ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿರುವ, ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಸಿದ್ದರಾಮೋತ್ಸವಕ್ಕೆ (Siddaramotsava) ಇನ್ನು ಗಂಟೆಗಳ ಲೆಕ್ಕಾಚಾರವಷ್ಟೇ ಬಾಕಿ ಇದೆ. ಅದ್ಧೂರಿ ವೇದಿಕೆ ಸಿದ್ಧಗೊಂಡಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಾದಿಯಾಗಿ ಅಭಿಮಾನಿಗಳು ಇಲ್ಲಿಗೆ ದೌಡಾಯಿಸುತ್ತಿದ್ದಾರೆ. ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಪ್ರದರ್ಶನದ ವೇದಿಕೆ ಎಂದೇ ಹಿಂಬಾಲಕರು ಬಿಂಬಿಸುತ್ತಿರುವ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಆಗಮಿಸುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮವು ಕಾಂಗ್ರೆಸ್ ಪಕ್ಷದೊಳಗೆ ಒಂದು ಮಟ್ಟಿನ ಅಸಮಾಧಾನಕ್ಕೂ ಕಾರಣವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಹ ಪರೋಕ್ಷ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಪಕ್ಷದ ಕಾರ್ಯಕ್ರಮ ಇದಲ್ಲ ಎಂಬ ಹೇಳಿಕೆ ಸಹ ಒಂದು ಸಮಯದಲ್ಲಿ ವ್ಯಕ್ತವಾಗಿತ್ತು. ಆದರೆ, ಇದೆಲ್ಲವನ್ನೂ ಮೀರಿ, ಈಗ ಪಕ್ಷದ ಎಲ್ಲ ಮುಖಂಡರೂ ಆಗಮಿಸಿ ಒಟ್ಟಿಗೇ “ಸಿದ್ದರಾಮೋತ್ಸವ”ವನ್ನು ಒಗ್ಗಟ್ಟಾಗಿ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ವೇದಿಕೆ ಸಿದ್ಧವಾಗಿದೆ.
೫ ಲಕ್ಷ ಜನರ ನಿರೀಕ್ಷೆ, ವಾಟರ್ ಪ್ರೂಫ್ ಪೆಂಡಾಲ್
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಎರಡು ಲಕ್ಷ ಜನ ಕೂರಲು ಬೃಹತ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. 8 ಲಕ್ಷ ಚದರ ಅಡಿ ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದೆ. ಹೀಗಾಗಿ ಒಂದು ವೇಳೆ ಮಳೆ ಬಂದರೂ ನಿರಾಂತಕವಾಗಿ ಕಾರ್ಯಕ್ರಮ ಸಾಗಲಿದೆ.
೨.೫ ಲಕ್ಷ ಜನಕ್ಕೆ ಆಸನ ವ್ಯವಸ್ಥೆ
ಸುಮಾರು ಎರಡೂವರೆ ಲಕ್ಷ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಎರಡೂವರೆ ಲಕ್ಷ ಜನ ಹೊರಗೆ ನಿಂತು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. 42X200 ಅಡಿಯ ಪ್ರಮುಖ ಬೃಹದಾಕಾರದ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ.
ವೇದಿಕೆ ಮೇಲೆ ನೂರಾರು ಗಣ್ಯರಿಗೆ ಆಸನ!
