Site icon Vistara News

Pilikula Zoo : ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಬೃಹತ್ ಕಾಳಿಂಗ‌ ಸರ್ಪ!

Pilikula Biological Park Cobra

ಮಂಗಳೂರು: ಮಂಗಳೂರಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದಿಂದ (Pilikula Zoo) ಬೃಹತ್ ಕಾಳಿಂಗ‌ ಸರ್ಪವೊಂದು (King Cobra) ತಪ್ಪಿಸಿಕೊಂಡಿದೆ. ಜೈವಿಕ ಉದ್ಯಾನವನದ ಟಿಕೆಟ್ ಕೌಂಟರ್ ಬಳಿ ಬಂದ ಕಾಳಿಂಗ‌ ಸರ್ಪವು ರಸ್ತೆ ದಾಟಿ ವಿಜ್ಞಾನ ಕೇಂದ್ರ ದತ್ತ ಸಾಗಿದೆ.

ಟಿಕೆಟ್‌ ಕೌಂಟರ್‌ ಬಳಿ ಬಂದ ಕಾಳಿಂಗ‌ ಸರ್ಪವನ್ನು ಕಂಡೊಡನೆ ಸಿಬ್ಬಂದಿ ಹಾಗೂ ಪ್ರವಾಸಕ್ಕೆ ಬಂದಿದ್ದ ಜನರು ಹೌಹಾರಿದರು. ಅಧಿಕಾರಿಗಳ ನಿರ್ಲಕ್ಷದಿಂದಲೇ ಕಾಳಿಂಗ ಸರ್ಪ ತಪ್ಪಿಸಿಕೊಂಡಿದೆ ಎಂಬ ಆರೋಪಗಳಿವೆ. ಸದ್ಯ ಕಾಳಿಂಗ‌ ಸರ್ಪ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Elephant Attack : ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ

ಕಾಳಿಂಗ ಸರ್ಪ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣ

ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನವು 2004ರಲ್ಲಿ ಉದ್ಘಾಟನೆಗೊಂಡಿತ್ತು. ಪಿಲಿಕುಳ ಮೃಗಾಲಯ ಸೇರಿ ಪಿಲಿಕುಳದ ಜೈವಿಕ ಉದ್ಯಾನ, ಲೇಕ್‌ ಗಾರ್ಡನ್‌, ಸಂಸ್ಕೃತಿ ಗ್ರಾಮ ಹಾಗೂ ಗುತ್ತು ಮನೆ ಎಲ್ಲವೂ ಪ್ರವಾಸಿಗರ ಗಮನ ಸೆಳೆದಿದೆ.

ಪ್ರಾಣಿಗಳ ವಂಶಾಭಿವೃದ್ಧಿಯಲ್ಲಿ ದೇಶದ 17 ಮೃಗಾಲಯಗಳಲ್ಲಿ ಪಿಲಿಕುಳ ಮೃಗಾಲಯವು ಮೊದಲ ಸ್ಥಾನದಲ್ಲಿದೆ. ಪಿಲಿಕುಳ ಜೈವಿಕ‌ ಉದ್ಯಾನವನದಲ್ಲಿ 120ಕ್ಕೂ ಹೆಚ್ಚು ವಿವಿಧ ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 40 ಪ್ರಾಣಿಪಕ್ಷಿಗಳು ಅಳಿವಿನಂಚಿನಲ್ಲಿರುವ ಜೀವಿಗಳಾಗಿವೆ. ಇತರ ಮೃಗಾಲಯಗಳಿಗೆ ಹೋಲಿಸಿದರೆ ಇಲ್ಲಿ ಹುಲಿ, ಚಿರತೆ, ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ. ಅದರಲ್ಲಿಯೂ ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಇಲ್ಲಿ ಮಾತ್ರ ಆಗುತ್ತಿದೆ. ಕಾಳಿಂಗ ಸರ್ಪವನ್ನು ವೈಜ್ಞಾನಿಕವಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಈಗಾಗಲೇ 180 ಮರಿಗಳಾಗಿದೆ. ಹೆಚ್ಚುವರಿ ಕಾಳಿಂಗ ಮರಿಗಳನ್ನು ಕಾಡಿಗೆ ಬಿಡಲಾಗಿದೆ. ಸಂತಾನಾಭಿವೃದ್ಧಿ ಹೆಚ್ಚಲು ಪಿಲಿಕುಳದಲ್ಲಿರುವ ವಾತವರಣ, ಆರೈಕೆ ಮುಖ್ಯವಾಗಿದೆ. ಇಲ್ಲಿ ಅವುಗಳಿಗೆ ಕಾಡಿನಲ್ಲಿ ಇರುವ ವಾತವರಣ ನಿರ್ಮಾಣ ಮಾಡಲಾಗಿದೆ.

ಇತ್ತೀಚೆಗೆ ಅಳಿವಿನಂಚಿನಲ್ಲಿರುವ ತೋಳಗಳು ಪಿಲಿಕುಳ ಉದ್ಯಾನವನಕ್ಕೆ ಸೇರ್ಪಡೆಯಾಗಿತ್ತು. ಪ್ರಾಣಿ ವಿನಮಯ ಯೋಜನೆ ಮೂಲಕ ಆಂಧ್ರದ ವಿಶಾಖಪಟ್ಟಣದ ಮೃಗಾಲಯದಿಂದ ತರಿಸಲಾಗಿತ್ತು. ಹೊಸ ಜಗತ್ತಿನ ಮಂಗಗಳೆಂದು ಕರೆಯುವ ನಾಲ್ಕು ಜತೆ ಅಳಿಲು ಮಂಗವು ಇಲ್ಲಿವೆ. ಮಧ್ಯ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version