ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪಟ್ಟಣದ ಬಡ ಟೈಲರ್ ಒಬ್ಬರಿಗೆ ಕೇರಳ ಲಾಟರಿಯ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಕೇರಳ ರಾಜ್ಯ ಲಾಟರಿಯ 80 ಲಕ್ಷ ರೂಪಾಯಿ ಅವರಿಗೆ ದೊರೆತಿದೆ.
ಉಪ್ಪಿನಂಗಡಿಯ ಆನಂದ ಟೈಲರ್ ಎಂಬವರಿಗೆ ಈ ಬಹುಮಾನ ದೊರೆತಿದೆ. ಕೇರಳದ ಕಾಸರಗೋಡಿನಿಂದ ಇವರು ಲಾಟರಿ ಖರೀದಿಸಿದ್ದರು. ನೀಲೇಶ್ವರದಲ್ಲಿರುವ ಮಗಳ ಮನೆಗೆ ಹೋಗಿದ್ದಾಗ ಟಿಕೇಟ್ ಕೊಂಡಿದ್ದರು. ಈ ಕೇರಳ ರಾಜ್ಯ ಲಾಟರಿಗೆ 80 ಲಕ್ಷ ರೂ. ಮೊದಲ ಬಹುಮಾನವಿತ್ತು. ಎಪ್ರಿಲ್ 15ರಂದು ಡ್ರಾ ಆಗಿದ್ದು, ಆನಂದರಿಗೆ ಒಲಿದಿದೆ.
ಅನಾರೋಗ್ಯದಿಂದ ವೃತ್ತಿ ನಿಲ್ಲಿಸಿದ್ದ ಆನಂದ ಟೈಲರ್ ಬಡತನದ ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಅಪರೂಪಕ್ಕೆ ಕೇರಳಕ್ಕೆ ಹೋದಾಗ ಲಾಟರಿ ಖರೀದಿಸುತ್ತಿದ್ದರು.
ಕರ್ನಾಟಕದಲ್ಲಿ ಲಾಟರಿ ನಿಷೇಧಿಸಲಾಗಿದೆ. ಆದರೆ ಕೇರಳದಲ್ಲಿ ರಾಜ್ಯ ಸರ್ಕಾರವೇ ಲಾಟರಿ ನಡೆಸುತ್ತಿದೆ. ಕರ್ನಾಟಕದಿಂದ ತೆರಳುವ ಮಂದಿ ಆಗಾಗ ಇಲ್ಲಿ ಲಾಟರಿ ಪಡೆಯುವ ಸುದ್ದಿಗಳು ಬರುತ್ತಿವೆ. ದಕ್ಷಿಣ ಕನ್ನಡದ ಸುಳ್ಯ ಮೂಲದ ಸಣ್ಣ ಹೋಟೆಲ್ ನಡೆಸುವ ವ್ಯಕ್ತಿಯೊಬ್ಬರು ಕೇರಳ ಲಾಟರಿಯಲ್ಲಿ 4 ಕೋಟಿ ರೂ. ಹಣ ಪಡೆದ ಘಟನೆ 2019ರಲ್ಲಿ ನಡೆದಿತ್ತು.
ಕೇರಳ ಲಾಟರಿ, ಕೇರಳದ ಅಂಗಡಿಗಳಲ್ಲಿ ಮಾತ್ರ ಸಿಗುತ್ತಿದ್ದು, ರಾಜ್ಯದಾಚೆ ಸಿಗುವುದಿಲ್ಲ ಹಾಗೂ ಅದನ್ನು ಆನ್‌ಲೈನ್‌ನಲ್ಲಿ ಬಿಕರಿ ಮಾಡಲಾಗುವುದಿಲ್ಲ. ಕೇರಳ ಲಾಟರಿ ಎಂಬ ಹೆಸರಿನಿಂದ ವಂಚಿಸುವ ಕೆಲವು ವೆಬ್‌ಸೈಟ್‌ಗಳು ಈ ಅಧಿಕೃತ ಲಾಟರಿಯ ಜನಪ್ರಿಯತೆಯ ಹಿನ್ನೆಲೆಯಲ್ಲಿ ಕಾರ್ಯಾಚರಿಸುತ್ತವೆ.
ಇದನ್ನೂ ಓದಿ: ಅಬುಧಾಬಿಯ ಲಾಟರಿ ಖರೀದಿಸಿ, 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ; ಕರೆ ಬಂದಾಗ ನಂಬರ್ ಬ್ಲಾಕ್ ಮಾಡಿದ್ದೇಕೆ?