Site icon Vistara News

HD Devegowda : ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ದೇವೇಗೌಡ ದಂಪತಿ; ವಿಶೇಷ ಪೂಜೆಯಲ್ಲಿ ಭಾಗಿ

HD Devegowda welcomed at Kukke subrahmanya

ಮಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು (HD Devegowda) ಮತ್ತು ಅವರ ಪತ್ನಿ ಚನ್ನಮ್ಮ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Kukke Subrahmanya Temple) ಆಗಮಿಸಿದ್ದಾರೆ. ಇಲ್ಲಿ ಕುಟುಂಬದ ವತಿಯಿಂದ ವಿಶೇಷ ಪೂಜೆ ನಡೆಯಲಿದ್ದು, ಅದರಲ್ಲಿ ಭಾಗಿಯಾಗಲು ದಂಪತಿ ಆಗಮಿಸಿದರು.

ದೇವೇಗೌಡರು ಭಾನುವಾರ ಮಧ್ಯಾಹ್ನ ವಿಶೇಷ ಹೆಲಿಕಾಪ್ಟರ್‌ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೇರವಾಗಿ ಆಗಮಿಸಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯ, ಮೋಡ ಕವಿದ ವಾತಾವರಣದಿಂದಾಗಿ ಹೆಲಿಕಾಪ್ಟರ್‌ ಟೇಕ್‌ ಆಫ್‌ ಮಾಡುವುದು ಸಾಧ್ಯವಾಗಿರಲಿಲ್ಲ.

ಹೀಗಾಗಿ ದೇವೇಗೌಡರು ಭಾನುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದರು. ಅಲ್ಲಿಂದ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ವಿಶ್ರಾಂತಿ ಪಡೆದಿದ್ದರು.

ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಬರುವುದಕ್ಕಾಗಿ ಕಾಯುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಎಚ್‌.ಡಿ ದೇವೇಗೌಡರು ಮತ್ತು ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗಿದ್ದರು. ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ನಡೆಯುವ ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಹೊರಟಿದ್ದರು. ಈ ವೇಳೆ ಅವರಿಬ್ಬರು ಪರಸ್ಪರ ಉಭಯ ಕುಶಲೋಪರಿ ಮಾತನಾಡಿದ್ದರು. ಸಿದ್ದರಾಮಯ್ಯ ಅವರು ದೇವೇಗೌಡರ ಆರೋಗ್ಯ ವಿಚಾರಿಸಿದ್ದರು.

ದೇವೇಗೌಡರ ಪತ್ನಿ ಚನ್ನಮ್ಮ ಅವರು ದೇವಾಲಯಕ್ಕೆ ಆಗಮಿಸುತ್ತಿರುವುದು

ಮುಂಜಾನೆ ದೇವಳದಲ್ಲಿ ಸ್ವಾಗತ

ಭಾನುವಾರ ರಾತ್ರಿ ಸುಬ್ರಹ್ಮಣ್ಯಕ್ಕೆ ಬಂದು ವಿಶ್ರಾಂತಿ ಪಡೆದಿದ್ದ ದೇವೇಗೌಡರು ಬೆಳಗ್ಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಆಗಮಿಸಿದರು. ಮಾಜಿ ಪ್ರಧಾನ ಮಂತ್ರಿಗಳನ್ನು ಗೌರವಾದರಗಳಿಂದ ಬರಮಾಡಿಕೊಂಡ ದೇವಳ ಸಿಬ್ಬಂದಿ ಅವರಿಗೆ ಆನೆ ಮತ್ತು ಬ್ಯಾಂಡ್‌ ಮೇಳಗಳ ಮೂಲಕ ಸ್ವಾಗತಿಸಲಾಯಿತು.

ಮಾಜಿ ಪ್ರಧಾನಿಗಳು ತಮ್ಮ ಪತ್ನಿಯ ಒಡಗೂಡಿ ದೇವಸ್ಥಾನ ಪ್ರವೇಶ ಮಾಢೀ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಹೊಸ ಮೈತ್ರಿಯಲ್ಲಿ ದೇವೇಗೌಡರ ಪಕ್ಷ

ದೇವೇಗೌಡರು ಕಟ್ಟಿ ಬೆಳೆಸಿದ ಜಾತ್ಯತೀತ ಜನತಾದಳ ಇದೀಗ ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ನೇತೃತ್ವದಲ್ಲಿರುವ ಎನ್‌ಡಿಎ ಕೂಟದ ಭಾಗವಾಗಿ ಕೆಲಸ ಮಾಡಲಿದೆ. ಇದೀಗ ದೇವೇಗೌಡರು ರಾಜ್ಯಾದ್ಯಂತ ತಿರುಗಾಡಿ ಕಾರ್ಯಕರ್ತರ ಮಟ್ಟದಲ್ಲಿಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿಯನ್ನು ಬೆಸೆಯುವ ಕೆಲಸವನ್ನು ಮಾಡಬೇಕಾಗಿದೆ. ಹೀಗಾಗಿ ದೇವರ ಆಶೀರ್ವಾದ ಮತ್ತು ಆರೋಗ್ಯವನ್ನು ಬೇಡುವುದಕ್ಕಾಗಿ ಅವರು ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ.

ಇದನ್ನೂ ಓದಿ : HD Devegowda : ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ ಆಟ ನಡೆಯಲ್ಲ; ಗುಡುಗಿದ ಎಚ್.ಡಿ. ದೇವೇಗೌಡ

ಕೆಲವು ವಾರದ ಹಿಂದೆ ಹೊಳೆನರಸೀಪುರದ ದೇವಸ್ಥಾನಕ್ಕೂ ಕುಟುಂಬ ಸಮೇತರಾಗಿ ಹೋಗಿ ಪೂಜೆ ಸಲ್ಲಿಸಿದ್ದರು.

Exit mobile version