ಚಿಕ್ಕಮಗಳೂರು: ಬಾಬಾ ಬುಡನ್‌ಗಿರಿಯಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ (ದತ್ತ ಪೀಠ ವಿವಾದ) ಮಾರ್ಚ್ 8ರಿಂದ ಮೂರು ದಿನಗಳ ಕಾಲದ ಉರೂಸ್ ಆರಂಭಗೊಂಡಿದೆ. ಆದರೆ, ಸರ್ಕಾರ ಜಿಲ್ಲಾಡಳಿತದ ಮೂಲಕ ನಡೆಸುತ್ತಿರುವ ಈ ಆಚರಣೆಗೆ ಚಿಕ್ಕಮಗಳೂರಿನ ಮುಸ್ಲಿಂ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಲಾಯಿತು.
ರಾಜ್ಯ ಸರ್ಕಾರ ರಚನೆ ಮಾಡಿರುವ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ ನಡೆಯುತ್ತಿರುವ ಉರೂಸ್ ಆಚರಣೆ ಆರಂಭಗೊಂಡಿದ್ದು, ದತ್ತಾತ್ರೇಯ ಪೀಠದಲ್ಲಿ ಕಪ್ಪುಪಟ್ಟಿ ಧರಿಸಿ ನೂರಾರು ಮುಸ್ಲಿಂ ಮುಖಂಡರು ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.
ಜಿಲ್ಲಾಡಳಿತ ವತಿಯಿಂದ ನಡೆಯುತ್ತಿರುವ ಆಚರಣೆಯನ್ನು ತಿರಸ್ಕಾರ ಮಾಡಿರುವ ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಈ ಆಚರಣೆಯನ್ನು ಒಪ್ಪುವುದಿಲ್ಲ ಎಂದಿದೆ. ನೂರಾರು ಮಂದಿ ಮುಸ್ಲಿಂ ನಾಯಕರು, ದರ್ಗಾದ ಭಕ್ತರು ದೊಡ್ಡ ಮಟ್ಟದ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನೆಯನ್ನು ದಾಖಲಿಸಿದರು. ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮಾಡುವ ಉತ್ಸವ ನಾವು ಒಪ್ಪಿಕೊಳ್ಳುವುದಿಲ್ಲ, ಸರ್ಕಾರ ಈಗ ತಂದಿರುವ ಹೊಸ ಕಾನೂನುಗಳನ್ನು ಹಿಂಪಡೆದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ದತ್ತಪೀಠದಲ್ಲಿ ಪ್ರತಿಭಟನಾಕಾರ ಮುಸ್ಲಿಂ ಮುಖಂಡರು ಹೇಳಿದ್ದಾರೆ.
ಈ ನಡುವೆ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಉರೂಸ್‌ಗೂ ಹೊರ ಜಿಲ್ಲೆ, ಜಿಲ್ಲೆಯ ಇತರ ಭಾಗಗಳಿಂದ ಜನರು ಆಗಮಿಸುತ್ತಿದ್ದಾರೆ.
ರಾಜ್ಯ ಸರಕಾರದ ಮುಂದೆ ನಾಲ್ಕು ಬೇಡಿಕೆ
ಸ್ಥಳೀಯ ಮುಖಂಡರು ಸರ್ಕಾರದ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
1. ಪೂಜೆಗೆ ಸರ್ಕಾರ ಮಾಡಿರುವ ಅರ್ಚಕರ ನೇಮಕಾತಿ ರದ್ದು
2. ವ್ಯವಸ್ಥಾಪನ ಮಂಡಳಿಯನ್ನು ಈ ಕೂಡಲೇ ರದ್ದು ಮಾಡಬೇಕು.
3. ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಬೇಕು.
4. ಪೂಜೆ ಸೇರಿದಂತೆ ನಮಾಜ್ ಮಾಡಲು ಅವಕಾಶ
ಇದನ್ನೂ ಓದಿ : ದತ್ತ ಪೀಠ ವಿವಾದ : ಪ್ರತ್ಯೇಕವಾಗಿ ಮುಜಾವರ್, ಅರ್ಚಕರ ನೇಮಕ ಮಾಡಿದ ಆದೇಶ ಎತ್ತಿಹಿಡಿದ ಹೈಕೋರ್ಟ್