Site icon Vistara News

Datta Jayanti | ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆಗಳ ರಾಶಿ; ವಿಧ್ವಂಸಕ ಕೃತ್ಯಕ್ಕೆ ಸಂಚು ಎಂದ ಸಿ.ಟಿ. ರವಿ

chikkamagalur road in Nail ದತ್ತ ಜಯಂತಿ ದತ್ತಪೀಠ ಅನಸೂಯಾ ಯಾತ್ರೆ

ಚಿಕ್ಕಮಗಳೂರು: ದಶಕಗಳಿಂದ ವಿವಾದದ ಕೇಂದ್ರಬಿಂದುವಾಗಿರುವ ಇಲ್ಲಿನ ಬಾಬಾ ಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಮಂಗಳವಾರದಿಂದ ದತ್ತ ಜಯಂತಿ (Datta Jayanti) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಆದರೆ, ಇದೇ ವೇಳೆ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಕೆಲವು ಕಿಡಿಗೇಡಿಗಳು ಸುಮಾರು ೧ ಕಿ.ಮೀ. ದೂರದವರೆಗೆ ಮೊಳೆಯನ್ನು ಹಾಕಿ ದುಷ್ಕೃತ್ಯ ಎಸಗಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಾಫಿನಾಡಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ ನಡೆದಿದೆ ಎಂದೇ ಹೇಳಲಾಗಿದ್ದು, ರಸ್ತೆಗಳ ತಿರುವಿನಲ್ಲಿ ಚಿಕ್ಕ ಚಿಕ್ಕ ಮೊಳೆಗಳನ್ನು ಚೆಲ್ಲಲಾಗಿದೆ. ದರ್ಶನಕ್ಕೆ ಅಡ್ಡಿಪಡಿಸುವ ಹಾಗೂ ಅಪಘಾತಗಳು ಸಂಭವಿಸಲಿ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕೈಮಾರ ಚೆಕ್ ಪೋಸ್ಟ್‌ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಕೃತ್ಯ ಎಸಗಲಾಗಿದ್ದು, ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಆ ಮೊಳೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಸಂಚು- ಸಿ.ಟಿ. ರವಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸಿ.ಟಿ. ರವಿ, ದತ್ತಜಯಂತಿ ಹಿನ್ನೆಲೆಯಲ್ಲಿ ಕೆಲವರು ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದಾರೆ ಎಂಬುದು ಆಘಾತಕಾರಿ ಅಂಶವಾಗಿದೆ. ಬೆಟ್ಟದ ರಸ್ತೆ ತಿರುವಿನಲ್ಲಿ ಕೆಲವರು ಮೊಳೆಗಳನ್ನು ಹಾಕಿದ್ದು, ಈ ಮೂಲಕ ಅಪಘಾತಗಳು ನಡೆಯುವಂತೆ ಪ್ಲ್ಯಾನ್‌ ಮಾಡಿದ್ದಾರೆ. ಪೊಲೀಸರು ಹಾಗೂ ಕಾರ್ಯಕರ್ತರು ಮೊಳೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು ಒಂದು ಕಿ.ಮೀ. ಕಾಲ ಮೊಳೆಗಳನ್ನು ಹಾಕಲಾಗಿದೆ. ಹೀಗಾಗಿ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರು ಯಾರಿದ್ದಾರೋ ಅವರನ್ನು ಸೆರೆಹಿಡಿದು ತಕ್ಕ ಶಿಕ್ಷೆ ನೀಡುವಂತೆ ಆಗಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | Datta jayanti | ಅನಸೂಯಾ ಯಾತ್ರೆಗೆ ಅದ್ಧೂರಿ ಚಾಲನೆ; ದತ್ತಪೀಠದತ್ತ ದತ್ತಾತ್ರೇಯನ ಭಕ್ತರು

Exit mobile version