ಬೆಳಗಾವಿ/ಮಂಡ್ಯ/ಕೊಪ್ಪಳ: ರಾಜ್ಯದಲ್ಲಿ ಮುಂಗಾರು ಮಳೆ ಬಹಳವೇ ಕ್ಷೀಣಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ದೊಡ್ಡ ದೊಡ್ಡ ಜಲಾಶಯಗಳು (Dam Level) ನೀರಿಲ್ಲದೆ ಸೊರಗಿವೆ. ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ನೀರುಣಿಸುವ ಕೊಯ್ನಾ ಜಲಾಶಯ ಖಾಲಿಯಾಗಿದೆ. ಅತ್ತ ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್‌ಎಸ್ ಡ್ಯಾಂ (KRS Dam) ಸಹ ಬರಿದಾಗುತ್ತಿದೆ. ಇನ್ನು ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ್ದೂ ಇದೇ ಕಥೆ-ವ್ಯಥೆಯಾಗಿದೆ.
ಕೊಯ್ನಾ ಜಲಾಶಯವು 103 ಟಿಎಂಸಿ ಸಾಮರ್ಥ್ಯ ಹೊಂದಿರುವ ಬೃಹತ್ ಅಣೆಕಟ್ಟನ್ನು ಹೊಂದಿದೆ. ಆದರೆ, ಇದೀಗ ಖಾಲಿ ಖಾಲಿಯಾಗಿದೆ. ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ನೀರುಣಿಸುತ್ತಿದ್ದ ಕೊಯ್ನಾ ಜಲಾಶಯದಲ್ಲೀಗ ನೀರಿಲ್ಲ. ಡೆಡ್ ಸ್ಟೋರೇಜ್ ಹಂತವನ್ನು ತಲುಪಿರುವ ಕಾರಣ ರಾಜ್ಯದ ಆತಂಕಕ್ಕೂ ಇದು ಕಾರಣವಾಗಿದೆ.
ಇದನ್ನೂ ಓದಿ: Medical Negligence: ಸೊಂಟ ನೋವೆಂದು ಬಂದವಳು ಪ್ಯಾರಾಲಿಸಿಸ್ ಇಂಜೆಕ್ಷನ್ ಪಡೆದಳು; ಅಲ್ಲೇ ಉಸಿರು ಚೆಲ್ಲಿದಳು!
ಸದ್ಯ ಕೊಯ್ನಾ ಜಲಾಶಯದಲ್ಲಿ ಕೇವಲ 11.74 ಟಿಎಂಸಿ ನೀರು ಮಾತ್ರ ಬಾಕಿ ಇದೆ. ಈ ಹಿಂದೆ ಕರ್ನಾಟಕಕ್ಕೆ ನೀರು ಬಿಡಿ ಎಂದು ಮಹಾರಾಷ್ಟ್ರ ಸಿಎಂಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ನೀರಿಲ್ಲ ಎನ್ನುವ ಕಾರಣಕ್ಕೆ ಕೇವಲ 1500 ಕ್ಯೂಸೆಕ್ ನೀರನ್ನು ಮಹಾರಾಷ್ಟ್ರ ಸರ್ಕಾರ ಬಿಟ್ಟಿತ್ತು.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯೂಸೆಕ್ ನೀರನ್ನು ಮಹಾರಾಷ್ಟ್ರ ಸರ್ಕಾರ ಬಿಟ್ಟಿತ್ತು. ಆದರೂ, ನೀರಿನ ಬವಣೆ ತೀರಿಲ್ಲ. ಕಾರಣ, ಈ ಭಾಗದಲ್ಲಿ ಮುಂಗಾರು ಮಳೆ ಸರಿಯಾಗಿ ಸುರಿಯಲೇ ಇಲ್ಲ. ಹೀಗಾಗಿ ಮತ್ತೆ ಮಹಾರಾಷ್ಟ್ರದತ್ತ ಮುಖ ಮಾಡುವ ಪರಿಸ್ಥಿತಿ ತಲೆದೋರಿದೆ.
ಆರು ಜಿಲ್ಲೆಗಳಲ್ಲೀಗ ಬರದ ಛಾಯೆ
ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಈಗ ಸಂಪೂರ್ಣ ಬತ್ತಿಹೋಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ 6 ಜಿಲ್ಲೆಗಳಿಗೆ ಈಗ ಬರದ ಛಾಯೆ ಆವರಿಸಿದೆ. ಕೃಷಿ ಚಟುವಟಿಕೆ ಸೇರಿ ಕುಡಿಯುವ ನೀರಿಗೂ ಜಿಲ್ಲೆಗಳಲ್ಲಿ ತಾತ್ವಾರ ಎದುರಾಗಿದೆ. 2019ರ ಬರದ ಛಾಯೆ ಮತ್ತೆ ಮರುಕಳಿಸುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಆಗಲೂ ಕೃಷ್ಣಾ ಸೇರಿದಂತೆ ಉಪ ನದಿಗಳಾದ, ಮಲಪ್ರಭಾ, ಘಟಪ್ರಭಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳು ಖಾಲಿ ಖಾಲಿಯಾಗಿದ್ದವು.
