ಜೈ ಘೋಷಣೆಯನ್ನು ಕೂಗಿದ್ದಾರೆ. ಏಕಾಏಕಿ ಭಕ್ತರು ಹೀಗೆ ಕೂಗಿದ್ದರಿಂದ ಸಿಎಂ ಹಾಗೂ ಡಿಸಿಎಂಗೆ ಕಸಿವಿಸಿಯಾದರೂ ತೋರಿಸಿಕೊಳ್ಳದೇ ಶಾಂತಚಿತ್ತದಿಂದ ಶ್ರೀ ಮಂಜುನಾಥನ ದರ್ಶನಕ್ಕೆ ತೆರಳಿದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧವನ್ನು ವಿಧಿಸಲಾಗಿತ್ತು. ಮೊದಲೇ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ಮತ್ತೆ ಕಾಯುವುದು ಶಿಕ್ಷೆಯಾಗಿ ಪರಿಣಮಿಸಿತು. ಸಿಎಂ, ಡಿಸಿಎಂ ಬರಲು ಸಾಕಷ್ಟು ಸಮಯ ಇದ್ದರೂ ಅವಧಿಗೆ ಮುನ್ನವೇ ಭಕ್ತರನ್ನು ತಡೆಯಲಾಗಿತ್ತು.
ಕಾದು ಕಾದು ಸುಸ್ತಾಗಿದ್ದ ಭಕ್ತರ ಸಿಟ್ಟು ನೆತ್ತಿಗೇರಿತ್ತು. ರಾಜಕಾರಣಿಗಳ ಕಾರಣದಿಂದಾಗಿ ದೇವರ ದರ್ಶನಕ್ಕೂ ಇಷ್ಟು ಕಾಯಬೇಕಲ್ಲ ಎಂದು ಹಿಡಿಶಾಪ ಹಾಕಿದರು. ಅದಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಲಿನಲ್ಲಿ ನಿಂತು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಹೀಗಾಗಿ ಸಿಎಂ ಹಾಗೂ ಪೊಲೀಸ್ ಇಲಾಖೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
ಸಿಎಂಗೆ ಪೂರ್ಣಕುಂಭ ಸ್ವಾಗತ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಧರ್ಮಸ್ಥಳದ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಸಿಕ್ಕಿತು. ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪರವಾಗಿ ಧರ್ಮಸ್ಥಳ ಧರ್ಮದರ್ಶಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು.
ಜೈ ಶ್ರೀರಾಮ್ ಘೋಷಣೆ
ಈ ವೇಳೆ ಮುಖ್ಯ ದ್ವಾರದಿಂದ ನಡೆದುಕೊಂಡೇ ದೇವಸ್ಥಾನ ಪ್ರವೇಶಿಸಿದ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಕಂಡ ಭಕ್ತರು ತೀವ್ರ ಅಸಹನೆಯನ್ನು ಹೊಂದಿದ್ದರು. ಹೀಗಾಗಿ ಕೆಲವರು ಇದೇ ವೇಳೆ ಜೈ ಶ್ರೀರಾಮ್ ಘೋಷಣೆಯನ್ನು ಕೂಗಿದರು. ಇನ್ನೂ ಕೆಲವರು ಮೋದಿ ಕೀ ಜೈ, ಭಾರತ್ ಮಾತಾಕೀ ಜೈ, ಅಬ್ ಕೀ ಬಾರ್ ಮೋದಿ ಸರ್ಕಾರ್ ಘೋಷಣೆ ಕೂಗಿದರು.
ವಿಶೇಷ ಪೂಜೆ, ಡಾ. ವೀರೇಂದ್ರ ಹೆಗ್ಗಡೆ ಭೇಟಿ
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದರು.
ಶಕ್ತಿ ಯೋಜನೆಯಿಂದ ಭಕ್ತರ ಸಂಖ್ಯೆ ಹೆಚ್ಚಳ; ಡಾ. ವೀರೇಂದ್ರ ಹೆಗ್ಗಡೆ ಹರ್ಷ: ಡಿಕೆ ಶಿವಕುಮಾರ್
“ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಧರ್ಮಸ್ಥಳ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥನ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Harish Poonja: ಪೊಲೀಸರಿಗೆ ಧಮ್ಕಿ ಕೇಸ್; ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಆರೋಪ ಸುಳ್ಳಾ: FIR ಸಮರ್ಥಿಸಿಕೊಂಡ ಸಿಎಂ
ದೇವರ ದರ್ಶನದ ವೇಳೆ ಅನೇಕ ಮಹಿಳಾ ಭಕ್ತಾಧಿಗಳು ತಮಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಬರುತ್ತಿದೆ ಎಂದು ಸಂತೋಷ ಹಂಚಿಕೊಂಡರು. ಅವರ ಪ್ರಾರ್ಥನೆ ಹಾಗೂ ಆಶೀರ್ವಾದ ನಮಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಅವರ ಮನೆಯಲ್ಲಿ ಗೃಹ ಜ್ಯೋತಿ ಬೆಳಗುತ್ತಿದೆ. ಅನ್ನಭಾಗ್ಯ ಸಿಗುತ್ತಿದೆ. ಈ ಯೋಜನೆಗಳನ್ನು ಜಾರಿ ಮಾಡಿರುವುದಕ್ಕೆ ಮಂಜುನಾಥ ನಮಗೆ ಆಶೀರ್ವಾದ ಮಾಡಲಿದ್ದಾನೆ ಎಂದು ನಂಬಿದ್ದೇನೆ ಎಂಬುದಾಗಿ ಡಿ.ಕೆ. ಶಿವಕುಮಾರ್ ಹೇಳಿದರು.