Site icon Vistara News

ಎಲೆಕ್ಷನ್‌ ಹವಾ | ಮಂಗಳೂರು ಉತ್ತರ | ಕೈಗಾರಿಕೆಗಳ ಕ್ಷೇತ್ರದಲ್ಲಿ ಹಿಂದುತ್ವವೇ ಟ್ರಂಪ್‌ ಕಾರ್ಡ್‌ ಆಗುವ ಮುನ್ಸೂಚನೆ

dakshina kannada mangaluru north

ರಾಜೇಶ್‌ ಪುತ್ತೂರು, ಮಂಗಳೂರು
ದೇಶದ ಪ್ರತಿಷ್ಠಿತ ಉದ್ಧಿಮೆಗಳನ್ನು ಹೊಂದಿರುವ ಮಂಗಳೂರು ಉತ್ತರ ಕ್ಷೇತ್ರ ಪುನರ್‌ವಿಂಡಣೆಗೂ ಮೊದಲು ಸುರತ್ಕಲ್‌ ವಿಧಾನಸಭಾ ಕ್ಷೇತ್ರವಾಗಿತ್ತು. ಒಂದು ಕಡೆಯಲ್ಲಿ ಅರಬ್ಬೀ ಸಮುದ್ರ, ಮತ್ತೊಂದು ಕಡೆಯಲ್ಲಿ ಕೈಗಾರಿಕಾ ವಲಯ ಇಲ್ಲಿನ ಹೈಲೈಟ್‌.  ಎಂಆರ್‌ಪಿಎಲ್‌, ಒಎನ್‌ಜಿಸಿ, ಎನ್‌ಎಂಪಿಟಿ, ಎನ್‌ಐಟಿಕೆ, ಎಂಸಿಎಫ್‌, ಕುದುರೆಮುಖ ಉಕ್ಕಿನ ಕಾರ್ಖಾನೆ, ಅದಾನಿ ರಿಫೈನರಿ, ಹೀಗೆ ಬೃಹತ್‌ ಉದ್ದಿಮೆಗಳು ಸಾಕಷ್ಟು ಇಲ್ಲಿವೆ. ಸಾವಿರಾರು ಎಕರೆಯಲ್ಲಿ ವಿಸ್ತಾರವಾಗಿರುವ ಎಸ್‌ಇಝೆಡ್‌ನಲ್ಲಿ ಇರುವ ಕೈಗಾರಿಕೆಗಳು ದೇಶಕ್ಕೆ ಆದಾಯ ತಂದು ಕೊಡುತ್ತಿವೆ.

ವಿಶಾಲ ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಲವು ಬೀಚ್‌ಗಳು ಪ್ರವಾಸಿಗರ ಹಾಟ್‌ ಸ್ಪಾಟ್‌. ಪಣಂಬೂರು ಬೀಚ್‌, ತಣ್ಣೀರು ಬಾವಿ ಬೀಚ್‌, ಸಸಿಹಿತ್ಲು ಬೀಚ್‌ ಫೇಮಸ್‌ ಬೀಚ್‌ಗಳಾಗಿದ್ದು, ಸಸಿಹಿತ್ಲು ಬೀಚ್‌ನಲ್ಲಿ ನಡೆಯೋ ಸರ್ಫಿಂಗ್‌ ಸ್ಪೋರ್ಟ್ಸ್‌ ದೇಶ ವಿದೇಶದ ಜನರನ್ನು ಆಕರ್ಶಿಸುತ್ತಿದೆ. ಹಿಂದೂ ಮತ್ತು ಮುಸ್ಲಿಂ ಧರ್ಮದವರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಹಿಂದೂ ಸಮಾಜದ ಮೊಗವೀರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜಕೀಯವಾಗಿ ಈ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಸ್ಪರ್ಧೆ ಮಾಡಿ ಗೆದ್ದವರು ಮತ್ತೆ ಪುನರಾಯ್ಕೆ ಆಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈ ರೆಕಾರ್ಡ್‌ ಬ್ರೇಕ್‌ ಮಾಡಿದ ಬಿಜೆಪಿಯ ಕೃಷ್ಣ ಜೆ. ಪಾಲೇಮಾರ್‌, 2004(ಸುರತ್ಕಲ್‌ ವಿಧಾನಸಭಾ ಕ್ಷೇತ್ರ)  ಹಾಗೂ 2008ರಲ್ಲಿ (ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ) ಜಯಭೇರಿ ಬಾರಿಸಿದರು.

