Site icon Vistara News

Good Manners: ಕ್ರಿಸ್ಮಸ್‌ಗೆ ಕೇಕ್‌ ಖರೀದಿ ಬದಲು ಅಂಗನವಾಡಿಗೆ ಗ್ಯಾಸ್‌ ಸ್ಟವ್ ಕೊಡಿಸಿದ ಪುಟಾಣಿ

Anganawadi Gas stove Child good Manners

ಕಡಬ: ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಉತ್ತಮ ಗುಣಗಳನ್ನು (Good Manners), ಸೂಕ್ಷ್ಮ ಸಂವೇದನೆಗಳನ್ನು, ಇನ್ನೊಬ್ಬರ ಬಗ್ಗೆ ಸದ್ಭಾವನೆಯನ್ನು ಮೂಡಿಸುವುದು ಹೇಗೆ ಎನ್ನುವುದಕ್ಕೆ ಮಾದರಿಯಾದ ಉದಾಹರಣೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಇತರರ ಕಷ್ಟದಲ್ಲಿ ಭಾಗಿಯಾಗಬೇಕು, ತಮ್ಮಿಂದಾದ ಸಹಾಯ ಮಾಡಬೇಕು ಎನ್ನುವುದನ್ನು ಮಕ್ಕಳಿಗೆ ಕೇವಲ ಬಾಯಿ ಮಾತಿನಲ್ಲಿ ಹೇಳದೆ ಅದನ್ನು ಕೆಲಸದ ಮೂಲಕ ತೋರಿಸಿಕೊಟ್ಟ ತಂದೆಯ ಕಥೆ ಇದೆ (Model Child).

ಅದು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಸರಕಾರಿ ಅಂಗನವಾಡಿ (Anganawadi School). ಪುಟಾಣಿ ಅಭಿನಿತ್‌ ಆ ಶಾಲೆಗೆ ಹೋಗುತ್ತಿದ್ದ. ಆ ಶಾಲೆಯಲ್ಲಿ ‌ ಮಕ್ಕಳಿಗೆ ಅಡುಗೆ ಮಾಡಲು ಒಂದು ಸ್ಟವ್‌ (Gas stove) ಇತ್ತು. ಆದರೆ, ಅದು ಹಾಳಾಗಿತ್ತು. ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ಅಲ್ಲಿನ ಸಿಬ್ಬಂದಿ ಅದು ಹೇಗೋ ಬಳಸುತ್ತಿದ್ದರು. ಒಂದು ದಿನ ಅದು ಕೂಡಾ ಹಾಳಾಗಿ ಇನ್ನು ಬಳಸಲು ಸಾಧ್ಯವೇ ಆಗದ ಸ್ಥಿತಿ ಬಂತು.

ಇದನ್ನು ನೋಡಿದ ಅಭಿನಿತ್‌ ಆ ವಿಚಾರವನ್ನು ಮನೆಯಲ್ಲಿ ಬಂದು ಹೇಳಿದ್ದ. ಜತೆಗೆ ಅದನ್ನು ಸರಿ ಮಾಡಿಕೊಡ್ತೀರಾ ಅಪ್ಪಾ ಎಂದು ಕೇಳಿದ್ದ. ಮಗನ ಮಾತಿಗೆ ತಲೆದೂಗಿದ ಪತ್ರಕರ್ತರೂ ಆಗಿರುವ ಅಭಿನಿತ್‌ನ ತಂದೆ ಪ್ರಕಾಶ್‌ ಅವರು ಶಾಲೆಗೆ ಹೋಗಿ ಸ್ಟವ್‌ನ್ನು ಗಮನಿಸಿದರು. ಆ ಸ್ಟವ್‌ ಬಳಸುವ ಸ್ಥಿತಿಯಲ್ಲೇ ಇರಲಿಲ್ಲ. ಒಂದು ವೇಳೆ ಕಷ್ಟಪಟ್ಟು ಸರಿ ಮಾಡಿಸಿದರೂ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆ ಇತ್ತು.

ಏನು ಮಾಡುವುದು ಎಂದು ಪ್ರಕಾಶ್‌ ಯೋಚಿಸಿದರು. ಹಾಗೆ ಮನೆಗೆ ಬಂದಾಗ ಮಗ ಅಭಿನಿತ್‌ ಒಂದು ಮಾತು ಹೇಳಿದ. ಈ ಸಾರಿ ನಾವು ಕ್ರಿಸ್ಮಸ್‌ಗೆ ಕೇಕ್‌ ತರುವುದು ಬೇಡ. ಆ ದುಡ್ಡಲ್ಲಿ ಶಾಲೆಗೆ ಒಂದು ಸ್ಟವ್‌ ಕೊಡಿಸೋಣವಾ? ಅಂತ. ಪುಟ್ಟ ಮಗನ ಮನಸ್ಸಿನಲ್ಲಿ ಮೂಡಿದ ಈ ಕಲ್ಪನೆಯನ್ನು ಕೇಳಿ ಪ್ರಕಾಶ್‌ ಮತ್ತು ಅವರ ಪತ್ನಿಗೆ ಖುಷಿ ಆಯಿತು. ಇಷ್ಟು ಸಣ್ಣ ವಯಸ್ಸಿನಲ್ಲಿ ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಇರುವುದು ಗಮನಿಸಿ ದೇವರು ಮಗುವಿಗೆ ಒಳ್ಳೆಯ ಬುದ್ಧಿ ಕೊಟ್ಟಿದ್ದಾನೆ ಎಂದು ಸಂಭ್ರಮಿಸಿದರು.

