ಮಂಗಳೂರು: ಸೆಪ್ಟೆಂಬರ್ 28ರಂದು ನಡೆಯಲಿರುವ ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ((Eid Milad) ಹಬ್ಬದಂದು ಮೀನು ವ್ಯಾಪಾರಕ್ಕೆ (Fish trading) ಕಡ್ಡಾಯ ರಜೆ ಘೋಷಣೆ (Compulsory Holiday) ಮಾಡಿದ ಕ್ರಮದ ವಿರುದ್ಧ (Eid milad holiday) ಮಂಗಳೂರಿನಲ್ಲಿ ಹಿಂದು ಸಂಘಟನೆಗಳ (Hindu organizations in Mangalore) ಆಕ್ರೋಶ ಭುಗಿಲೆದ್ದಿದೆ.
ಮಂಗಳೂರಿನ ಮೀನುಗಾರಿಕೆ ಧಕ್ಕೆಯಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಒಂದು ಬ್ಯಾನರ್ ಹಾಕಲಾಗಿದ್ದು, ಅದರಲ್ಲಿ ಈದ್ ಮಿಲಾದ್ ದಿನದಂದು ಯಾರು ಸಹ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಗಿದೆ. ಜತೆಗೆ ವ್ಯಾಪಾರ ಮಾಡಿದರೆ ಒಂದು ತಿಂಗಳ ಕಾಲ ವ್ಯಾಪಾರ ಬಹಿಷ್ಕಾರ ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕಡ್ಡಾಯ ರಜೆ, ನಿಷೇಧ, ದಂಡನೆ: ಏನಿದೆ ಬ್ಯಾನರ್‌ನಲ್ಲಿ?
ಹಸಿ ಮೀನು ವ್ಯಾಪಾರಿಗಳ ಗಮನಕ್ಕೆ, ಮುಂಬರುವ ಈದ್ ಮಿಲಾದ್ ರಜೆಯ ಬಗ್ಗೆ ಸೂಚನೆ. ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ 28.09. 2023ರ ಮುಂಜಾನೆ ಗಂಟೆ 3.45ರ ನಂತರ ಹಸಿ ಮೀನು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ಮಾಡಬೇಕು. ರಜೆ ಮಾಡದೆ ಕಾನೂನನ್ನು ಉಲ್ಲಂಘಿಸಿದಲ್ಲಿ 1 ತಿಂಗಳ ಕಾಲ ವ್ಯಕ್ತಿಯು ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಸಂಘವು ಕಾನೂನು ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ದಂಡನೆ ವಿಧಿಸಬೇಕಾಗುತ್ತದೆ. ಹಾಗೂ ಸಂಘದ ಯಾವುದೇ ಸಹಕಾರದಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ ತಪ್ಪದೇ ಕಾನೂನನ್ನು ಪಾಲಿಸಬೇಕಾಗಿ ವಿನಂತಿ- ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಸಿ ಮೀನು ವ್ಯಾಪಾರಸ್ಥರ ಸಂಘ ಬಂದರು ಮಂಗಳೂರು
– ಇದು ಬ್ಯಾನರ್‌ನಲ್ಲಿರುವ ಬರಹ.
ಇದರ ಪ್ರಕಾರ ಸೆ. 28ರಂದು ಮುಂಜಾನೆ 3:45ರ ನಂತರ ವ್ಯಾಪಾರ ಮಾಡಬಾರದು, ಉಲ್ಲಂಘಿಸಿದ್ದಲ್ಲಿ 1ತಿಂಗಳ ಕಾಲ ಆ ವ್ಯಕ್ತಿಗೆ ಬಹಿಷ್ಕಾರ ಮತ್ತು ದಂಡನೆ ವಿಧಿಸಲಾಗುತ್ತದೆ.
ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಬ್ಯಾನರ್
ಈಗ ಈ ಬ್ಯಾನರ್ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಪರ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಧಕ್ಕೆಯಲ್ಲಿ ಶರಿಯತ್ ಕಾನೂನು ಜಾರಿಯಲ್ಲಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಶ್ವಹಿಂದೂ ಪರಿಷತ್‌ನ ಮುಖಂಡ ಶರಣ್ ಪಂಪುವೆಲ್ ಅವರು, ಬೆದರಿಕೆಯ ತಂತ್ರಕ್ಕೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮೊಂದಿಗೆ ಇಡೀ ಹಿಂದೂ ಸಮಾಜವಿದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಿʼʼ ಎಂದು ಒತ್ತಾಯ ಮಾಡಿದ್ದಾರೆ.
ಹಿಂದೆಂದೂ ಇಲ್ಲದಿರುವ ಈ ನಿಯಮವನ್ನು ಈ ಬಾರಿ ಜಾರಿಗೆ ತಂದಿರುವುದು ಬಾರಿ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಇದೀಗ ಹಸಿಮೀನು ವ್ಯಾಪಾರಿಗಳ ಸಂಘದ ಜತೆಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸದೆ ಹೋದರೆ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗಬಹುದು. ಯಾಕೆಂದರೆ ಮಂಗಳೂರಿನಲ್ಲಿ ಮೀನು ವ್ಯಾಪಾರ ಮಾಡುವವರಲ್ಲಿ ಪ್ರಮುಖರಾಗಿರುವುದು ಮುಸ್ಲಿಮರು ಮತ್ತು ಮೊಗವೀರರು. ಅವರ ನಡುವೆ ಉತ್ತಮ ಬಾಂಧವ್ಯವಿದೆ. ಅದನ್ನು ಈ ರೀತಿಯ ಉದ್ಧಟತನದ ಬ್ಯಾನರ್‌ಗಳ ಮೂಲಕ ಕದಡುವ ಪ್ರಯತ್ನ ನಡೆದಂತೆ ಕಾಣುತ್ತಿದೆ.