ಮಂಗಳೂರು: ಮಂಗಳೂರಿನಲ್ಲೂ ಈದ್ ಮಿಲಾದ್ ಮೆರವಣಿಗೆ (eid procession) ಸಂದರ್ಭದಲ್ಲಿ ಕೆಲ ಯುವಕರು ಪುಂಡಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಪುಂಡಾಟ ಮಾಡಿದ ಯುವಕರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಸೆ.28ರ ಈದ್ ಮಿಲಾದ್ ಮೆರವಣಿಗೆ ವೇಳೆ ಮಂಗಳೂರಿನ ಉಳ್ಳಾಲ ಅಬ್ಬಕ್ಕ ವೃತ್ತದ ಬಳಿ ಘಟನೆ ನಡೆದಿತ್ತು. ವೀರರಾಣಿ ಅಬ್ಬಕ್ಕ ಸರ್ಕಲ್ ಹತ್ತಿ ಯುವಕರು ಪುಂಡಾಟ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಶಿವಮೊಗ್ಗದ ಈದ್ ಮೆರವಣಿಗೆ ಸಂದರ್ಭದ ಘಟನೆ ಗಂಭೀರವಾಗಿರುವ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ನೂರಾರು ಯುವಕರು ಅಬ್ಬಕ್ಕ ಸರ್ಕಲ್ ಹತ್ತಿ ಪ್ರತಿಮೆ ಎದುರು ಕುಣಿದಾಡಿದ್ದರಲ್ಲದೆ, ರಸ್ತೆ ಬಂದ್ ಮಾಡಿ ಬೈಕ್ ಹಾರ್ನ್ ಹಾಕಿಕೊಂಡು ಹುಚ್ಚಾಟ ನಡೆಸಿದ್ದರು. ಸದ್ಯ ವಿಡಿಯೋ ಆಧರಿಸಿ ಪೊಲೀಸರು ಯುವಕರನ್ನು ಪತ್ತೆ ಹಚ್ಚಿದ್ದಾರೆ. ಮಂಜನಾಡಿ, ಮದಕ, ಬಂಟ್ವಾಳ, ಬೆಳ್ತಂಗಡಿ, ದೇರಳಕಟ್ಟೆ, ಕೊಣಾಜೆ ಹಾಗೂ ಉಳ್ಳಾಲ ಭಾಗದ ಈ ಯುವಕರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಉಳ್ಳಾಲ ಪೊಲೀಸ್ ಠಾಣಾಧಿಕಾರಿಯಿಂದ ನೋಟೀಸ್ ಜಾರಿಯಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಗಲಭೆಕೋರರನ್ನು ಶಿಕ್ಷಿಸಿ, ವೋಟ್ ಬ್ಯಾಂಕ್ ಪಾಲಿಟಿಕ್ಸ್ ಬೇಡ