Site icon Vistara News

Lok Sabha Election 2024 : ದಕ್ಷಿಣ ಕನ್ನಡ ಬಿಜೆಪಿ ಟಿಕೆಟ್‌ ಪಡೆದ ಕ್ಯಾ. ಬ್ರಿಜೇಶ್‌ ಚೌಟ ಯಾರು? ಇಲ್ಲಿದೆ ವಿವರ

Captain Brijesh Chowta Modi1

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ (Lok Sabha Election 2024) ಬಿಜೆಪಿ ಅಭ್ಯರ್ಥಿಯಾಗಿ (BJP Candidate) ಟಿಕೆಟ್‌ ಪಡೆದಿದ್ದಾರೆ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (Captain Brijesh Chowta). ಬಿಜೆಪಿ 15 ವರ್ಷಗಳ ಕಾಲ ಸಂಸದರಾಗಿದ್ದ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಅವರ ಬದಲಿಗೆ ಕ್ಯಾಪ್ಟನ್‌ಗೆ ಮಣೆ ಹಾಕಿದೆ. ಹಾಗಿದ್ದರೆ ಯಾರು ಈ ಬ್ರಿಜೇಶ್‌ ಚೌಟ? ಇಲ್ಲಿದೆ ಪೂರ್ಣ ವಿವರ.

ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾಜಿ ಸೈನಿಕ, ವಾಣಿಜ್ಯೋದ್ಯಮಿ, ಶಿಕ್ಷಣ ತಜ್ಞ ಮತ್ತು ಆಡಳಿತ ನಿರ್ವಹಣಾ ತಜ್ಞ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು..

ಕ್ಯಾಪ್ಟನ್ ಚೌಟ ಅವರು ಭಾರತೀಯ ಸೇನೆಯ ಮಾನವ ಸಂಪನ್ಮೂಲ, ಭದ್ರತೆ, ಕಾರ್ಯಾಚರಣೆಗಳು, ಆಡಳಿತ ಮತ್ತು ಲಾಜಿಸ್ಟಿಕ್ಸ್‌ನ ಸ್ವತಂತ್ರ ನಿರ್ವಹಣೆಯಲ್ಲಿ ಏಳು ವರ್ಷಗಳ ಅನುಭವವನ್ನು ಹೊಂದಿರುವುದು ಅವರ ವಿಶೇಷತೆಯಾಗಿದೆ.

ಇದನ್ನೂ ಓದಿ : Lok Sabha Election 2024 : ಪ್ರತಾಪ್‌ಸಿಂಹ, ಕಟೀಲ್‌ ಸಹಿತ 8 ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌

ಎನ್‌ಸಿಸಿ ಮತ್ತು ಆರ್‌ಎಸ್‌ಎಸ್‌ ಪ್ರೇರಣೆಯಿಂದ ಸೇನೆ ಸೇರಿದ ಚೌಟ

ಬ್ರಿಜೇಶ್‌ ಚೌಟ ಅವರು ಕಾಲೇಜಿನಲ್ಲಿದ್ದಾಗ ಎನ್‌ಸಿಸಿ ಕೆಡೆಟ್‌ ಆಗಿದ್ದರು. ಅದರ ಜತೆಗೆ ಆರೆಸ್ಸೆಸ್‌ ಜತೆಗಿನ ಸಂಬಂಧ ಅವರನ್ನು ಸೇನೆಯನ್ನು ಸೇರಲು ಪ್ರೇರಣೆ ನೀಡಿತು. ಪದವಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್‌ಗಾಗಿ UPSC ಪರೀಕ್ಷೆಯನ್ನು ಬರೆದರು. ಎಸ್‌ಎಸ್‌ಬಿ ಮೂಲಕ ಪರೀಕ್ಷೆ ತೇರ್ಗಡೆಯಾದ ನಂತರ OTI ಚೆನ್ನೈನಲ್ಲಿ ತರಬೇತಿ ಪಡೆದಿದ್ದಾರೆ.

Lok Sabha Election 2024 : ಏಳು ವರ್ಷಗಳ ಸೇನಾ ಸೇವೆ ಎಲ್ಲೆಲ್ಲಿ ನಡೆದಿತ್ತು?

ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಆರಂಭಿಕ ತರಬೇತಿ ಪಡೆದಿರುವುದು ಚೆನ್ನೈನಲ್ಲಿ. ಮುಂದಿನ ಮೂರು ತಿಂಗಳ ಕಾಲ ಶಿಲ್ಲಾಂಗ್‌ನಲ್ಲಿ ತರಬೇತಿ ನಡೆಯಿತು. ಪದಾತಿದಳದ ಗೂರ್ಖಾ ರೆಜಿಮೆಂಟ್‌ನಲ್ಲಿ ಕೆಲಸ ಮಾಡಿದ್ದ ಅವರು ಮೂರು ವರ್ಷಗಳ ಕಾಲ ಮಣಿಪುರದಲ್ಲಿ ಮತ್ತು ನಂತರ ಒಂದು ವರ್ಷ ಅಸ್ಸಾಂನಲ್ಲಿ ಬಂಡಾಯ ಉತ್ತುಂಗದಲ್ಲಿದ್ದಾಗ ಕೆಲಸ ಮಾಡಿದ್ದರು.

