Site icon Vistara News

Woman death: ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Woman Death Nayana MG

ಮಂಗಳೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ (Woman Jumps from Moving train) ಘಟನೆ ಮಂಗಳೂರು (Mangalore News) ಬಳಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ಬಂಟ್ವಾಳದ ಬಳಿ ನೇತ್ರಾವತಿ ನದಿಗೆ ಹಾರಿ ಆಕೆ ಆತ್ಮಹತ್ಯೆ (Woman death) ಮಾಡಿಕೊಂಡಿದ್ದಾರೆ.

ತುಮಕೂರಿನ ಮಧುಗಿರಿ ನಿವಾಸಿ ನಯನಾ ಎಂ.ಜಿ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಮಧುಗಿರಿ ತಾಲೂಕಿನ ಪಡಸಾಲಹಟ್ಟಿ ಮಿಡಿಗೇಶಿ ಹೋಬಳಿಯವರು. ಇವರು ಅವಿವಾಹಿತೆ. ಅವರು ಪ್ರಯಾಣಿಸುತ್ತಿದ್ದ ರೈಲು ಬೆಳಗ್ಗೆ ಮಂಗಳೂರಿನಿಂದ ಹೊರಟು ಬೆಂಗಳೂರಿಗೆ (Mangalore-Bangalore train) ಬರುತ್ತಿತ್ತು. ಮುಂದೆ ಬಿ.ಸಿ. ರೋಡ್‌ ನಿಲ್ದಾಣ ದಾಟಿ ರೈಲು ಸಾಗುತ್ತಿತ್ತು.

ರೈಲು ನೇತ್ರಾವತಿ ನದಿಯ ಸೇತುವೆ ಬಳಿ ಬಂದಾಗ ನಯನಾ ಅವರು ಬಾಗಿಲಿನ ಮೂಲಕ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಸೇರಿದರು. ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶವವನ್ನು ನದಿಯಿಂದ ಮೇಲಕ್ಕೆ ಎತ್ತಿದ್ದಾರೆ. ಮುಳುಗುತಜ್ಞ ಮಹಮ್ಮದ್ ತಂಡ ಶವವನ್ನು ಮೇಲೆತ್ತುವಲ್ಲಿ ದೊಡ್ಡ ಪಾತ್ರ ವಹಿಸಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ನಯನಾ ಅವರು ಒಬ್ಬರೇ ಪ್ರಯಾಣಿಸುತ್ತಿದ್ದರೇ ಅಥವಾ ಕುಟುಂಬ ಸಮೇತವಾಗಿ ಸಾಗುತ್ತಿದ್ದರೇ? ಅವರು ಎಲ್ಲಿಂದ ಬಂದಿದ್ದರು? ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಯಾಕೆ ಮಾಡಿದರು? ರೈಲಿನಿಂದ ಜಿಗಿಯುವ ಅಪಾಯಕಾರಿ ನಿರ್ಧಾರ ಯಾಕೆ ಮಾಡಿದರು ಎಂಬ ಅಂಶಗಳ ಮೇಲೆ ಪೊಲೀಸರು ಬೆಳಕು ಚೆಲ್ಲಬೇಕಾಗಿದೆ.

ಇದನ್ನೂ ಓದಿ : Tiger Attack : ಹುಲಿ ಬಾಯಿಗೆ ಸಿಕ್ಕಿದ ಗೋಮಾತೆಯ ಕಣ್ಣೀರ ಕಥೆ; ಇವಳು ತಾಯಿ ಪ್ರೀತಿ ಮರೆಯದ ಪುಣ್ಯಕೋಟಿ