ಸತ್ತು ಬಿದ್ದ ಜಲಚರಗಳು
ಜಲಾಶಯದಲ್ಲಿ ನೀರು ಖಾಲಿ ಆಗುತ್ತಿದ್ದಂತೆ ಜಲಚರಗಳೂ ಸಾಯುತ್ತಿವೆ. ಅಲ್ಲದೆ, ಕೊಯ್ನಾ ಜಲಾಶಯದಲ್ಲಿ ಮುಳುಗಿದ್ದ ಪುರಾತನ ದೇವಸ್ಥಾನ ಸಹ ಈಗ ಗೋಚರವಾಗಿದೆ. ಹಳೆಯ ಸೇತುವೆಗಳು, ಮುಳುಗಿ ಹೋದ ಮನೆಗಳು ಕಾಣಿಸುತ್ತಿವೆ.
ಕೊಯ್ನಾ ಜಲಾಶಯದ ನೋಟ
ಇದನ್ನೂ ಓದಿ: Video viral: ನಡುರಸ್ತೆಯಲ್ಲೇ ಮೈಮರೆತ ಹಾವುಗಳು; ಜನ ಕಂಡು ದಿಕ್ಕಾಪಾಲಾಯ್ತು; ವೈರಲ್ ಆಯ್ತು ಮಿಲನದ ವಿಡಿಯೊ!
ಬರಿದಾಗುತ್ತಿದೆ ತುಂಗಭದ್ರಾ ಒಡಲು
ವಿಜಯನಗರ ಜಿಲ್ಲೆಯಲ್ಲಿರುವ ತುಂಗಭದ್ರಾ ನದಿ ನೀರು ದಿನೇ ದಿನೆ ಬರಿದಾಗುತ್ತಿದೆ. ತುಂಗಭದ್ರಾ ಜಲಾಶಯ ಸಂಗ್ರಹಣ ಸಾಮರ್ಥ್ಯ 105 ಟಿಎಂಸಿ ಇದ್ದರೆ, ಸೋಮವಾರ (ಜೂನ್ 19) ಕೇವಲ 4.44 ಟಿಎಂಸಿ ನೀರು ಮಾತ್ರ ಉಳಿದಿದೆ. 2 ಟಿಎಂಸಿ ಡೆಡ್ ಸ್ಟೋರೇಜ್ ಎಂದು ಪರಿಗಣನೆ ಮಾಡಿದರೆ, ಉಳಿದಿದ್ದು ಕೇವಲ 2.44 ಟಿಎಂಸಿ ಮಾತ್ರವೇ ಆಗಿದೆ.
ಜಲಾಶಯದಲ್ಲಿ ಕಳೆದ ಬಾರಿ ಇದೇ ಅವಧಿಗೆ 41 ಟಿಎಂಸಿ ನೀರಿತ್ತು. ಕಳೆದ 24 ಗಂಟೆಗಳಲ್ಲಿ 308 ಕ್ಯೂಸೆಕ್ ಒಳಹರಿವು ಮಾತ್ರವೇ ಇದ್ದು, ಹೊರಹರಿವಿನ ಪ್ರಮಾಣ 2,200 ಕ್ಯೂಸೆಕ್ ಇದೆ. ನೀರಿನ ಮಟ್ಟ ತಳಪಾಯಕ್ಕೆ ಹೋಗಿರುವುದರಿಂದ ನೀರಿಗೆ ಹಾಹಾಕಾರ ಏರ್ಪಡುವ ಆತಂಕ ಎದುರಾಗಿದೆ.
ಕೆಆರ್‌ಎಸ್‌ನಲ್ಲೂ ನೀರಿಲ್ಲ
ಕೆಆರ್‌ಎಸ್ ಡ್ಯಾಂ (KRS Dam) ಡೆಡ್ ಸ್ಟೋರೇಜ್‌ನತ್ತ (Dead Storage) ಮುಖ ಮಾಡಿದೆ. ಕೇವಲ 80 ಅಡಿಗೆ ಜಲಾಶಯದ (Reservoir) ನೀರಿನ ಮಟ್ಟ ಕುಸಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರಿ ಜಲ ಸಂಕಷ್ಟ ಎದುರಾಗಲಿದೆ.
ದಿನೇ ದಿನೆ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸೋಮವಾರ (ಜೂನ್ 19) 80.06 ಅಡಿಗೆ ನೀರಿನ ಮಟ್ಟ ತಲುಪಿದೆ. ಒಳಹರಿವು 289 ಕ್ಯೂಸೆಕ್ ಇದ್ದರೆ, ಹೊರಹರಿವು 2943 ಕ್ಯೂಸೆಕ್ ಇದೆ. ಇನ್ನು ಟಿಎಂಸಿ ಲೆಕ್ಕಾಚಾರವನ್ನು ನೋಡುವುದಾದರೆ, 49.452 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಸೋಮವಾರಕ್ಕೆ 10.811 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.
ಇದನ್ನೂ ಓದಿ: Viral News: ರೈಟ್ ರೈಟ್..! ಅಯ್ಯೋ ಇಲ್ಲಿ ಬಸ್ ನಿಲ್ಸೋದೆ ಇಲ್ಲ; ಬಸ್‌ಗೆ ಅಡ್ಡ ಬಂದು ಬುಸ್‌ಗುಟ್ಟಿದ ರೇಣುಕಾಚಾರ್ಯ!
ಈ ತಿಂಗಳ ಕೊನೇವರೆಗೆ ಕುಡಿಯಲು ಓಕೆ
ಈಗಿರುವ ನೀರಿನ ಸಂಗ್ರಹವನ್ನು ನೋಡಿದಾಗ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಈ ಜೂನ್ ತಿಂಗಳ ಕೊನೇವರೆಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮಳೆ ಸರಿಯಾಗಿ ಆಗದೇ ಇದ್ದರೆ ಭಾರಿ ಸಂಕಷ್ಟ ಎದುರಾಗಲಿದೆ.