ಹೊಸಮುಖ ಡಾ.ಭರತ್‌ ಶೆಟ್ಟಿ
ಹಾಲಿ ಶಾಸಕ ಡಾ. ಭರತ್‌ ಶೆಟ್ಟಿ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು. ಬಂಟ ಸಮುದಾಯಕ್ಕೆ ಸೇರಿದ ಇವರು ಜಿಲ್ಲೆಯ ಪ್ರತಿಷ್ಟಿತ ಕುಂಜಾಡಿ ಗುತ್ತಿನ ಮನೆತನದಿಂದ ಬಂದಿರುವ ಯುವ ನಾಯಕ. ರಾಜಕೀಯವಾಗಿ ಅಷ್ಟೇನೂ ಅನುಭವ ಇಲ್ಲದೇ ಇದ್ದರೂ ಕೇಂದ್ರ ನಾಯಕ ಅಮಿತ್‌ ಷಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇವರಿಗೆ ಬಿಜೆಪಿಯಿಂದ ಟಿಕೆಟ್‌ ದೊರೆತಿತ್ತು. ಅಭ್ಯರ್ಥಿಯ ಗೆಲುವಿಗೆ ಬಹುತೇಕ ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದರೂ 2018ರ ಚುನಾವಣೆಯಲ್ಲಿ ಇಲ್ಲಿ ಧರ್ಮ ರಾಜಕಾರಣ ವರ್ಕೌಟ್‌ ಆಗಿತ್ತು. ಹಿಂದೂ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಪ್ರಕರಣ ಹಿಂದು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿತ್ತು. ಇದು ಭರತ್‌ ಶೆಟ್ಟಿ ಗೆಲುವಿಗೆ ಕಾರಣವಾಗುವ ಮೂಲಕ ಭರತ್‌ ಶೆಟ್ಟಿ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಗೆಲುವು ಹಾಗೂ ಸೋಲಿಗೆ ಕಾರಣ
2013ರಲ್ಲಿ ಶಾಸಕರಾಗಿದ್ದ ಮೊಯಿದ್ದೀನ್‌ ಬಾವ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದರೂ ಅದ್ಯಾವುದೂ 2018ರಲ್ಲಿ ಗಣನೆಗೆ ಬಂದಿಲ್ಲ . ಹಿಂದೆ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಈ ಕ್ಷೇತ್ರ ಧರ್ಮ ರಾಜಕಾರಣದ ಬಳಿಕ ಬಿಜೆಪಿಯ ಕೈ ವಶವಾಗಿತ್ತು. ಸುಖಾನಂದ ಶೆಟ್ಟಿ ಎಂಬ ಹಿಂದು ಜಾಗರಣ ವೇದಿಕೆಯ ಮುಖಂಡನ ಹತ್ಯೆಯ ಬಳಿಕ ಇಲ್ಲಿ ಅಭಿವೃದ್ಧಿಯ ರಾಜಕಾರಣ ನಡೆದಿಲ್ಲ. ಹಿಂದುತ್ವವನ್ನೇ ಮುಂದಿಟ್ಟು ಬಿಜೆಪಿ ಚುನಾವಣೆಗೆ ಹೋಗುತ್ತ ಇದ್ದರೆ, ಕಾಂಗ್ರೆಸ್‌ ಅಭಿವೃದ್ದಿ ಮತ್ತು ಜಾತ್ಯಾತೀತತೆ ವಿಚಾರವನ್ನು ಮುಂದಿಡುತ್ತಾ ಇತ್ತು. ವಿಧಾನಸೌಧದಲ್ಲಿ ಬ್ಲೂ ಫಿಲಂ ವೀಕ್ಷಣೆ ಆರೋಪದ ಹಿನ್ನಲೆಯಲ್ಲಿ ಶಾಸಕರಾಗಿದ್ದ ಪಾಲೇಮಾರ್‌ ವಿರುದ್ಧದ ಅಸಮಾಧಾನ, 2013ರಲ್ಲಿ ಮೊಯಿದ್ದೀನ್‌ ಬಾವ ಗೆಲುವಿಗೆ ಕಾರಣವಾಗಿತ್ತು. ಆದರೆ 2018ರ ಚುನಾವಣೆ ಸಮೀಪ ಬರುತ್ತಾ ಇದ್ದಾಗಲೇ ನಡೆದ ದೀಪಕ್‌ ರಾವ್‌ ಹತ್ಯೆ ಪ್ರಕರಣ ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಿತ್ತು. ಹತ್ಯೆಯ ವಿಚಾರವನ್ನು ಮುಂದಿಟ್ಟು ಮತದಾರನ ಓಲೈಕೆ ಹಾಗೂ ಮೋದಿ ಟ್ರೆಂಡ್‌ ಎರಡೂ ಭರತ್‌ ಶೆಟ್ಟಿ ಎಂಬ ದಂತ ವೈದ್ಯರಿಗೆ ಶಾಸಕ ಸ್ಥಾನ ಒಲಿಯುವಂತೆ ಮಾಡಿತ್ತು.