ನಿಂತಿದ್ದ ಟೆಂಪೋಗೆ ಬೈಕ್‌ ಡಿಕ್ಕಿ: ಇಬ್ಬರು ಸವಾರರು ಮೃತ್ಯು

ತುಮಕೂರು: ಹೆದ್ದಾರಿ ಬದಿ ನಿಂತಿದ್ದ ಮಿನಿ ಟೆಂಪೊಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾದ (Road Accident) ಪರಿಣಾಮ, ಬೈಕ್‌ ಸವಾರರಿಬ್ಬರು ಮೃತಪಟ್ಟಿದ್ದಾರೆ. ತುಮಕೂರು (tumkur news) ಜಿಲ್ಲೆಯ ಶಿರಾ ತಾಲೂಕಿನ ಮರಳಪ್ಪನಹಳ್ಳಿ ಬ್ರಿಡ್ಜ್ ಬಳಿ ದುರ್ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ನಡೆದಿದ್ದು, ಸವಾರ ಪ್ರಭು ಗೌಡ (28) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕಿನಲ್ಲಿದ್ದ ಮತ್ತೊಬ್ಬ ಆನಂದ್ (30) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಮೃತರು ಉತ್ತರ ಕರ್ನಾಟಕ ಮೂಲದವರು ಎನ್ನಲಾಗಿದೆ. ಮಿನಿ ಟೆಂಪೋ ಲಾರಿ ಹೆದ್ದಾರಿ ಬದಿ ಟಯರ್‌ ಪಂಚರ್ ಆಗಿ ನಿಂತಿದ್ದು, ಅದಕ್ಕೆ ಬೈಕ್ ಡಿಕ್ಕಿಯಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಗುದ್ದಿ ಸ್ಕಾರ್ಪಿಯೋ ಚಾಲಕ ಮೃತ್ಯು, ಆ್ಯಸಿಡ್ ಕುಡಿದು ಸಾವು

ವಿಜಯನಗರ: ವಿಜಯನಗರ (vijayanagara news) ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಒಬ್ಬರು ಆಕಸ್ಮಿಕವಾಗಿ ಆ್ಯಸಿಡ್ ಕುಡಿದು ಸಾವಿಗೀಡಾಗಿದ್ದರೆ, ಮತ್ತೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದೆ.

ಕೂಡ್ಲಿಗಿ ತಾಲೂಕಿನಲ್ಲಿ ಎರಡೂ ಪ್ರಕರಣಗಳು ನಡೆದಿವೆ. ಚಿತ್ರದುರ್ಗ ಕಡೆಯಿಂದ ವೇಗವಾಗಿ ಬಂದ ಲಾರಿ, ಸ್ಕಾರ್ಪಿಯೋ ಕಾರಿಗೆ ಗುದ್ದಿದ್ದರಿಂದ ಕಾರು ಚಾಲಕ ಸಂಡೂರು ತಾಲೂಕಿನ ಜಯಕುಮಾರ್ (58) ಎಂಬವರು ಸಾವಿಗೀಡಾಗಿದ್ದಾರೆ.

ಬುಲೆರೋ ಗೂಡ್ಸ್ ವಾಹನದಲ್ಲಿ ತರಕಾರಿ ಸಪ್ಲೈ ಮಾಡುತ್ತಿದ್ದ ರಂಗಸ್ವಾಮಿ (44) ಎಂಬವರು, ಬಾಯಾರಿಕೆ ತಣಿಸಿಕೊಳ್ಳಲೆಂದು ನೀರು ಎಂದು ಭಾವಿಸಿ ತನ್ನದೇ ವಾಹನದಲ್ಲಿದ್ದ ಆ್ಯಸಿಡ್ ಕುಡಿದ ಪರಿಣಾಮ ಸಾವಿಗೀಡಾಗಿದ್ದಾರೆ. ಕೂಡ್ಲಿಯಿಂದ ಕೊಟ್ಟೂರಿಗೆ ತರಕಾರಿ ಸಪ್ಲೈ ಮಾಡಲು ಹೋಗಿದ್ದ ಅವರು ಗೊತ್ತಾಗದೇ ಬಿಸಿಲಿನ ತಾಪಕ್ಕೆ ತಮ್ಮದೇ ವಾಹನದಲ್ಲಿದ್ದ ಆ್ಯಸಿಡ್ ಕುಡಿದಿದ್ದಾರೆ. ಬಳಿಕ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Exit mobile version