Site icon Vistara News

Dharma Dangal : ಜಾತ್ರೆಗಳಲ್ಲಿ ವ್ಯಾಪಾರ ದಂಗಲ್‌; ಹಿಂದುಪರ, ಮುಸ್ಲಿಂ ಪರ ಕದನಕ್ಕೆ ಸಂಘಟನೆಗಳು ರೆಡಿ

Jatre festival trade war

ಮಂಗಳೂರು: ರಾಜ್ಯದಲ್ಲಿ ಹಿಂದು ದೇವಸ್ಥಾನಗಳ (Hindu Temples) ಜಾತ್ರೆ ಸಂದರ್ಭ (Jatra Festival) ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು (Opposition for trading) ಎಂಬ ವ್ಯಾಪಾರ ದಂಗಲ್‌ (Dharma Dangal) ಈ ಬಾರಿ ವಿಪರೀತಕ್ಕೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಮಳೆಗಾಲ ಕಳೆದು ರಾಜ್ಯದಲ್ಲಿ ಜಾತ್ರೆಗಳ ಸೀಸನ್‌ ಶುರುವಾಗಲಿದೆ. ಈ ಹಂತದಲ್ಲಿ ಜಾತ್ರೆಗಳಲ್ಲಿ ಕೇವಲ ಹಿಂದು ವ್ಯಾಪಾರಿಗಳಿಗೆ (Hindu Traders) ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸುವ ಒಂದು ವ್ಯಾಪಾರಿ ಒಕ್ಕೂಟ ಅಸ್ತಿತ್ವಕ್ಕೆ (Hindu Traders association) ಬಂದಿದ್ದರೆ ಇನ್ನೊಂದು ಕಡೆ ಸೌಹಾರ್ದತೆ ನೆಲೆಯಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸುವ ಇನ್ನೊಂದು ಸಂಘಟನೆ ಸಕ್ರಿಯವಾಗಿದೆ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ವ್ಯಾಪಾರ ದಂಗಲ್‌ ಯಾವ ಸ್ವರೂಪವನ್ನು ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ. ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ವರ್ಸಸ್ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಮಧ್ಯೆ ಫೈಟ್ ಶುರುವಾಗಿದೆ‌. ಈ ಬಾರಿ ಕೆಲ ಹಿಂದೂ ವ್ಯಾಪಾರಿಗಳು ಪ್ರತ್ಯೇಕ ಸಂಘಟನೆ ಕಟ್ಟಿದ್ದರಿಂದ ಇದಕ್ಕೆ ಕೌಂಟರ್ ಕೊಡಲು ಉಭಯ ಜಿಲ್ಲೆಗಳ ಜಾತ್ರಾ ವ್ಯಾಪಾರ ಸಮನ್ವಯ ಸಮಿತಿ ಸಿದ್ಧವಾಗಿದೆ.

ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ

ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಎಂಬ ಹೆಸರಿನಲ್ಲಿ ಅಧಿಕೃತ ಸಂಘಟನೆ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದು, ಜಾತ್ರೆಗಳಲ್ಲಿ ಯಾವ ಕಾರಣಕ್ಕೂ ಹಿಂದುಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಸಂಘದ ಗೌರವಾಧ್ಯಕ್ಷ ಮಹೇಶ್ ದಾಸ್ ಅವರು ಈ ವಿಚಾರ ತಿಳಿಸಿದರು.

ಹೊಸ ಸಂಘಟನೆಯ ಬೇಡಿಕೆ, ನಿರ್ಧಾರಗಳೇನು?

