Site icon Vistara News

Mysore Dasara: ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ; ಜಗಮಗಿಸುತ್ತಿದೆ ಮೈಸೂರು

Mysore Palace

ಮೈಸೂರು: ನವರಾತ್ರಿ ಹಿನ್ನೆಲೆಯಲ್ಲಿ (Mysore Dasara) ನಗರದಲ್ಲಿ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು ಭಾನುವಾರ ಸಂಜೆ ಚಾಲನೆ ನೀಡಿದರು. ರಿಮೋಟ್ ಬಟನ್ ಹೊತ್ತುವ ಮೂಲಕ ವಿದ್ಯುತ್ ದೀಪಾಲಂಕಾರಕ್ಕೆ ಸಚಿವರು ಚಾಲನೆ ನೀಡಿದ್ದು, 98 ವೃತ್ತಗಳು, 59 ಪ್ರತಿಕೃತಿಗಳು ಹಾಗೂ 27 ಇತರೆ ಜಾಗಗಳಲ್ಲಿ ದೀಪಾಲಂಕಾರದಿಂದ ಸಾಂಸ್ಕೃತಿಕ ನಗರಿ ಜಗಮಗಿಸುತ್ತಿದೆ.

ನಗರದ ಸೈಯಾಜಿ ರಾವ್ ರಸ್ತೆಯ ಹಸಿರು ಚಪ್ಪರದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ರವಿಕುಮಾರ್ ಹಾಗೂ ಇತರ ಗಣ್ಯರು ಭಾಗಿಯಾಗಿದ್ದರು.

ಭಾನುವಾರರಿಂದ 21 ದಿನಗಳು (ಅ.15ರಿಂದ ನ.11) ಮೈಸೂರು ಅರಮನೆ, ಮುಖ್ಯ ವೃತ್ತಗಳು ಹಾಗೂ ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸಲಿವೆ. ನಗರದಲ್ಲಿ 120.54 ಕಿ. ಮೀ. ದೀಪಾಲಂಕಾರ ಮಾಡಲಾಗಿದೆ.

ಇದನ್ನೂ ಓದಿ | Mysore Dasara : ಅರಮನೆಯಲ್ಲೂ ದಸರಾ ಸಡಗರ; ಖಾಸಗಿ ದರ್ಬಾರ್‌ ಆರಂಭಿಸಿದ ಯದುವೀರ್‌ ಒಡೆಯರ್

ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಈ ಬಾರಿ 120 ಕಿ.ಮೀ. ವಿಸ್ತೀರ್ಣದಲ್ಲಿ ದೀಪಾಲಂಕಾರ ಮಾಡಲಾಗಿದೆ. ದಸರಾ ಮುಗಿದ ಬಳಿಕವೂ ಲೈಟಿಂಗ್ಸ್ ಇರಬೇಕೆಂದು ಸಿಎಂ ಆದೇಶ ಮಾಡಿದ್ದಾರೆ. ಹೀಗಾಗಿ 21 ದಿನ ದೀಪಾಲಂಕಾರ ಇರಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ವಿದ್ಯುತ್‌ನ ಕೊರತೆಯಿದೆ. ಈಗಾಗಲೇ ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಿದ್ದೇನೆ. ಲೋಡ್ ಶೆಡ್ಡಿಂಗ್ ಆಗದ ರೀತಿ ಗಮನ ಹರಿಸುತ್ತೇವೆ. ನಮಗೆ ಅವಶ್ಯಕತೆ ಇರುವಷ್ಟು ಖಾಸಗಿ ಕಂಪನಿಗಳ ಬಳಿ ವಿದ್ಯುತ್ ಸಿಗುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಪವನ ವಿದ್ಯುತ್‌ ಕೂಡ ಉತ್ಪತ್ತಿ ಆಗುತ್ತಿಲ್ಲ ಎಂದು ಹೇಳಿದರು.

ಗೃಹಜ್ಯೋತಿ ಅನುದಾನ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಇವ್ಯಾವುದೂ ಬೇಡ. ಅವರು ಹತಾಶರಾಗಿದ್ದಾರೆ. ನಾವು ಗೃಹಜ್ಯೋತಿಗೆ ಎಷ್ಟು ಹಣ ಬಿಡುಗಡೆ ಮಾಡಬೇಕೋ ಅಷ್ಟು ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು: ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಜೆ. ಜಾರ್ಜ್, ಮೇಯರ್ ಶಿವಕುಮಾರ್, ಶಾಸಕರಾದ ಶ್ರೀವತ್ಸ ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಮರಿತಿಬ್ಬೇಗೌಡ ತಿಮ್ಮಯ್ಯ ಭಾಗಿಯಾಗಿದ್ದರು.

ಇದನ್ನೂ ಓದಿ | Mysore dasara : ನಾಡಹಬ್ಬ ದಸರಾ ಕವಿಗೋಷ್ಠಿಯಿಂದ ಪ್ರೊ. ಕೆ.ಎಸ್‌. ಭಗವಾನ್‌ಗೆ ಕೊಕ್!

ವೇದಿಕೆಯಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಸಂಗೀತ ವಿದ್ವಾನ್ ಪದ್ಮಮೂರ್ತಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.


Exit mobile version