ಮಂಗಳೂರು: ಪುರಭವನದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ನೇತೃತ್ವದಲ್ಲಿ ಶನಿವಾರ ಗರ್ಲ್ಸ್ ಕಾನ್ಫರೆನ್ಸ್ ಜತೆಗೆ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂಬ ಘೋಷವಾಕ್ಯದಡಿಯಲ್ಲಿ ವಿದ್ಯಾರ್ಥಿನಿಯರ ಸಮಾವೇಶ ನಡೆಯಿತು.
ಸ್ವಾತಂತ್ರ್ಯ ಸಿಕ್ಕು 75ರ ಹೊಸ್ತಿಲಲ್ಲಿ ನಾವಿದ್ದು, ದೇಶದ ಸಂವಿಧಾನ ಪ್ರತಿಪಾದಿಸುವ ಮೂಲ ಮೌಲ್ಯಗಳನ್ನು ಅಧಿಕಾರದಲ್ಲಿರುವ ಸರ್ಕಾರವೇ ನಾಶಪಡಿಸಲು ಪಣತೊಟ್ಟಿದೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದರು. ಅಧಿಕಾರದಲ್ಲಿರುವ ಸರ್ಕಾರ ಕೇವಲ ಧರ್ಮದ, ಜಾತಿಯ ಹೆಸರಿನಲ್ಲಿ ಕೋಮುವಾದವನ್ನು ಬಿತ್ತಿ ಜನರ ಮನಸ್ಸುಗಳನ್ನು ಕಲುಷಿತಗೊಳಿಸಿ ರಾಜಕೀಯ ಅಸ್ತಿತ್ವವನ್ನು ಭದ್ರಗೊಳಿಸಲು ಹಪಹಪಿಸುತ್ತಿದೆ. ಸರ್ಕಾರದ ಇಂತಹ ಅವಿವೇಕ, ಅಸಾಂವಿಧಾನಿಕ ಮತ್ತು ಬೇಜವಾಬ್ದಾರಿತನದ ನಡೆಯಿಂದ ಹೆಚ್ಚಾಗಿ ಅನ್ಯಾಯಕ್ಕೊಳಗಾಗಿ ಬಲಿಪಶು ಆಗಿದ್ದು ಮಹಿಳೆಯರು ಎಂದರು.
ರ‍್ಯಾಲಿಗೆ ಅನುಮತಿ ಇರದಿದ್ದರೂ ರ‍್ಯಾಲಿ ನಡೆಸಿದ ವಿದ್ಯಾರ್ಥಿನಿಯರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜತೆಗೆ ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಎಂಬುದೆಲ್ಲ ಬೂಟಾಟಿಕೆ ಎಂದು ಹೇಳಿದರು. ಹಿಜಾಬ್ ವಿಚಾರದಲ್ಲಿ ಸರ್ಕಾರ ಹಾಗೂ ನ್ಯಾಯಾಲಯ ಅನ್ಯಾಯ ಮಾಡಿದ್ದು, ಈ ಮೂಲಕ ಮುಸ್ಲಿಮ್ ವಿದ್ಯಾರ್ಥಿಯರ ಶಿಕ್ಷಣದ ಹಕ್ಕು ಕಸಿಯುವ ಪ್ರಯತ್ನವಿದು ಎಂದು ಆರೋಪಿಸಿದರು.
ವಿವಾದಿತರೇ ಮುಖ್ಯ ಅತಿಥಿಗಳು
ಹಿಜಾಬ್ ವಿವಾದ ಆರಂಭವಾದ ಉಡುಪಿ ಜಿಲ್ಲೆಯ ಆರು ವಿದ್ಯಾರ್ಥಿನಿಯರು, ಮಂಗಳೂರು ವಿವಿಯ ವಿದ್ಯಾರ್ಥಿನಿಯರು ಸಮಾವೇಶದ ಮುಖ್ಯ ಅತಿಥಿಗಳಾಗಿದ್ದರು. ಸಮಾವೇಶದಲ್ಲಿ ಮಾತನಾಡಿದ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್. ಸಾಜೀದ್, ಹಿಜಾಬ್ ಹೋರಾಟದಲ್ಲಿ ಯಾರೂ ಒಬ್ಬಂಟಿಯಲ್ಲ. ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಡುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಹಿಂದುತ್ವದ ಫ್ಯಾಸಿಸಮ್ ವಿರುದ್ದ ಒಂದು ಕೈಯಲ್ಲಿ ಓದು, ಮತ್ತೊಂದು ಕೈಯಲ್ಲಿ ಈ ಹೋರಾಟವು ನಡೆಯಲಿದೆ.
ಹಿಂದುತ್ವ ಎನ್ನುವುದು ಈ ದೇಶದ ಒಂದು ಪೊಲಿಟಿಕಲ್ ಐಡಿಯಾಲಜಿ. ಚುನಾಯಿತ ಸರ್ಕಾರ ಬಿಜೆಪಿಯದ್ದೇ ಆದರೂ ಅದರ ಹಿಂದೆ ಇರುವುದು ಆರ್‌ಎಸ್‌ಎಸ್. ನಮ್ಮ ದೇಶ ಸಂವಿಧಾನದಂತೆ ನಡೆಯುತ್ತಿಲ್ಲ, ಬದಲಿಗೆ ಆರ್‌ಎಸ್‌ಎಸ್‌ನ ಸಂವಿಧಾನದಂತೆ ನಡಿತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ| ಹಿಜಾಬ್ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಾರ ವಿಚಾರಣೆ ಆರಂಭ