ಮಂಗಳೂರು: ಕೊಯಮತ್ತೂರಿನ ಸಂಗಮೇಶ್ವರ ದೇವಸ್ಥಾನದ ಎದುರು ಅಕ್ಟೋಬರ್ 23ರಂದು ಕಾರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟಕ್ಕೆ ಕೆಲವೇ ದಿನ ಮೊದಲು ತೀರ್ಥಹಳ್ಳಿಯ ಶಾರಿಕ್ ಅಲ್ಲಿಗೆ ಭೇಟಿ ನೀಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ತೀರ್ಥಹಳ್ಳಿಯ ಶಾರಿಕ್ ಮಂಗಳೂರು ಬಾಂಬ್ ಸ್ಫೋಟದ ಪ್ರಧಾನ ಆರೋಪಿ ಎನ್ನುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಈತನ ಹಿನ್ನೆಲೆ, ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಅಕ್ಟೋಬರ್ ೨೩ರಂದು ನಡೆದ ಸ್ಫೋಟದಲ್ಲಿ ಜಮೀಶಾ ಮುಬೀನ್ ಎಂಬಾತ ಗಾಯಗೊಂಡಿದ್ದ. ಎಂಜಿನಿಯರಿಂಗ್ ಪದವೀಧರನಾಗಿರುವ ಈತ ಆತ್ಮಹತ್ಯಾ ಬಾಂಬರ್ ಆಗಿದ್ದನೇ? ಅಥವಾ ಸಾಗಾಟದ ವೇಳೆ ಈ ಸ್ಫೋಟ ಸಂಭವಿಸಿತೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಮುಬೀನ್ ೨೦೧೯ರಿಂದ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಹಿಂದೆಯೂ ಆತನನ್ನು ಎನ್‌ಐಎ ವಿಚಾರಣೆ ನಡೆಸಿತ್ತು.
ಇಂಥ ಮುಬೀನ್ ಜತೆಗೆ ತೀರ್ಥಹಳ್ಳಿಯ ಶಾರಿಕ್‌ಗೆ ಸಂಪರ್ಕವಿತ್ತು ಮತ್ತು ಆತ ಕೊಯಮತ್ತೂರು ಸ್ಫೋಟಕ್ಕೆ ಮುನ್ನ ಅಲ್ಲಿಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ. ಅಂದರೆ ಆ ಸ್ಫೋಟದಲ್ಲೂ ಶಾರಿಕ್ ಕೈವಾಡವಿರುವುದು ಬಹುತೇಕ ಸ್ಪಷ್ಟವಾಗಿದೆ.
ಶಾರಿಕ್ ತಮಿಳುನಾಡಿನ ನೀಲಗಿರೀಸ್ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕನೊಬ್ಬನ ಹೆಸರಿನಲ್ಲಿ ಸಿಮ್ ಪಡೆದಿದ್ದ ಎಮದು ಹೇಳಲಾಗಿದೆ. ಸಪ್ಟೆಂಬರ್ ನಲ್ಲಿ ಕೊಯಮತ್ತೂರು ಸಮೀಪದ ಸಿಂಗನಲ್ಲೂರಿಗೂ ಶಾರೀಕ್ ಭೇಟಿ ನೀಡಿದ್ದ.
ಬೆಂಗಳೂರಿನಲ್ಲಿ ಹುಟ್ಟಿದ ನಂಟು
ಕೊಯಮತ್ತೂರು ಸ್ಫೋಟದಲ್ಲಿ ಸತ್ತ ಜಮೀಶಾ ಮುಬೀನ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು ಆತ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಶಾಕಿರ್ ಕೂಡಾ ತಂತ್ರಜ್ಞಾನ ಹಿನ್ನೆಲೆ ಹೊಂದಿದ್ದು, ಅರ್ಧದಲ್ಲೇ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಈ ವೇಳೆ ಮುಬೀನ್ ಮತ್ತು ಶಾರಿಕ್ ನಡುವೆ ಸಂಪರ್ಕ ಬೆಳೆದಿತ್ತು ಎನ್ನಲಾಗಿದೆ.
ಶಾರಿಕ್ ಕೊಯಮತ್ತೂರು ಬಾಂಬ್ ಸ್ಫೋಟಕ್ಕೆ ಮುನ್ನ ಸಿಂಗಾನಲ್ಲೂರಿನಲ್ಲೇ ಇದ್ದು ಪ್ಲ್ಯಾನ್‌ನಲ್ಲಿ ಭಾಗಿಯಾಗಿದ್ದ ಎನ್ನಲಾಗುತಿದೆ. ಮುಬೀನ್ ಕೊಯಮತ್ತೂರಿನಲ್ಲಿ ಮತ್ತು ಶಾರಿಕ್ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ನಡೆಸಿರುವ ಶಂಕೆ ಇದೆ.
ಶಾರಿಕ್ ಈ ಹಿಂದೆಯೇ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಮಂಗಳೂರು ಗೋಡೆ ಬರಹ ಕೇಸ್ ನಲ್ಲಿ ಜಾಮೀನು ಸಿಕ್ಕ ಬಳಿಕ ಉಗ್ರ ಚಟುವಟಿಕೆ ಮತ್ತಷ್ಟು ಹೆಚ್ಚಾಗಿತ್ತು. ಸೆಪ್ಟೆಂಬರ್ ನಲ್ಲೇ ತೀರ್ಥಹಳ್ಳಿಯಿಂದ ನಾಪತ್ತೆಯಾಗಿದ್ದ ಶಾರಿಕ್ ಅದಕ್ಕಿಂತ ಮೊದಲು ಯಾಸಿನ್, ಮಾಜ್ ಜತೆ ಸೇರಿ ಶಿವಮೊಗ್ಗ ಮತ್ತು ಬಂಟ್ವಾಳದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಎನ್ನಲಾಗಿದೆ. ಈತನಿಗೆ ಬಾಂಬ್ ತಯಾರಿ ಬಗ್ಗೆ ಕಲಿಸಿಕೊಟ್ಟಿದ್ದೇ ಮುಬೀನ್ ಎನ್ನಲಾಗುತ್ತಿದೆ.
ಇನ್ನೂ ಓದಿ | ವಿಸ್ತಾರ Explainer | ಪ್ರೆಷರ್ ಕುಕ್ಕರ್ ಬಾಂಬ್: ತಯಾರಿ ಸುಲಭ, ಪರಿಣಾಮ ಭೀಕರ