2023ರಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮತ್ತೆ ಡಾ. ಭರತ್‌ ಶೆಟ್ಟಿ ಚುನಾವಣೆಗೆ ಸ್ಪರ್ಧಿಸುವುದು ನಿಚ್ಚಳ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮೊಯಿದ್ದೀನ್‌ ಬಾವ ಮತ್ತೆ ಕಣಕ್ಕೆ ಇಳಿಯುವ ಇಂಗಿತ ಹೊಂದಿದ್ದಾರೆ. ಆದರೆ ಸಮಾಜ ಸೇವೆಯ ಮೂಲಕ ಜನರೊಡನೆ ಬೆರೆತಿರುವ ಹಾಗೂ ಜನರ ನಡುವೆ ಸಾಕಷ್ಟು ಕೆಲಸ ಮಾಡುತ್ತಿರುವ ಇನಾಯತ್‌ ಅಲಿ ಕೂಡಾ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ. ಮಾಜಿ ಪೊಲೀಸ್‌ ಅಧಿಕಾರಿ ಜಿ.ಎ. ಬಾವ ಹಾಗೂ ಪ್ರಸಾದ್‌ ಕಾಂಚನ್‌ ಅವರ ಹೆಸರೂ ಚಾಲ್ತಿಯಲ್ಲಿ ಇದೆ. ಬಹುತೇಕ ಮೊಯಿದ್ದೀನ್‌ ಬಾವ ಅವರಿಗೆ ಟಿಕೆಟ್‌ ಸಿಗುವ ಸಾದ್ಯತೆ ಇದ್ದು, ಕೊನೆ ಕ್ಷಣದಲ್ಲಿ ಇನಾಯತ್‌ ಅಲಿಗೆ ಸಿಕ್ಕುವ ಸಾಧ್ಯತೆಯೂ ಇದೆ.