ಮುಂದೆ ಸಣ್ಣ ಯೋಚನೆಯನ್ನೂ ಮಾಡದ ಪ್ರಕಾಶ್‌ ಅವರು ಕೂಡಲೇ ಕಡಬದ ಸಂಗೀತ ಎಲೆಕ್ಟ್ರಾನಿಕ್ಸ್ ಮಾಲೀಕ ದಿನೇಶ್ ಅವರನ್ನು ಸಂಪರ್ಕಿಸಿದರು. ನನಗೆ ಒಂದು ಗ್ಯಾಸ್‌ ಸ್ಟವ್‌ ಬೇಕು ಎಂದು ಹೇಳಿದರು. ಶಾಪ್‌ಗೆ ಹೋಗಿ ಮಾತನಾಡುವ ಪುಟಾಣಿ ಮಗುವಿನ ಈ ಒಳ್ಳೆಯತನದ ಕಥೆ ಕೇಳಿ ಅವರೂ ರಿಯಾಯಿತಿ ದರದಲ್ಲಿ ಸ್ಟವ್‌ ನೀಡಿದರು.

ಇದನ್ನೂ ಓದಿ: Raja Marga Column : ನಿಮ್ಮ 10-14 ವಯಸ್ಸಿನ ಮಕ್ಕಳು ಓದಬೇಕಾದ ಪುಸ್ತಕಗಳು ಇವು!

ಕೊನೆಗೆ ರಿಯಾಯಿತಿ ದರದಲ್ಲಿ ದೊರೆತ ಗುಣಮಟ್ಟದ ಗ್ಯಾಸ್ ಸ್ಟವ್ ನ್ನು ತಂದು ಅಂಗನವಾಡಿಗೆ ಒಪ್ಪಿಸಿದರು. ಪುಟಾಣಿ ಅಭಿನಿತ್‌ ಮೂಲಕ ಪ್ರಕಾಶ್‌ ಅದನ್ನು ಶಾಲೆಯ ಶಿಕ್ಷಕಿಯವರಿಗೆ ಹಸ್ತಾಂತರಿಸಿದರು.

ಇದೀಗ ಹೊಸವರ್ಷ ಮತ್ತು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ತನ್ನ ಅಂಗನವಾಡಿಗೆ ಹೊಸ ಗ್ಯಾಸ್ ಸ್ಟವ್ ದೊರೆತ ಸಂಭ್ರಮದಲ್ಲಿದ್ದಾನೆ ಮಾಸ್ಟರ್ ಅಭಿನಿತ್‌. ಗ್ಯಾಸ್‌ ಸ್ಟವ್‌ ಹಸ್ತಾಂತರದ ಸಂದರ್ಭದಲ್ಲಿ ಅಂಗನವಾಡಿ ಸಿಬ್ಬಂದಿಗಳಾದ ಪದ್ಮಾವತಿ, ತಂಗಮ್ಮ,ಅಭಿನಿತ್ತ್‌ ಅವರ ತಾಯಿ ಪ್ರಿಯಾ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.

ಅಂಗನವಾಡಿಗೆ ಒಂದು ಗ್ಯಾಸ್‌ ಸ್ಟವ್‌ ಕೊಡಿಸುವುದು ಈಗಿನ ಕಾಲದಲ್ಲಿ ದೊಡ್ಡ ಸಂಗತಿಯೇನೂ ಅಲ್ಲ. ಮಧ್ಯಮ ವರ್ಗದವರು ಯಾರು ಬೇಕಾದರೂ ಈ ಮಟ್ಟಿನ ಕೊಡುಗೆ ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಇಂಥಹುದೊಂದು ಕೊಡುಗೆಯನ್ನು ಕೊಡಬೇಕು ಎನ್ನುವ ಮನಸು ಒಂದು ಮಗುವಿನಲ್ಲಿ ಹುಟ್ಟಿದ್ದು ಹೊಸ ಭರವಸೆಯ ಆಶಾಕಿರಣ ಎಂದು ಊರಿನ ಜನ ಹೇಳುತ್ತಿದ್ದಾರೆ.

Exit mobile version