ಇವರದು ರಾಜಕೀಯ ಕುಟುಂಬವಲ್ಲ

ಬ್ರಿಜೇಶ್‌ ಚೌಟ ಅವರು ಮೂಡುಬಿದಿರೆಯ ಬಂಟ ಕುಟುಂಬಕ್ಕೆ ಸೇರಿದವರು. ಹಾಗಂತ ಇವರೇನೂ ಶ್ರೀಮಂತ ಕುಟುಂಬದವರಲ್ಲ. ಬ್ರಿಜೇಶ್‌ ಚೌಟ ಅವರು ಸೈನ್ಯಕ್ಕೆ ಸೇರಿದ ನಂತರ ಕುಟುಂಬ ಫರಂಗಿಪೇಟೆಯಲ್ಲಿ ನೆಲೆಸಿದೆ.

ಕಂಬಳದ ಸಂಯೋಜಕ ಬ್ರಿಜೇಶ್‌ ಚೌಟ

ಬ್ರಿಜೇಶ್‌ ಚೌಟ ಅವರು ಕರಾವಳಿಯ ಸಾಂಸ್ಕೃತಿಕ ಮತ್ತು ಕ್ರೀಡಾ ನೇತಾರರಾಗಿಯೂ ಹೆಸರಾಗಿದ್ದಾರೆ. ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಮಂಗಳೂರಿನಲ್ಲಿ ಆಯೋಜಿಸುವ ಮೂಲಕ ಅವರು ಗಮನ ಸೆಳೆದಿದ್ದಾರೆ.

ಬ್ರಿಜೇಶ್‌ ಚೌಟ ಅವರ ರಾಜಕೀಯ ಜೀವನ

ಬ್ರಿಜೇಶ್‌ ಚೌಟ ಅವರು ಕಾಲೇಜು ಜೀವನದಿಂದಲೇ ರಾಷ್ಟ್ರೀಯವಾದಿ, ಆರೆಸ್ಸೆಸ್‌ ಸ್ವಯಂಸೇವಕ. ಹೀಗಾಗಿ ಬಿಜೆಪಿಯ ಕಡೆಗೆ ಸಹಜ ಒಲವು ಹೊಂದಿದ್ದರು. ಅವರು ಬಿಜೆಪಿಯಲ್ಲಿ ಸಕ್ರಿಯವಾಗಿದ್ದು 2013ರ ವಿಧಾನಸಭಾ ಚುನಾವಣೆಯ ಬಳಿಕ. ಅವರು ಮೂರು ವರ್ಷಗಳ ಕಾಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಹೆಸರು ಅಭ್ಯರ್ಥಿಯಾಗಿ ಕೇಳಿಬಂದಿತ್ತು. ಇದೀಗ ಅವರಿಗೆ ಸಂಸತ್‌ ಪ್ರವೇಶಕ್ಕೆ ಟಿಕೆಟ್‌ ಸಿಕ್ಕಿದೆ.

ಇದನ್ನೂ ಓದಿ : Lok Sabha Election : ಕರ್ನಾಟಕದ 20 ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬ್ರಿಜೇಶ್‌ ಚೌಟ ಆಯ್ಕೆ ಆಗಿದ್ದು ಹೇಗೆ?

ಈ ಬಾರಿ ಲೋಕಸಭೆ ಅಭ್ಯರ್ಥಿ ಬದಲಾವಣೆ ಆಗಲೇಬೇಕೆಂದು ಪಕ್ಷದ ಕಾರ್ಯಕರ್ತರು ಅಭಿಯಾನ ಕೈಗೊಂಡಿದ್ದರು. ಕಾರ್ಯಕರ್ತರ ಮಾತಿಗೆ ಓಗೊಟ್ಟ ಬಿಜೆಪಿ ಹೈಕಮಾಂಡ್ ಯುವ ನಾಯಕ, 42 ವರ್ಷದ ಬೃಜೇಶ್ ಚೌಟ ಅವರನ್ನು ಅಭ್ಯರ್ಥಿಯಾಗಿಸಿದೆ. ಅಂದಹಾಗೆ, ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಗೆ ಇಳಿದ ಯುವ ನಾಯಕನನ್ನು ಬಿಜೆಪಿ ಸಂಸತ್ತಿಗೆ ಆಯ್ದುಕೊಂಡಿರುವುದು ಮಹತ್ವದ ನಡೆಯಾಗಿದೆ. ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದು ಬಂದ ವ್ಯಕ್ತಿಯೊಬ್ಬರಿಗೆ ಸಂಸತ್ ಸ್ಪರ್ಧೆಯ ಟಿಕೆಟ್ ಕೊಡಲಾಗಿದೆ.

