Site icon Vistara News

ಕರಾವಳಿಯಲ್ಲಿ ತಳ್ಳುಗಾಡಿ, ಗೂಡಂಗಡಿಗಳಿಗೆ ಉಗ್ರ ಸಂಪರ್ಕ

ಉಗ್ರ ಸಂಪರ್ಕ

ಮಂಗಳೂರು: ಕೇರಳ ಕರಾವಳಿಯಲ್ಲಿ ತಳ್ಳುಗಾಡಿ, ಗೂಡಂಗಡಿಗಳಿಗೆ ಉಗ್ರ ಸಂಪರ್ಕ ಇರುವುದಾಗಿ ಕೇಂದ್ರ ಗುಪ್ತಚರ ಇಲಾಖೆಯಿಂದ ಕೇರಳ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಮಂಗಳೂರು ಗಡಿಯತ್ತಲೂ ಹದ್ದಿನ ಕಣ್ಣಿಡಲು ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಕೇರಳದ ಕೋವಲಂ ಮತ್ತು ಮಂಗಳೂರು ನಡುವೆ ಐಷಾರಾಮಿ ವಾಹನಗಳ ಓಡಾಟಗಳು ಆಗುತ್ತಿವೆ. ಕೇರಳದ ವಿವಿಧ ಜಿಲ್ಲೆಗಳಿಗೆ ಶಸ್ತ್ರಾಸ್ತ್ರ ಮತ್ತು ನಗದು ಸಾಗಿಸಲು ವಾಹನ ಬಳಕೆ ಮಾಡುತ್ತಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | ಕಾಶ್ಮೀರದ ಅವಂತಿಪುರದಲ್ಲಿ ನಡೆದ ಎನ್‌ ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಉಗ್ರರು ಕಪ್ಪು ಹಣವನ್ನು ಬಿಳಿ ಮಾಡಲು ಹೆದ್ದಾರಿ ಗೂಡಂಗಡಿ ಬಳಸುವ ಶಂಕೆ ಇದೆ. ಹೆದ್ದಾರಿ ಬದಿಯ ಕೆಲ ಗೂಡಂಗಡಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟಿನ ಜತೆ ಐಶಾರಾಮಿ ವಾಹನಗಳ ಅಕ್ರಮ ವ್ಯವಹಾರದ ಕುರಿತು ಅನುಮಾನಗಳು ಮೂಡಿದೆ. ಹೀಗಾಗಿ ಕೇರಳ ಕರಾವಳಿ ಮತ್ತು‌ ಮಂಗಳೂರು ಗಡಿಗಳಲ್ಲಿ ಹದ್ದಿನ ಕಣ್ಣಿಡಲು ಕೇರಳ ಪೊಲೀಸ್ ಇಲಾಖೆಗೆ ಕೇಂದ್ರ ‌ಗುಪ್ತಚರ ಇಲಾಖೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕರಾವಳಿಯಲ್ಲಿ ಸ್ಯಾಟಲೈಟ್‌ ಫೋನ್‌

ಕರಾವಳಿ ಜಿಲ್ಲೆಗಳ 3 ಕಡೆಗಳಲ್ಲಿ, ಚಿಕ್ಕಮಗಳೂರಿನ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಏರ್ಪಟ್ಟಿರುವುದು ಪ್ರದೇಶದಲ್ಲಿ ಮತ್ತೊಮ್ಮೆ ಆತಂಕ ಹುಟ್ಟಿಸಿದೆ. ಕಳೆದ 10 ದಿನಗಳ ಅವಧಿಯಲ್ಲಿ 4 ಕಡೆಗಳಿಂದ ಸಂಪರ್ಕ ಏರ್ಪಟ್ಟಿರುವುದು ಪೊಲೀಸರಿಗೆ ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಸಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ ಈ ಸಂಪರ್ಕ ಏರ್ಪಟ್ಟಿರುವುದು ಕಂಡುಬಂದಿದ್ದು, ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ನಿಗೂಢ ವ್ಯಕ್ತಿಗಳು ಯಾರು ಎಂಬ ಪ್ರಶ್ನೆ ಎದ್ದಿದೆ. ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಿರೋ ಬೇಹುಗಾರಿಕಾ ಏಜೆನ್ಸಿಗಳು ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿವೆ.

ಶಿವಮೊಗ್ಗದಲ್ಲೂ ಸ್ಯಾಟಲೈಟ್‌ ಫೋನ್‌

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಉಗ್ರರ ಕರಿ ನೆರಳು ಇರುವ ಅನುಮಾನ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಎರಡು ಕಡೆಗಳಲ್ಲಿ ನಿಷೇಧಿತ ಸ್ಯಾಟಲೈಟ್ ಪೋನ್ ಬಳಕೆ ಅನುಮಾಣ ಮೂಡಿದೆ. ಅದೂ ಸಾಗರ ತಾಲೂಕಿನ ಸಿಗಂದೂರು, ಶಿಕಾರಿಪುರ ಸಮೀಪದಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಆಗಿರುವುದು ಪೊಲೀಸ್‌ ಇಲಾಖೆಗೆ ಹೊಸ ಸವಾಲು ಎದುರಾಗಿದೆ.

ಕಳೆದ 15 ದಿನಗಳ ಅವಧಿಯಲ್ಲಿ ಮಲೆನಾಡಿನಲ್ಲಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿದ್ದು ಯಾರು ಎಂದು ತನಿಖೆ ನಡೆಸಲಾಗುತ್ತಿದೆ. ಪ್ರವಾಸಿಗರ ಸೋಗಿನಲ್ಲಿ ಬಂದವರು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆಯೇ ಎಂಬ ಕೋನದಲ್ಲೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಹಿಜಾಬ್‌ಗೆ ಅವಕಾಶವಿಲ್ಲದಿದ್ದರೆ ಕಾಲೇಜೇ ಬೇಡವೆಂದ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿನಿಯರು

Exit mobile version