Site icon Vistara News

Free Electricity: ಗೃಹ ಜ್ಯೋತಿ ಅರ್ಜಿ ಸ್ವೀಕಾರ ಆರಂಭ ಮುಂದೂಡಿಕೆ; ದಿಢೀರ್‌ ನಿರ್ಧಾರಕ್ಕೆ ಕಾರಣವೇನು?

Free Electricity

#image_title

ಬೆಂಗಳೂರು: 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ʻಗೃಹ ಜ್ಯೋತಿʼ (Free Electricity) ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಕೆ (Application) ಆರಂಭದ ದಿನಾಂಕವನ್ನು ಮುಂದೂಡಲಾಗಿದೆ. ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್‌ (Sewa sindhu Portal) ಮೂಲಕ ಜೂ. 15ರಿಂದಲೇ ಸ್ವೀಕರಿಸುವುದಾಗಿ ಪ್ರಕಟಿಸಲಾಗಿತ್ತು. ಆದರೆ, ಇದೀಗ ಅರ್ಜಿ ಸಲ್ಲಿಕೆ ದಿನಾಂಕವನ್ನು ದಿಢೀರ್‌ ಆಗಿ ಮುಂದೂಡಲಾಗಿದೆ. ಜೂ. 15ರಂದು ಆರಂಭವಾಗಬೇಕಾಗಿದ್ದ ಅರ್ಜಿ ಸ್ವೀಕಾರವನ್ನು ಇದೀಗ ಜೂ. 18ರಿಂದ ಆರಂಭಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ, ಸರ್ಕಾರಿ ಸಂಸ್ಥೆಗಳ ಬಿಲ್ ಪಾವತಿ ಕೇಂದ್ರಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಅದಕ್ಕಾಗಿ ಸರ್ಕಾರ ಕೂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅದಕ್ಕಾಗಿ ಸಿದ್ಧಪಡಿಸಲಾಗಿರುವ ತಂತ್ರಾಂಶದಲ್ಲಿ (ಸಾಫ್ಟ್ ವೇರ್) ಕೆಲವು ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡಿವೆ.

ತಾಂತ್ರಿಕ ಸಮಸ್ಯೆ ಎದುರಾಗದಂತೆ ಈ ಕ್ರಮ?

ಆರಂಭಿಕ ಪರಿಶೀಲನೆಯ ವೇಳೆ ಅರ್ಜಿ ಸ್ವೀಕಾರದಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎನ್ನಲಾಗಿದೆ. ಇವುಗಳನ್ನು ಸರಿಪಡಿಸಿಕೊಂಡೇ ಅರ್ಜಿ ಸ್ವೀಕರಿಸಬೇಕು, ಅರ್ಜಿ ಸ್ವೀಕರಿಸಲು ಬಂದ ಜನರಿಗೆ ಯಾವ ರೀತಿಯಲ್ಲೂ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಅರ್ಜಿ ಸ್ವೀಕಾರ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ತಾಂತ್ರಿಕ ಅಡಚಣೆಗಳನ್ನು ಪರಿಹರಿಸಿ ಅದನ್ನು ಪುನಃ ಪರಿಶೀಲನೆಗೊಳಿಸಬೇಕಿದೆ. ಅದು ಪರಿಶೀಲನೆಗೊಳಪಟ್ಟು ಯಾವುದೇ ತಾಂತ್ರಿಕ ಸಮಸ್ಯೆಗಳು ಪುನಃ ಬಾರದಂತೆ ಅದು ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಅದನ್ನು ಬಳಕೆಗೆ ತರಬೇಕಿದೆ. ಇದಕ್ಕಾಗಿ ಎರಡು ದಿನಗಳಾದರೂ ಬೇಕು. ಹಾಗಾಗಿ, ಸದ್ಯದ ಮಟ್ಟಿಗೆ ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕವನ್ನು ಮುಂದೂಡುವುದಾಗಿ ಸರ್ಕಾರ ಹೇಳಿದೆ.

20 ದಿನಗಳ ಅವಕಾಶವಿದೆ

ಹಿಂದಿನ ಸೂಚನೆಯ ಪ್ರಕಾರ ಕಂಪ್ಯೂಟರ್ ‌ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಜೂನ್ ‌15ರಿಂದ ಜುಲೈ 5ರವರೆಗೆ ಅವಕಾಶ ನೀಡಲಾಗಿದೆ. ಇದೀಗ ಅಂತಿಮ ದಿನಾಂಕವೂ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಯಾವುದೇ ರೀತಿಯ ತೊಂದರೆಗಳು ಆಗದಂತೆ ಇಂಧನ‌ ಇಲಾಖೆಯಿಂದ ಮುಂಜಾಗ್ರತಾ ‌ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಹೀಗೆ ಐದು ವಿಭಾಗಗಳಲ್ಲಿ ಜಾರಿ ಮಾಡಿಕೊಳ್ಳಲಾಗುತ್ತಿದೆ. ಹೊಸ‌‌‌ ಮನೆ‌ ಬಾಡಿಗೆದಾರರಿಗೆ ಸಹ ಗೃಹಜ್ಯೋತಿ ಭಾಗ್ಯವಿದ್ದು, ಹೊಸ‌ ಮನೆಗೆ 53 ಯೂನಿಟ್ ‌ಉಚಿತ‌ ವಿದ್ಯುತ್ ‌ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. 53 ಯೂನಿಟ್ ಜೊತೆ 10% ಪರ್ಸೆಂಟ್ ಅಂದರೆ 58 ಯೂನಿಟ್ ವಿದ್ಯುತ್ ಉಚಿತ‌ವಾಗಿದೆ.

ಅರ್ಜಿ ಸಲ್ಲಿಸುವವರು ಆರ್‌ಆರ್ ನಂಬರ್‌ ಜೊತೆಗೆ ಆಧಾರ್‌ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕರಾರು ಪತ್ರ ಅಥವಾ ವೋಟರ್ ಐಡಿ ಕಡ್ಡಾಯವಾಗಿದ್ದು, ಇವೆರಡರಲ್ಲಿ ಯಾವುದಾದರೂ ‌ಒಂದು ದಾಖಲೆ‌ ಇದ್ದರೆ ಸಾಕು. ಅರ್ಜಿ ಸಲ್ಲಿಕೆಯನ್ನು ಇಂಧನ ಇಲಾಖೆ ಸರಳೀಕರಣ‌ ಮಾಡಿದೆ. ಹಳ್ಳಿಗಳಲ್ಲಿ ‌ಹಾಗೂ ನಗರ ಭಾಗಗಳಲ್ಲಿ ‌ಬಾಡಿಗೆ ಇರುವವರ ದೃಷ್ಟಿಯಿಂದ ಸರಳೀಕರಣ‌ ಮಾಡಲಾಗಿದೆ.

ಹಿಂದಿನ ಸುದ್ದಿ ಓದಿ : Free Electricity : ಉಚಿತ ವಿದ್ಯುತ್‌ಗೆ ನಾಳೆಯಿಂದಲೇ ಅರ್ಜಿ ಸಲ್ಲಿಸಿ! 15 ದಿನದಲ್ಲಿ ಆಗುತ್ತಾ 2.14 ಕೋಟಿ ಜನರ ಅರ್ಜಿ ಸಲ್ಲಿಕೆ?

Exit mobile version