ಮಂಗಳೂರಿನ ರಥಬೀದಿಯಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟ ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ತೊಡಗಿಕೊಂಡಿದ್ದು ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದ್ದ ಚೌಟ ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂ ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಯುಪಿಎಸ್ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು.

ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಂಘದ ಪ್ರೇರಣೆಯಿಂದ ಮುಂದೆ ಭಾರತೀಯ ಸೇನೆಗೆ ಸೇರಿದ್ದ ಚೌಟರು ಸೇನಾ ನಿವೃತ್ತಿಯ ಬಳಿಕ ಮಂಗಳೂರಿಗೆ ಆಗಮಿಸಿ ಆರೆಸ್ಸೆಸ್ ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು 2013ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕೀಯಕ್ಕಿಳಿದಿದ್ದರು.‌ 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಸದ ನಳಿನ್ ಕುಮಾರ್ ಜೊತೆಗೂಡಿ ಪಕ್ಷದ ಕೆಲಸ ಮಾಡಿದ್ದರು. 2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಚೌಟ, 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು. ಇದಲ್ಲದೆ, 2015ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸಿದ್ದರು. ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಮಲೈ ಅವರ ಜೊತೆ ರಾಜ್ಯಾದ್ಯಂತ ಪ್ರವಾಸ ಮಾಡಿರುತ್ತಾರೆ.

ಪಕ್ಷದ ಚಟುವಟಿಕೆ ಜೊತೆಗೆ ಸಮರ್ಥನ್ ಫೌಂಡೇಶನ್ ಮೂಲಕ ಮಂಗಳೂರಿನಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಫೌಂಡೇಶನ್ ಮೂಲಕ ತಮ್ಮದೇ ಸ್ನೇಹಿತರನ್ನು ಕಟ್ಟಿಕೊಂಡು ಸದ್ದಿಲ್ಲದೆ ಸೇವಾ ಚಟುವಟಿಕೆಯನ್ನು ನಡೆಸಿದ್ದರು. ಇದಲ್ಲದೆ, ಮೆಟ್ರೋ ಪಾಲಿಟನ್ ನಗರಗಳಲ್ಲಿ ಮಾತ್ರ ಇರುತ್ತಿದ್ದ ಲಿಟ್ ಫೆಸ್ಟ್ ಎನ್ನುವ ರಾಷ್ಟ್ರ ಮಟ್ಟದ ಸಾಹಿತ್ಯ ಕೂಟವನ್ನು ಮಂಗಳೂರಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಸಂಘಟಿಸಿದ್ದರು. ರಾಷ್ಟ್ರೀಯ ಮಟ್ಟದ ವಾಗ್ಮಿಗಳು, ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಜೊತೆಗೂಡಿಸಿ ಸಂವಾದ, ಧನಾತ್ಮಕ ಸಾಹಿತ್ಯ ಚಟುವಟಿಕೆಗೆ ವೇದಿಕೆ ಒದಗಿಸಿದ್ದಲ್ಲದೆ, 2019ರಿಂದ ಪ್ರತಿ ವರ್ಷ ಲಿಟ್ ಫೆಸ್ಟ್ ಸಂಘಟಿಸುತ್ತಿದ್ದಾರೆ, ಆಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಸಾಹಿತ್ಯ ಪ್ರಿಯರಿಗೆ ರಾಷ್ಟ್ರ ಮಟ್ಟದ ದಿಗ್ಗಜರ ಜೊತೆಗೆ ಸಂವಾದಕ್ಕೆ ವೇದಿಕೆ ಸೃಷ್ಟಿಸಿದ್ದರು.

2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ, ಯುವ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸತತ ಏಳು ವರ್ಷಗಳಿಂದ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿಗ ಚರ್ಚೆ ನಡೆಯುತ್ತಿರುವಾಗಲೇ ಬೃಜೇಶ್ ಚೌಟ ಹೆಸರು ಮುನ್ನೆಲೆಗೆ ಬಂದಿತ್ತು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಬೃಜೇಶ್ ಚೌಟ ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದ್ದರೂ ಅವಿವಾಹಿತರಾಗಿಯೇ ಇದ್ದು ತನ್ನ ಸಂಪೂರ್ಣ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.

Exit mobile version