  1. ರಾಜ್ಯದಲ್ಲಿ 1.27 ಲಕ್ಷ ಹಿಂದೂ ಮಾರಾಟಗಾರರಿದ್ದು, ಇವರು ದೇವಸ್ಥಾನಗಳ ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ಹಾಕುತ್ತಾರೆ.
  2. ದೇವಸ್ಥಾನಗಳ ಜಾತ್ರೆಗಳಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ಸ್ಥಾಪಿಸಲು ಅನುಮತಿ ನೀಡಬೇಕು.
  3. ಈ ಬಗ್ಗೆ ಸರ್ಕಾರ ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು.
  4. ಸ್ಟಾಲ್‌ಗಳನ್ನು ವಿತರಿಸಲು ಸಾರ್ವಜನಿಕ ಹರಾಜು ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕು.
  5. ಧಾರ್ಮಿಕ ದತ್ತಿ ಅಧಿನಿಯಮ 33ರಡಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎನ್ನುವುದು ಸಂಘಟನೆ ಆಗ್ರಹ.

ಕೆಲವೇ ದಿನಗಳಲ್ಲಿ ಉದ್ಘಾಟನೆ ಸಾಧ್ಯತೆ

ರಾಜ್ಯದಲ್ಲಿರುವ 1.27 ಲಕ್ಷ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಅವರ ಪೈಕಿ ಈಗಾಗಲೇ ಒಂದು ಸಾವಿರ ವ್ಯಾಪಾರಿಗಳನ್ನು ಸೇರಿಸಿಕೊಂಡು ಈ ಹೊಸ ಸಂಘವನ್ನು ರಚಿಸಲಾಗಿದೆ. ಕೆಲವೇ ದಿನಗಳಲ್ಲಿ ಪ್ರಮುಖ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದು ಹೇಳಲಾಗಿದೆ.

ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದಲೂ ಹೋರಾಟ

ಈ ನಡುವೆ ದ.ಕ ಮತ್ತು ಉಡುಪಿ ಜಿಲ್ಲೆಗಳ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯೂ ಅಸ್ತಿತ್ವ ಪಡೆದುಕೊಂಡಿದ್ದು, ಜಾತ್ರೆಗಳಲ್ಲಿ ವ್ಯಾಪಾರಕ್ಕೆ ತೊಂದರೆ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ‌.

ಸಮಿತಿಯ ಗೌರವಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮತ್ತು ಬಿ ಕೆ ಇಮ್ತಿಯಾಜ್ ಅವರು, ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಬೀದಿ ಬದಿ ವ್ಯಾಪಾರ ನಿಯಮ 2019ರಡಿ ಅನುಮತಿ ನೀಡಬೇಕು. ಕೆಲವು ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಮಾಡುವ ಮೂಲಕ ಗಲಾಟೆ ಸೃಷ್ಟಿಸುತ್ತಿದೆ ಅಂತ ದೂರಿದೆ.

ಸಮನ್ವಯ ಸಮಿತಿ ಬೇಡಿಕೆಗಳೇನು?

  1. ಮುಂದಿನ ತಿಂಗಳಿನಿಂದ ಕರಾವಳಿಯಲ್ಲಿ ಜಾತ್ರೋತ್ಸವಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಜಾತ್ರಾ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು.
  2. ಹಬ್ಬ-ಹರಿದಿನಗಳಲ್ಲಿ ದೇಗುಲಗಳ ಬಳ ಎಲ್ಲಾ ಧರ್ಮದ ಬಡ ವ್ಯಾಪಾರಿಗಳಿಗೆ ಜಾತಿ-ಧರ್ಮದ ಬೇಧವಿಲ್ಲದೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕು.
  3. ಧರ್ಮದ ಆಧಾರದ ಮೇಲೆ ವ್ಯಾಪಾರಿಗಳನ್ನು ನಿಷೇಧಿಸಿದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ.

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಲವು ಕಡೆ ದೇವಸ್ಥಾನಗಳ ಜಾತ್ರೆ ಸಂದರ್ಭ ಇತರ ಧರ್ಮದ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂದು ಬ್ಯಾನರ್‌ ಹಾಕುವ, ದೇವಸ್ಥಾನದ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಯಾವುದೇ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ಈ ಬಾರಿ ಏನಾಗಲಿದೆ ಎಂಬ ಕುತೂಹಲ ಹುಟ್ಟಿಕೊಂಡಿದೆ.

Exit mobile version