ಮಡಿಕೇರಿ: ಐತಿಹಾಸಿಕ ಮಡಿಕೇರಿಯ ದಸರಾಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ನಗರದ ಪಂಪಿನ ಕೆರೆಯ ಬಳಿ ವಿಶೇಷ ಪೂಜೆ ಬಳಿಕ ಕರಗೋತ್ಸವಕ್ಕೆ ಚಾಲನೆ ದೊರೆತಿದೆ. ಪೂಜೆಯ ಬಳಿಕ 4 ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಆರಂಭವಾಗಿದೆ. ವಿಜಯದಶಮಿವರೆಗೆ ಕರಗಗಳ ನಗರ ಪ್ರದಕ್ಷಿಣೆ ನಡೆಯಲಿದ್ದು, ಸಾರ್ವಜನಿಕರು ಭಕ್ತಿ-ಭಾವದಿಂದ ಪಾಲ್ಗೊಳ್ಳುವುದು ವಾಡಿಕೆ.
ನಗರದ ಮನೆ ಮನೆಗಳ ಬಳಿಗೆ ಶಕ್ತಿ ದೇವತೆಗಳ ಕರಗ ತೆರಳಲಿದೆ. ಈ ಹಿನ್ನೆಲೆಯಲ್ಲಿ ಕರಗ ಸಂಚರಿಸುವ ಮಾರ್ಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ ಕರಗವನ್ನು ನಾಗರಿಕರು ಬರಮಾಡಿಕೊಳ್ಳುತ್ತಿದ್ದಾರೆ.
ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ಕರಗಗಳ ಪ್ರದಕ್ಷಿಣೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಭಕ್ತಿ ಮೆರೆದರು. ಕರಗ ಪೂಜೆಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆ ಜಿ ಬೋಪಯ್ಯ, ಜಿಲ್ಲಾಧಿಕಾರಿ ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ. ಐಯ್ಯಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು