ಸುಳ್ಯ: ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ (ಜು.26) ರಾತ್ರಿ ಬಿಜೆಪಿ ಯುವ ಮೋರ್ಚಾ ಮುಖಂಡನ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕರಾವಳಿಯ ಹಲವೆಡೆ ಸ್ವಯಂಪ್ರೇರಿತ ಬಂದ್ ನಡೆಸಲಾಗಿದೆ. ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (೨೯) (Praveen Nettaru Murder) ಅವರನ್ನು ಅವರ ಅಂಗಡಿಯಲ್ಲಿಯೇ ಹತ್ಯೆ ಮಾಡಲಾಗಿತ್ತು.
ಇದೀಗ ಪುತ್ತೂರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಉದ್ರಿಕ್ತರಿಂದ ಕಲ್ಲು ತೂರಾಟ ನಡೆದಿದೆ. ಹಂತಕರನ್ನು ಕೂಡಲೇ ಸುಬಂಧಿಸುವಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ರಾತೋರಾತ್ರಿ ಆಸ್ಪತ್ರೆಯ ಎದುರು ನೂರಾರು ಮಂದಿ ಜಮಾಯಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಇದೀಗ ಪೊಲೀಸರು ಮೂರು ಆಯಾಮದಲ್ಲಿ ತನಿಖೆ ಅರಂಭಿಸಿದ್ದಾರೆ. ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಸ್ವತಃ ತನಿಖೆಗೆ ಇಳಿದಿದ್ದು, ಕೋಮು ದ್ವೇಷದಿಂದ ಹತ್ಯೆ ನಡೆದಿದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಕೇರಳ ರಿಜಿಸ್ಟ್ರೇಷನ್ ಬೈಕ್‌ನಲ್ಲಿ ಬಂದಿದ್ದ 3 ದುಷ್ಕರ್ಮಿಗಳಿಂದ ಪ್ರವೀಣ್ ನೆಟ್ಟಾರು ಹತ್ಯೆ
ಪ್ರವೀಣ್ ಹತ್ಯೆ ಕುರಿತು ಸಚಿವ ಸುನೀಲ್ ಕುಮಾರ್ ಟ್ವೀಟ್ ಮಾಡಿ ʻಸರ್ಕಾರ ಹಾಗೂ ಸಮಾಜ ಪ್ರವೀಣ್ ಕುಟುಂಬದ ಜತೆಯಿದೆ. ಹಿಂದುಗಳ ಒಗ್ಗಟ್ಟು ಒಡೆಯುವುದಕ್ಕೆ ಮತಾಂಧ ಶಕ್ತಿಗಳು ನಡೆಸುತ್ತಿರುವ ಇಂಥ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲʼ ಎಂದಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ಮೂವರು ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಬೈಕ್ ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ಕೇರಳ ಮೂಲದ ದುಷ್ಕರ್ಮಿಗಳು ಕೊಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬೈಕ್ ಬಗ್ಗೆ ಮತ್ತಷ್ಟು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಪುತ್ತೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಬುಧವಾರ (ಜು.27) ಬೆಳಗ್ಗೆ ೯ ಗಂಟೆಗೆ ಪ್ರವೀಣ್ ನೆಟ್ಟಾರು ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹುಟ್ಟೂರು ನೆಟ್ಟಾರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಬಂದ್‌ಗೆ ಕರೆ: ಪ್ರವೀಣ್ ಹತ್ಯೆಯನ್ನು ಖಂಡಿಸಿ ಸ್ಥಳೀಯ ಹಿಂದೂ ಪರ ಸಂಘಟನೆಗಳು ಇಂದು ಪುತ್ತೂರು, ಸುಳ್ಯ, ಕಡಬ ತಾಲ್ಲೂಕು ಬಂದ್‌ಗೆ ಕರೆ ನೀಡಿವೆ. ಈ ನಡುವೆ ದುಷ್ಕರ್ಮಿಗಳ ಪತ್ತೆಗೆ ಬೆಳ್ಳಾರೆ, ಪುತ್ತೂರು, ಕೇರಳದ ಗಡಿ ಭಾಗದಲ್ಲಿ ಮಂಗಳೂರು ಪೊಲೀಸರು ನಾಕಾಬಂದಿ ಮಾಡಿದ್ದಾರೆ.
ಇದನ್ನೂ ಓದಿ | ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