ಮಂಗಳೂರು: ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಎನ್ನುವ ಗಾದೆ ಇದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅನವಶ್ಯಕವಾದ ಮಾತು ಈಗ ಅವರಿಗೇ ತಿರುಗುಬಾಣವಾಗುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್ ಪುಂಜಾ ಮುಂದಿನ ಚುನಾವಣೆಯಲ್ಲಿ ನನಗೆ ಮುಸ್ಲಿಮರ ವೋಟ್ ಬೇಡ ಎಂದಿದ್ದರು.
ಇದನ್ನೂ ಓದಿ | ಮಂಗಳೂರು ಕೋರ್ಟ್‌ನಲ್ಲಿ ಮಳಲಿ ಮಸೀದಿ-ಮಂದಿರ ಫೈಟ್
ಹೀಗೆ ಬಹಿರಂಗ ಹೇಳಿಕೆ ನೀಡಿ ಸಾಕಷ್ಟು ಚರ್ಚೆಗೆ ಕಾರಣವಾದರು. ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಆ ಶಾಸಕರಿಗೆ ಮುಸ್ಲಿಂ ಟೋಪಿ ಹಾಗೂ ಹಸಿರು ಶಾಲು ಕಳುಹಿಸಿ ತಿರುಗೇಟು ಕೊಡಲಾಗಿದೆ.
ಇದೀಗ ಪೂಂಜಾ ಮಾತನ್ನು ಖಂಡಿಸಿರುವ ಬೆಳ್ತಂಗಡಿ ತಾಲೂಕು ಕಮ್ಯುನಿಸ್ಟ್ ಪಕ್ಷದ ಸದಸ್ಯರೊಬ್ಬರು, ಶಾಸಕ ಹರೀಶ್ ಪೂಂಜಾ ಅವರಿಗೆ ಮುಸ್ಲಿಂ ಟೋಪಿ ಹಾಗೂ ಹಸಿರು ಶಾಲು ಕಳುಹಿಸಿದ್ದಾರೆ. ಒಂದೆಡೆ ನೀವು ಮುಸ್ಲಿಮರ ಮತ ಬೇಡ ಎನ್ನುತ್ತೀರಿ. ಮತ್ತೊಂದೆಡೆ ಕೇಂದ್ರ ಬಿಜೆಪಿ ಸರ್ಕಾರದ ಎಂಟನೇ ವರ್ಷದ ಸಂಭ್ರಮಾಚರಣೆಗೆ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕ್ರಮ ಆಯೋಜಿಸುತ್ತದೆ. ನಿಮ್ಮ ಇಬ್ಬಗೆಯ ನೀತಿ ಬಿಡಿ. ಚುನಾವಣೆಗೆ ಮುಸ್ಲಿಮರ ಓಲೈಕೆ ಮಾಡಲು ಸಮಾವೇಶ ಮಾಡಬೇಡಿ. ಮುಂದಿನ ದಿನದಲ್ಲಿ ಸರ್ವ ಧರ್ಮದ ಜನರನ್ನು ಸಮನಾಗಿ ನೋಡಿ ನಾಡಿನ ಸೌಹಾರ್ದತೆಯನ್ನ ಎತ್ತಿ ಹಿಡಿಯಿರಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | ಸ್ಯಾನಿಟರಿ ಪ್ಯಾಡ್‌ನಲ್ಲಿ ಅಕ್ರಮ ಚಿನ್ನ! ಮಂಗಳೂರು ಏರ್ ಪೋರ್ಟ್‌ನಲ್ಲಿ₹ 1.3 ಕೋಟಿ ಮೌಲ್ಯದ ಬಂಗಾರ ಜಪ್ತಿ