ದಕ್ಷಿಣ ಕನ್ನಡ: ಪುತ್ತೂರಿನ ಕಡಬ ತಾಲೂಕಿನ ಕಾಣಿಯೂರು ಸಮೀಪ ಬೈತಡ್ಕ ಸೇತುವೆಯಿಂದ ಮಾರುತಿ ಕಾರೊಂದು ಹಳ್ಳಕ್ಕೆ ಬಿದ್ದಿತ್ತು. ಜುಲೈ 9ರ ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿತ್ತು. ಮರುದಿನ ಭಾನುವಾರ ಕಾರು ಪತ್ತೆಯಾಗಿತ್ತಾದರೂ ಕಾರಿನೊಳಗೆ ಇದ್ದವರು ಪತ್ತೆಯಾಗಿರಲಿಲ್ಲ.
ಮೂರು ದಿನದ ಬಳಿಕ ಹಳ್ಳದಲ್ಲಿ ನೀರು ಕಡಿಮೆಯಾದ್ದರಿಂದ ಈಗ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಜುಲೈ 9ರ ಮಧ್ಯರಾತ್ರಿ ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ವಿಟ್ಲ ಮೂಲದ ಧನುಷ್ ಹಾಗೂ ವಿಟ್ಲ ಕನ್ಯಾನದ ಧನುಷ್ (ಧನಂಜಯ) ನೀರು ಪಾಲಾಗಿದ್ದರು. ಈ ಯುವಕರಿಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ | ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಇಬ್ಬರ ಸಾವು
ಕಾರು ಜು.10ರಂದೇ ಮಧ್ಯಾಹ್ನ ಪತ್ತೆ ಹಚ್ಚಲಾಗಿತ್ತು. ಎಸ್‌ಡಿಆರ್‌ಎಫ್ ತಂಡ ಎರಡು ದಿನ ಹುಡುಕಾಡಿದರೂ ಮೃತ ದೇಹಗಳು ಪತ್ತೆಯಾಗಿರಲಿಲ್ಲ. ಇದೀಗ ಮಳೆ ಕಡಿಮೆಯಾಗಿ ಹೊಳೆಯಲ್ಲಿ ನೀರು ಕಡಿಮೆ ಆದಾಗ ಮೃತದೇಹಗಳು ಪತ್ತೆಯಾಗಿವೆ.
ಬೆಳಗ್ಗೆ 8 ಗಂಟೆಗೆ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು. ಬಳಿಕ ಅದಕ್ಕಿಂತ 50 ಮೀಟರ್ ಹಿಂದೆಯೇ ಇನ್ನೊಂದು ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ | Rain News | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ತೋಟ, ಮನೆಗಳಿಗೆ ನುಗ್ಗಿದ ನೀರು