ಚಿಕ್ಕಬಳ್ಳಾಫುರ: ಬೈರಗಾನಹಳ್ಳಿ ದಲಿತ ಮುಖಂಡ ನಾರಾಯಣಸ್ವಾಮಿ ಹತ್ಯೆ ಪ್ರಕರಣದ (Murder Case) ಆರೋಪಿಯ ಸಂಬಂಧಿ ಮನೆಗೆ ಕಲ್ಲು ತೂರಾಟ ನಡೆಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಆರೋಪಿಯ ಮನೆಯಲ್ಲಿ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಸಂಬಂಧಿಕರು ಕಲ್ಲು ತೂರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿಯಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್, ದಲಿತ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಂಬಂಧಿಕರು, ಆರೋಪಿಯ ಸಂಬಂಧಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ನಾಲ್ಕು ಜನ ಸಿಪಿಐ, ಕೆ.ಎಸ್.ಆರ್.ಪಿ., ಡಿ.ಎ.ಆರ್ ತುಕಡಿಗಳು ಸೇರಿ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ | Elephant Attack : ಆನೆ ದಾಳಿಗೆ ಕೃಷಿಕ ಬಲಿ; ಹಸುವನ್ನು ಹುಡುಕಿ ಹೋದಾಗ ಬೆನ್ನಟ್ಟಿದ ಗಜರಾಜ, ಕೊಡಗಿನಲ್ಲಿ ವಾರದಲ್ಲಿ 2 ಸಾವು
ಪೊಲೀಸರು ಹಾಗೂ ಮೃತ ವ್ಯಕ್ತಿಯ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಮನೆಯಲ್ಲೇ ಅಂತ್ಯ ಸಂಸ್ಕಾರ ಮಾಡುವಂತೆ ನಾರಾಯಣಸ್ವಾಮಿ ಸಂಬಂಧಿಕರು ಒತ್ತಾಯಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಶವ ಸಂಸ್ಕಾರ ಮಾಡದೆ ಧರಣಿ ಮಾಡಿದ ಮೃತ ವ್ಯಕ್ತಿಯ ಸಂಬಂಧಿಕರು, ನ್ಯಾಯ ಸಿಗುವವರೆಗೆ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಭದ್ರತೆಗೆ ಬಂದಿದ್ದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿರುವುದು ಕಂಡುಬಂದಿದೆ.
ಇದನ್ನೂ ಓದಿ | Student Death : ಮರಳು ಸಾಗಾಟದ ಟ್ರ್ಯಾಕ್ಟರ್ ಧಾವಂತಕ್ಕೆ ಪಿಯುಸಿ ವಿದ್ಯಾರ್ಥಿ ಬಲಿ; ನಡೆದುಹೋಗುತ್ತಿದ್ದಾಗ ಡಿಕ್ಕಿ!
ಮಚ್ಚಿನಿಂದ ಕೊಚ್ಚಿ ಕೊಲೆ
ಶಿಡ್ಲಘಟ್ಟ ತಾಲೂಕು ಬೈರಗಾನಹಳ್ಳಿ ಗ್ರಾಮದ ಬಳಿ ಡಿಎಸ್‌ಎಸ್ ಮುಖಂಡ ನಾರಾಯಣಸ್ವಾಮಿ (50) ಅವರನ್ನು ಗುರುವಾರ ರಾತ್ರಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಶಿಡ್ಲಘಟ್ಟದಿಂದ ಬೈರಗಾನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಹತ್ಯೆ ಮಾಡಲಾಗಿತ್ತು. ರಿಯಲ್ ಎಸ್ಟೇಟ್ ಹಾಗೂ ದಲಿತ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ನಾರಾಯಣಸ್ವಾಮಿ ಅವರನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.