Site icon Vistara News

Namaz On Road: ಮಂಗಳೂರಿನ ರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ಧ ಎಫ್‌ಐಆರ್‌

Namaz on Road

ಮಂಗಳೂರು: ನಗರದ ರಸ್ತೆಯಲ್ಲಿ ನಮಾಜ್ (Namaz On Road) ಮಾಡಿದ ವಿಚಾರಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದು ಸಂಘಟನೆಗಳು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ನಮಾಜ್ ಮಾಡಿದವರ ವಿರುದ್ಧ ಕದ್ರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಕಲಂ 341, 283, 143 ಜೊತೆಗೆ 149ರಡಿ ಸುಮೋಟೊ ಪ್ರಕರಣ ದಾಖಲಾಗಿದೆ.

ಮೇ 24 ರಂದು ನಗರದ ಕಂಕನಾಡಿಯ ಮಸೀದಿ ಎದುರು ಯುವಕರ ತಂಡ ನಮಾಜ್‌ ಮಾಡಿತ್ತು. ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಘಟನೆ ಬಗ್ಗೆ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಕಿಡಿಕಾರಿದ್ದರು. ಅಲ್ಲದೇ ಇಂತಹ ಘಟನೆ ಮರುಕಳಿಸಿದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ವಿಶ್ವ ಹಿಂದೂ ಪರಿಷದ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಸ್ತೆಯಲ್ಲಿ ನಮಾಜ್‌ ಮಾಡೋದು ನಿಲ್ಲಿಸದಿದ್ರೆ ಹನುಮಾನ್‌ ಚಾಲೀಸಾ ಪಠಣ: ವಿಹಿಂಪ ಎಚ್ಚರಿಕೆ

ಮಂಗಳೂರು: ಮಂಗಳೂರಿನ ಕಂಕನಾಡಿ ಬಳಿ ರಸ್ತೆಯಲ್ಲೇ ನಮಾಜ್ (Namaz in road) ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶ್ವ ಹಿಂದು ಪರಿಷತ್ತು (Vishwa Hindu Parishad) ಆಕ್ಷೇಪ ವ್ಯಕ್ತಪಡಿಸಿತ್ತು. ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ನಿಲ್ಲಿಸದಿದ್ದರೆ ಸಾಮೂಹಿಕವಾಗಿ ಹನುಮಾನ್ ಚಾಲೀಸಾ (Hanuman Chalisa) ಪಠಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿತ್ತು.

ಮೊನ್ನೆ ಶುಕ್ರವಾರ ಮಂಗಳೂರಿನ ಕಂಕನಾಡಿಯಲ್ಲಿ ಮಸೀದಿ ಮುಂಭಾಗ ಇರುವ ರಸ್ತೆಯಲ್ಲೇ ನಮಾಜ್ ಮಾಡಲಾಗಿತ್ತು. ರಸ್ತೆಯಲ್ಲಿ ನಡೆದ ನಮಾಜ್ ವೀಡಿಯೋ ವೈರಲ್ ಆಗಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳು ನಮಾಜ್ ಗಮನಿಸಿ ಯೂಟರ್ನ್ ಮಾಡಿಕೊಂಡಿದ್ದವು. ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಬೆಳವಣಿಗೆ ಬಗ್ಗೆ ವಿಹಿಂಪ ಆಕ್ಷೇಪಿಸಿತ್ತು.

“ಕೆಲವು ಕಡೆ ರಸ್ತೆ ಮತ್ತು ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದು ಜಿಲ್ಲೆಯಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸುತ್ತಿದ್ದಾರೆ. ತಕ್ಷಣ ಜಿಲ್ಲಾಡಳಿತ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದರೆ ಅದೇ ಸ್ಥಳದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದರ ಮೂಲಕ ತಡೆಯುತ್ತೇವೆ ಎಂಬ ಎಚ್ಚರಿಕೆ ಕೊಡುತ್ತೇವೆ” ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದರು.

ಇದು ಪಾಕಿಸ್ತಾನವಲ್ಲ, ಹಿಂದೂಸ್ತಾನ: ಈಶ್ವರಪ್ಪ

“ರಸ್ತೆಯಲ್ಲಿ ನಮಾಜ್‌ ಮಾಡಲು, ಮುಸಲ್ಮಾನರು ಏನು ಬೇಕಾದರೂ ಮಾಡಬಹುದು ಎನ್ನಲು ಇದು ಪಾಕಿಸ್ತಾನ ಅಲ್ಲ, ಹಿಂದೂಸ್ತಾನ” ಎಂದು ಕೆ.ಎಸ್‌ ಈಶ್ವರಪ್ಪ ಗುಡುಗಿದ್ದಾರೆ. “ಮಂಗಳೂರು ಪಾಕಿಸ್ತಾನದ ಜಿಲ್ಲೆಯಲ್ಲ. ಮಂಗಳೂರು ಹಿಂದುತ್ವ ವೀರರ ಭೂಮಿ. ಇಲ್ಲಿ ರಸ್ತೆಯಲ್ಲಿ ನಮಾಜ್ ಮಾಡಲು ದುಷ್ಟ ಶಕ್ತಿಗಳು ಯಶಸ್ವಿಯಾಗಿದ್ದು ನೋವಾಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು, ಸರಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಾಗ್ತಿಲ್ಲ. ಒಬ್ಬ ಇದು ನಮ್ಮ ಸರ್ಕಾರ ಟಿಪ್ಪು ಸುಲ್ತಾನ್ ರಾಜ್ಯ ಅಂತಾನೆ. ಬಿಟ್ಟರೆ ಸಿಎಂ, ಗೃಹ ಸಚಿವರು, ಹಿಂದುಗಳ ಮನೆಗೆ ಬಂದು ನಮಾಜ್ ಮಾಡುತ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

“ನಿಮ್ಮ ಮನೆಯಲ್ಲಿ ನಜಾಮ್ ಮಾಡಿಸಿ ಬೇಡ ಅನ್ನಲ್ಲ. ಎಲ್ಲ ಮುಸ್ಲಿಮರನ್ನು ಟೀಕೆ ಮಾಡುತ್ತಿಲ್ಲ, ಅರ್ಥ ಮಾಡಿಕೊಳ್ಳಿ. ಇವರು ಯಾರೋ ರಾಷ್ಟ್ರದ್ರೋಹಿಗಳು ಮಾಡುತ್ತಿರುವ ಕುತಂತ್ರ. ಇಂತಹವರನ್ನು ಒಳಗೆ ಹಾಕಿದರೆ ಇತರ ಮುಸ್ಲಿಮರಿಗೂ ಸಂತೋಷ ಆಗುತ್ತದೆ. ಮುಸ್ಲಿಂ ಸಮುದಾಯಕ್ಕೆ ಅಪಮಾನ ಆಗುತ್ತಿದೆ ಅಂತ ಅವರೂ ಹೇಳುತ್ತಿದ್ದಾರೆ. ತುಷ್ಟೀಕರಣ ನೀತಿ ಸರ್ಕಾರವನ್ನು ಸುಡುತ್ತೆ, ಭಸ್ಮ ಮಾಡುತ್ತೆ. ರಸ್ತೆಯಲ್ಲಿ ನಮಾಜ್ ಮಾಡಿದವರನ್ನು ತಕ್ಷಣ ಅರೆಸ್ಟ್ ಮಾಡಿ. ರಾಷ್ಟ್ರದ್ರೋಹದ ಕೃತ್ಯ ಕೇಸ್ ಹಾಕಿ” ಎಂದು ಅವರು ಆಗ್ರಹಿಸಿದ್ದಾರೆ.

Exit mobile version