Site icon Vistara News

UT Khader : ಕೋಲದಲ್ಲಿ ಭಾಗಿಯಾದ ಖಾದರ್‌ ನಡೆಗೆ ಮುಸ್ಲಿಮರ ಆಕ್ಷೇಪ; ಇದಕ್ಕೆ ಸ್ಪೀಕರ್‌ ಉತ್ತರವೇನು?

UT Khader Kola

ಮಂಗಳೂರು: ಸರ್ವಧರ್ಮ ಸಮಭಾವ ಮತ್ತು ಸರ್ವ ಧರ್ಮ ಪ್ರೇಮಕ್ಕೆ ಹೆಸರಾದ ಮಂಗಳೂರು ಶಾಸಕ (Mangalore MLA), ರಾಜ್ಯ ವಿಧಾನಸಭೆಯ ಸ್ಪೀಕರ್‌ (Speaker of Assembly) ಯು.ಟಿ. ಖಾದರ್‌ (UT Khader) ಅವರು ಭಾನುವಾರ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲ (Khader Participated in Harake Kola) ನೆರವೇರಿಸಿದರು. ಅವರ ಈ ನಡೆಗೆ ಎಲ್ಲ ಕಡೆ ಪ್ರಶಂಸೆಗೆ ಪಾತ್ರವಾಗಿದೆ, ಅದರ ಜತೆಗೆ ಆಕ್ಷೇಪದ ಧ್ವನಿಗಳೂ ಕೇಳಿಬಂದಿವೆ.

ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪಡೋಲಿ ಬೈಲ್ ನಲ್ಲಿ ಹರಕೆ ಕೋಲ ನಡೆದಿದೆ. ಹರಕೆ ಕೋಲದಲ್ಲಿ ಭಾಗವಹಿಸಿದ ಯು ಟಿ ಖಾದರ್ ಅವರು ಕಾರ್ಣಿಕ ದೈವಗಳಾದ ಕಲ್ಲುರ್ಟಿ, ಕಲ್ಕೂಡ ದೈವಗಳ ಆಶೀರ್ವಾದ ಪಡೆದರು. ಭಕ್ತಿಯಿಂದ ನಡೆದುಕೊಂಡ ಅವರೊಂದಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜಾವ ಮತ್ತಿತ್ತರು ಭಾಗಿಯಾಗಿದ್ದರು.

ಖಾದರ್‌ ನಡೆಗೆ ಸಾಲೆತ್ತೂರು ಫೈಜಿ ಆಕ್ಷೇಪ

ಖಾದರ್‌ ಅವರ ನಡೆ ಎಲ್ಲರ ಪ್ರೀತಿಗೆ ಕಾರಣವಾದರೂ ಕೆಲವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮುಖಂಡ ಸಾಲೇತ್ತೂರು ಫೈಜಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಖಾದರ್‌ ಅವರನ್ನು ಒಬ್ಬ ರಾಜಕಾರಣಿಯಾಗಿ ಮಾತ್ರ ನೋಡಿ ಎಂದು ಸಲಹೆ ನೀಡಿದ ಅವರು, ಖಾದ‌ರ್ ಕೊರಗಜ್ಜನಿಗೋ, ಕಲ್ಲುರ್ಟಿ, ಪಂಜುರ್ಲಿಗಗೋ ಆರಾಧಿಸಲಿ, ಪ್ರಸಾದ ತೆಗೆದುಕೊಂಡು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : UT Khader: ಉಡುಪಿ ಶ್ರೀಕೃಷ್ಣನಲ್ಲಿಗೆ ಸ್ಪೀಕರ್‌ ಖಾದರ್‌ ಭೇಟಿ; ಪ್ರಾರ್ಥಿಸಿದ್ದೇನು?

ಸಾಲೆತ್ತೂರು ಫೈಜಿ ಪೋಸ್ಟ್‌ನಲ್ಲಿ ಏನಿದೆ?

ಕೊರಗಜ್ಜನ ಭಕ್ತ ಯುಟಿ ಖಾದರ್ ನನ್ನು ಮುಸ್ಲಿಮರು ಕೇವಲ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ, ಉಲಮಾ , ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾದೀತು.

ಖಾದ‌ರ್ ಕೊರಗಜ್ಜನಿಗೋ, ಕಲ್ಲುರ್ಟಿ, ಪಂಜುರ್ಲಿಗೋ ಆರಾಧಿಸಲಿ, ಪ್ರಸಾದ ತೆಗೆದುಕೊಂಡು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವಾತಂತ್ರ್ಯ. ಅದು ಭಾರತದಲ್ಲಿರುವ ಎಲ್ಲರಿಗೂ ಇರುವ ಸಾಂವಿಧಾನಿಕ ಸ್ವಾತಂತ್ರ್ಯ. ಅದನ್ನು ತಡೆಯುವ ಹಕ್ಕು ನಮಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು ಮಾತ್ರ ನಾವು ಆತನ ಭೂತಾರಾಧನೆಯನ್ನು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ.- ಎಂದು ಸಾಲೆತ್ತೂರು ಫೈಜಿ ಹೇಳಿದ್ದಾರೆ.

ಸಾಲೆತ್ತೂರು ಫೈಜಿ ಆಕ್ಷೇಪಕ್ಕೆ ಖಾದರ್‌ ಪ್ರತಿಕ್ರಿಯೆ ಏನು?

ಸಾಲೆತ್ತೂರು ಫೈಜಿ ಎತ್ತಿರುವ ಆಕ್ಷೇಪಕ್ಕೆ ಉತ್ತರ ನೀಡಿರುವ ‌ ಸ್ಪೀಕರ್‌ ಯು.ಟಿ. ಖಾದರ್‌ ಅವರು, ಸೋಷಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳಲ್ಲ. ಪ್ರಶ್ನೆ ಕೇಳುವವರನ್ನು ಇತಿಹಾಸ ನೆನಪಿಗೆ ಇಟ್ಟುಕೊಳ್ಳಲ್ಲ. ಯಾರು ಕೆಲ್ಸ ಮಾಡ್ತಾರೆ , ಯಾರು ಉತ್ತರ ಕೊಡ್ತಾರೆ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಎಂದಿದ್ದಾರೆ.

ʻʻನಮ್ಮ ಪ್ರಾಚಿನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ದರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಯಾರೋ ಒಬ್ಬ ಗೀಚಿದರೆ ನೂರು ಜನ ಒಪ್ಪಿಕೊಳ್ಳಲ್ಲ/ ಅದಕ್ಕೆಲ್ಲ ನಾವು ಮಹತ್ವ ಕೊಡಬಾರದುʼʼ ಎಂದು ಖಾದರ್‌ ಹೇಳಿದ್ದಾರೆ.

Exit mobile version