Site icon Vistara News

Karnataka Election: ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತಿ, ಸುಳ್ಳು ಹಬ್ಬಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ರಮಾನಾಥ ರೈ

Ramanath Rai announces retirement from electoral politics

ಬಂಟ್ವಾಳ: ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಗೆ ಈ ಚುನಾವಣೆಯಲ್ಲಿ (Karnataka Election) ತಕ್ಕ ಪಾಠ ಕಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.

ಪಟ್ಟಣದ ಬಿ.ಸಿ.ರೋಡ್ ಪರ್ಲಿಯಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ಬಂಟ್ವಾಳ ಶಾಂತವಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳದ ನೆಮ್ಮದಿ ಕೆಡಿಸಿದವರೇ ಬಿಜೆಪಿಯವರು. ನಮ್ಮ ಅವಧಿಯಲ್ಲಿ ಚುನಾವಣೆಗೂ ಆರು ತಿಂಗಳಿರುವಾಗ ಗಲಭೆಗಳಿಗೆ ಸಂಚು ರೂಪಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದರು. ಕೊಲೆ ಪ್ರಕರಣವೊಂದನ್ನು ಕಾಂಗ್ರೆಸ್ ನಾಯಕರ ತಲೆಗೆ ಕಟ್ಟಲು ನೋಡಿದ್ದರು. ಆದರೆ, ನಾಲ್ಕೇ ದಿನದಲ್ಲಿ ಆರೋಪಿಗಳು ಪತ್ತೆಯಾದಾಗ ಅವರು ಬಿಜೆಪಿ ಕಾರ್ಯಕರ್ತರಾಗಿದ್ದುದು ಜಗಜ್ಜಾಹೀರಾಗಿತ್ತು ಎಂದು ಅವರು ಹೇಳಿದರು.

ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವ ಇವರಿಗೆ ಮಾತನಾಡಲು ವಿಷಯಗಳು ಸಿಗುತ್ತಿಲ್ಲ. ಅದಕ್ಕೆ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ನನ್ನ ನಾಮಪತ್ರ ಸಲ್ಲಿಕೆಗೆ ಮಂಜೇಶ್ವರದ ಶಾಸಕ ಆಗಮಿಸಿದ್ದಕ್ಕೆ ಬೇರೆ ಬಣ್ಣ ಕಟ್ಟಲು ನೋಡುತ್ತಿದ್ದಾರೆ. ಮಂಜೇಶ್ವರದ ಶಾಸಕ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಶಾಸಕರಾಗಿದ್ದು, ನನ್ನ ಮೇಲಿನ ಅಭಿಮಾನದಿಂದ ನಾಮಪತ್ರ ಸಲ್ಲಿಕೆಗೆ ಶುಭಕೋರಲು ಬಂದಿದ್ದರು. ಆದರೆ, ಬಿಜೆಪಿಗರು ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸಿ, ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಜನತೆ ಬಿಜೆಪಿಯ ಬಂಡವಾಳವನ್ನು ಅರಿತಿದ್ದು, ವಾಮಮಾರ್ಗದಿಂದ ಅಧಿಕಾರ ಹಿಡಿಯಬಹುದು ಎಂಬ ಇವರ ಕನಸು ನುಚ್ಚುನೂರಾಗಲಿದೆ ಎಂದು ರೈ ಭವಿಷ್ಯ ನುಡಿದರು.

ಇದನ್ನೂ ಓದಿ | Karnataka Election: ಮೋದಿ ಈಗ ಅಳುಮುಂಜಿ ಮಗು; ಆಳುವ ದೊರೆಗೆ ಅಳುವುದೇ ಕೆಲಸವೆಂದ ಮಲ್ಲಿಕಾರ್ಜುನ ಖರ್ಗೆ

ಭ್ರಷ್ಟ ಬಿಜೆಪಿ ತೊಲಗಿಸಿ: ಅಶ್ವನಿ ಕುಮಾರ್ ರೈ

ರಮಾನಾಥ ರೈಯವರು ನಿಸ್ವಾರ್ಥ ಜನಸೇವಕ. ಅವರು ಸಚಿವರಾಗಿದ್ದಾಗಲೂ ಅಧಿವೇಶನವಿದ್ದರೆ ಮಾತ್ರ ಬೆಂಗಳೂರಿನಲ್ಲಿರುತ್ತಿದ್ದರು. ವಾರಾಂತ್ಯದಲ್ಲಿ ಊರಿಗೆ ಬಂದು ತಮ್ಮ ಕ್ಷೇತ್ರದ ಜನರ ನಡುವೆ ಇರುತ್ತಿದ್ದರು. ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ, ಬಡವರ ಸೇವೆಗಾಗಿ ಐಷಾರಾಮಿ ಜೀವನವನ್ನು ತ್ಯಜಿಸಿದವರು. ಶಾಸಕ, ಸಚಿವನಾದರೂ ಬೆಂಗಳೂರು, ಮಂಗಳೂರು, ಬಿ.ಸಿ.ರೋಡ್ ನಲ್ಲಾಗಲೀ ಒಂದೇ ಒಂದು ಮನೆ ಕಟ್ಟಿಲ್ಲ. ತನ್ನ ಹಿರಿಯರು ನೀಡಿದ ಮನೆಯಲ್ಲಿ, ಮನೆಗೆ ಬಂದವರನ್ನೆಲ್ಲಾ ಪಕ್ಷಾತೀತವಾಗಿ, ಜಾತ್ಯತೀತವಾಗಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕನಿಗೆ ಮತ್ತೊಮ್ಮೆ ಅಧಿಕಾರ ನೀಡುವ ಮೂಲಕ ಅವರ ಕೊನೆಯ ಚುನಾವಣೆಯಲ್ಲಿ ಗೌರವಪೂರ್ಣ ಫಲಿತಾಂಶ ನೀಡುವುದು ನಮ್ಮೆಲ್ಲರ ಹೊಣೆ ಎಂದು ಮುಖಂಡ ಅಶ್ವನಿ ಕುಮಾರ್ ರೈ ತಿಳಿಸಿದರು.

Exit mobile version