2023ರ ಚುನಾವಣೆಯಲ್ಲಿ ವರ್ಕೌಟ್‌ ಆಗುವ ವಿಚಾರ

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ. ಭರತ್‌ ಶೆಟ್ಟಿಗೆ ಸದ್ಯದ ಮಟ್ಟಿಗೆ ಹೇಳಿಕೊಳ್ಳುವಂತಹ ಉತ್ತಮ ಪರಿಸ್ಥಿತಿ ಇಲ್ಲ. ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಅಷ್ಟಾಗಿ ಓಡಾಡದೇ ಇರುವುದು, ಅಭಿವೃದ್ದಿ ವಿಚಾರದತ್ತ ಗಮನ ಕೊಡದೇ ಇರುವುದು ಮೈನಸ್‌ ಆಗುವ ಸಾದ್ಯತೆ ಇದೆ. ಕಳೆದ ಬಾರಿ ಟಿಕೆಟ್‌ ತಪ್ಪಿದ್ದ ಹಿಂದು ಮುಖಂಡ ಹಾಗೂ ಕೇಬಲ್‌ ಉದ್ಯಮಿ ಸತ್ಯಜಿತ್‌ ಸುರತ್ಕಲ್‌, ಭರತ್‌ ಶೆಟ್ಟಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಅದೂ ಬಿಜೆಪಿಗೆ ಮೈನಸ್‌ ಆಗುವ ಸಾದ್ಯತೆ ಇದೆ. ಹೀಗಾಗಿ ಹಿಂದುತ್ವದ ವಿಚಾರ ಬಳಸಿ ಚುನಾವಣೆ ಸ್ಪರ್ಧಿಸುವ ಸುಳಿವನ್ನು ಭರತ್‌ ಶೆಟ್ಟ ನೀಡಿದ್ದು, ಗೋ ಕಳ್ಳರ ವಿರುದ್ಧ ಆಸ್ತಿಜಪ್ತಿಯಂತಹ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೋ ಶಾಲೆಗಳಿಗೆ ಭೇಟಿ, ಹಿಂದು ಸಂಘಟನೆಗಳ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಭಾಗಿಯಾಗುವ ಮೂಲಕ ಹಿಂದುತ್ವವನ್ನೇ ಟ್ರಂಪ್‌ ಕಾರ್ಡ್‌ ಮಾಡುವ ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಇಲ್ಲಿ ಮೊಯಿದ್ದೀನ್‌ ಬಾವ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಪ್ತ ವಲಯದ ಇನಾಯತ್‌ ಅಲಿಗೆ ಟಿಕೆಟ್‌ ನೀಡಬಹುದು. ಹಾಗೊಂದು ವೇಳೆ ಮೊಯಿದ್ದೀನ್‌ ಬಾವಗೆ ಟಿಕೆಟ್‌ ಕೈ ತಪ್ಪಿದರೆ ಇಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಮತಗಳು ವಿಭಜನೆಯಾಗುವ ನಿಟ್ಟಿನಲ್ಲಿ ಮೊಯಿದ್ದೀನ್‌ ಬಾವ ಬಂಡಾಯವಾಗಿ ಸ್ಪರ್ಧೆ ಮಾಡಬಹುದು. ಇನ್ನೊಂದು ಕಡೆಯಲ್ಲಿ ಜೆಡಿಎಸ್‌ನಲ್ಲಿ ಸಹೋದರ ಬಿ.ಎಂ. ಫಾರೂಕ್‌ ಅವರ ಬೆಂಬಲ ಪಡೆದು ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಸಾದ್ಯತೆಯೂ ಇದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ದಿಗಿಂತಲೂ ಧರ್ಮ ರಾಜಕಾರಣ ನಡೆಯುತ್ತಾ ಇರುವ ಕಾರಣ ಮುಸ್ಲಿಂ ಓಟು ವಿಭಜನೆಯಾದರಷ್ಟೇ ಈ ಭಾರಿ ಬಿಜೆಪಿಗೆ ಸುಲಭ ಗೆಲುವು ಸಾಧ್ಯ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಡಾ. ಭರತ್‌ ಶೆಟ್ಟಿ (ಬಿಜೆಪಿ)
2. ಮೊಯಿದ್ದೀನ್‌ ಬಾವ, ಇನಾಯತ್‌ ಅಲಿ (ಕಾಂಗ್ರೆಸ್‌)
3. ಸತ್ಯಜಿತ್‌ ಸುರತ್ಕಲ್‌ (ಪಕ್ಷೇತರ)

ಇದನ್ನೂ ಓದಿ | ಎಲೆಕ್ಷನ್‌ ಹವಾ | ಮಂಗಳೂರು ದಕ್ಷಿಣ | ʼವೇದವ್ಯಾಸʼ ವಿರುದ್ಧ ಸೆಣೆಸಲು ಕಾಂಗ್ರೆಸ್‌ನಲ್ಲಿ ಲೋಬೊ ಮತ್ತಿತರರ ಪೈಪೋಟಿ

Exit mobile version