ಸುಳ್ಯ: ದೇಶದಲ್ಲಿ ತ್ರಿವಳಿ ತಲಾಕ್ (Triple talaq) ಕಾನೂನುಬಾಹಿರ ಎಂದು ಘೋಷಣೆಯಾಗಿದ್ದರೂ ಕೆಲವು ಹಳೆ ಚಾಳಿಗಳು ಇನ್ನೂ ಮುಂದುವರಿದಿವೆ. ಇಲ್ಲೊಬ್ಬ ಭೂಪ ವಿದೇಶದಲ್ಲೇ ಕುಳಿತು ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ. ವಾಟ್ಸ್ ಆ್ಯಪ್‌ನಲ್ಲಿ (talaq through whatsapp) ಮೂರು ಬಾರಿ ತಲಾಕ್ ಅಂತ ಟೈಪ್ ಮಾಡಿ ಕಳುಹಿಸಿಕೊಟ್ಟು ನನಗೂ ನಿನಗೂ ಇನ್ನು ಸಂಬಂಧವಿಲ್ಲ ಎಂದಿದ್ದಾನೆ. ಆದರೆ ತಲಾಕ್ ಕಾನೂನಿನ ಬಗ್ಗೆ ತಿಳುವಳಿಕೆ ಹೊಂದಿರುವ ಪತ್ನಿ ಇದಕ್ಕೆ ಜಗ್ಗದೆ ಈಗ ಪೊಲೀಸ್ ಠಾಣೆ ಮೆಟ್ಟಿಲು (wife Complaints to Police Station) ಹತ್ತಿದ್ದಾಳೆ.
ಅವನಿರುವುದು ವಿದೇಶದಲ್ಲಿ. ಅವಳಿರುವುದು ಸುಳ್ಯದಲ್ಲಿ. ಅಲ್ಲಿಂದಲೇ ವಾಟ್ಸ್ ಆ್ಯಪ್ ಮಾಡಿರುವ ಈ ಘಟನೆಗೆ ಸಂಬಂಧಿಸಿ ಸುಳ್ಯ ಜಯನಗರ ನಿವಾಸಿ ಮಿಸ್ರಿಯಾ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೇರಳ ರಾಜ್ಯದ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಿಸ್ರಿಯಾ ಎಂಬಾಕೆಯನ್ನು ಮದುವೆಯಾಗಿದ್ದ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಬ್ದುಲ್ ರಶೀದ್ 2 ವರ್ಷ ಹಿಂದೆ ಮಿಸ್ರಿಯಾ ಅವರನ್ನು ವಿದೇಶಕ್ಕೆ ಕರೆಸಿಕೊಂಡಿದ್ದ. ಆ ಬಳಿಕ 2 ನೇ ಮಗುವಿನ ಹೆರಿಗೆಗಾಗಿ ಸುಳ್ಯಕ್ಕೆ ಕರೆತಂದು ಪತ್ನಿಯ ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ತೆರಳಿದ್ದ.
ಆದರೆ ಕಳೆದ ಆರು ತಿಂಗಳಿನಿಂದ ಇವರ ಸಂಸಾರದಲ್ಲಿ ವಿರಸ ಉಂಟಾಗಿತ್ತು. ಈ ಬಗ್ಗೆ ಸಂಬಂಧಿಕರು, ಹಿರಿಯರು ಮಾತನಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಇದಕ್ಕೆ ಆಸ್ಪದ ನೀಡದ ಅಬ್ದುಲ್ ರಶೀದ್, ಪತ್ನಿಯ ಮೊಬೈಲ್‌ಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್‌ನ ಸಂದೇಶ ಕಳುಹಿಸಿದ್ದಾನೆ. ಇದರಿಂದ ಮನನೊಂದ ಮಿಸ್ರಿಯಾ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Triple Talaq: ಆನ್‌ಲೈನ್‌ನಲ್ಲಿ 1.5 ಲಕ್ಷ ರೂ. ಕಳೆದುಕೊಂಡ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ
ಏನಿದು ತ್ರಿವಳಿ ತಲಾಕ್, ಭಾರತದಲ್ಲಿ ಯಾಕೆ ಮಾನ್ಯತೆ ಇಲ್ಲ?
ತ್ರಿವಳಿ ತಲಾಖ್ ಎನ್ನುವುದು ಮುಸ್ಲಿಮರಲ್ಲಿ ಗಂಡ-ಹೆಂಡತಿಯ ವಿಚ್ಛೇದನದ ಒಂದು ರೂಪ. ಮುಸ್ಲಿಂ ಗಂಡ ತಲಾಕ್ (ವಿಚ್ಛೇದನದ ಅರೇಬಿಕ್ ಪದ) ಅನ್ನು ಮೂರು ಬಾರಿ ಉಚ್ಚರಿಸುವ ಮೂಲಕ ತನ್ನ ಹೆಂಡತಿಯನ್ನು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಬಹುದು. ಉಚ್ಚಾರಣೆಯು ಮೌಖಿಕ ಅಥವಾ ಲಿಖಿತ ಅಥವಾ ಇತ್ತೀಚಿನ ದಿನಗಳಲ್ಲಿ ದೂರವಾಣಿ, ಎಸ್‌ಎಂಎಸ್, ಇಮೇಲ್ ಅಥವಾ ಸಾಮಾಜಿಕ ಮಾಧ್ಯಮಗಳಂತಹ ಎಲೆಕ್ಟ್ರಾನಿಕ್ ವಿಧಾನಗಳಿಂದಲೂ ತಲುಪಿಸಬಹುದು. ವಿಚ್ಛೇದನಕ್ಕೆ ಪುರುಷನು ಯಾವುದೇ ಕಾರಣವನ್ನು ಉಲ್ಲೇಖಿಸುವ ಅಗತ್ಯವಿರಲಿಲ್ಲ ಮತ್ತು ಘೋಷಣೆಯ ಸಮಯದಲ್ಲಿ ಹೆಂಡತಿ ಹಾಜರಿರಬೇಕಾಗಿಲ್ಲ. ಸ್ವಲ್ಪ ಸಮಯದ ನಂತರ, ಹೆಂಡತಿ ಗರ್ಭಿಣಿಯಾಗಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ, ವಿಚ್ಛೇದನವನ್ನು ಬದಲಾಯಿಸಲಾಗುವುದಿಲ್ಲ ಎನ್ನುವುದು ಅದರ ನಿಯಮವಾಗಿತ್ತು.
ಆದರೆ, ಭಾರತದಲ್ಲಿ ಈಗ ಇದನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರವು ರೂಪಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2017ನ್ನು ರೂಪಿಸಿ 2019ರ ಜುಲೈ 30ರಂದು ಸಂಸತ್ತಿನಲ್ಲಿ ಅದಕ್ಕೆ ಅಂಗೀಕಾರ ಪಡೆದಿದೆ. ಮಸೂದೆ ಪ್ರಕಾರ ತ್ವರಿತ ತ್ರಿವಳಿ ತಲಾಖ್ (ತಲಾಖ್-ಎ-ಬಿದ್ದತ್) ಮಾನ್ಯವಲ್ಲ. ಮಾತನಾಡುವ, ಲಿಖಿತ ಅಥವಾ ಇಮೇಲ್, ಎಸ್ಎಂಎಸ್ ಮತ್ತು ವಾಟ್ಸಾಪ್ ನಂತಹ ಎಲೆಕ್ಟ್ರಾನಿಕ್ ವಿಧಾನದಲ್ಲಿ ನೀಡಿದ ತಲಾಕ್ ಕಾನೂನುಬಾಹಿರ ಮತ್ತು ಅನೂರ್ಜಿತವಾಗಿದೆ ಎನ್ನುತ್ತದೆ ಈ ಮಸೂದೆ. ಇದನ್ನು ಬಳಸಿ ತಲಾಕ್ ಹೇಳುವ ಗಂಡನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.