8 ಅಡಿ ಎತ್ತರವಿರುವ ಪ್ರಮುಖ ವೇದಿಕೆ ಮೇಲೆ 200 ಮಂದಿ ಗಣ್ಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ವೇದಿಕೆಯ ಎರಡು ಬದಿಯಲ್ಲಿ 48*30 ಅಡಿಯ ಸಣ್ಣ ವೇದಿಕೆಗಳ ನಿರ್ಮಾಣ ಮಾಡಲಾಗಿದೆ. ಈ ಎರಡು ವೇದಿಕೆಗಳು ನಾಲ್ಕು ಅಡಿ ಎತ್ತರ ಇವೆ. ವೇದಿಕೆಗಳಲ್ಲಿ ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಪ್ರಮುಖ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ನಾಲ್ಕು ನೂರಕ್ಕೂ ಹೆಚ್ಚು ಮಂದಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ | Siddaramotsava | ರಾರಾಜಿಸುತ್ತಿವೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಬ್ಯಾನರ್, ಕಟೌಟ್‌ಗಳು
ಸಿದ್ದರಾಮೋತ್ಸವ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದ್ದು, 16X30 ಅಡಿಯ 12 ಎಲ್‌ಇಡಿ ಸ್ಕ್ರೀನ್, 8X12 ಅಡಿಯ 12 ಎಲ್‌ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ವೇದಿಕೆಯ ಹಿಂಭಾಗದ ಮಧ್ಯಭಾಗದಲ್ಲಿ 16X38 ಅಡಿಯ ಎಲ್‌ಇಡಿ ಸ್ಕ್ರೀನ್ ಅನ್ನು ಅಳವಡಿಕೆ ಮಾಡಲಾಗಿದೆ.
ಮೈಸೂರ್ ಪಾಕ್ ಸಹಿತ ಭರ್ಜರಿ ಊಟ
ಸಿದ್ದರಾಮೋತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ಮೆನುವಿನಲ್ಲಿ ಮೈಸೂರ್ ಪಾಕ್, ಬಿಸಿಬೇಳೆಬಾತ್, ಪಲಾವ್, ಮೊಸರನ್ನ, ಮೊಸರು ಬಜ್ಜಿ ಇವೆ. ವೇದಿಕೆ ಸಮೀಪವೇ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಅಡುಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಡುಗೆ ಮನೆಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮೈಸೂರ್ ಪಾಕ್‌ಗಳ ತಯಾರಿ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 9.30ರಿಂದಲೇ ಊಟದ ವ್ಯವಸ್ಥೆ ಮಾಡಲಾಗುತ್ತದೆ, 320 ಕೌಂಟರ್‌ಗಳ ಮೂಲಕ ಕಾರ್ಯಕ್ರಮ ಮುಗಿಯುವವರೆಗೆ ನಿರಂತರವಾಗಿ ದಾಸೋಹ ನಡೆಯಲಿದೆ.
ಬೆಳಗ್ಗೆಯಿಂದಲೇ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗ್ಗೆ 10 ಗಂಟೆಗೆ ನಾದಬ್ರಹ್ಮ ಹಂಸಲೇಖ, ಸಾಧುಕೋಕಿಲಾ ಹಾಗೂ ಸಂಗೀತಾ ಕಟ್ಟಿ ಅವರ ತಂಡದಿಂದ ಗಾಯನ ಕಾರ್ಯಕ್ರಮ ಆರಂಭವಾಗಲಿದೆ. 11.30ರಿಂದ ಸಿದ್ದರಾಮಯ್ಯ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ. ಬಳಿಕ ಕಾಂಗ್ರೆಸ್ ಹಿರಿಯ ನಾಯಕರ ಭಾಷಣ ಪ್ರಾರಂಭವಾಗಿ, ಮಧ್ಯಾಹ್ನ 1೨.೪೫ರ ವೇಳೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಲಿದ್ದು, ಮಧ್ಯಾಹ್ನ ೧ ಗಂಟೆ ಸುಮಾರಿಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವೇದಿಕೆಯ ಮುಂಭಾಗದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಕೇಂದ್ರದ ಮುಖಂಡರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಆ.೨ರ ರಾತ್ರಿಯೇ ದಾವಣಗೆರೆಗೆ ಸಿದ್ದರಾಮಯ್ಯ
ಆ.2ರಂದು ರಾತ್ರಿ 11.30ಕ್ಕೆ ಸಿದ್ದರಾಮಯ್ಯ ಹುಬ್ಬಳ್ಳಿಯಿಂದ ದಾವಣಗೆರೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಆ.3ರಂದು ಬೆಳಗ್ಗೆ 11ಕ್ಕೆ ಸಿದ್ದರಾಮಯ್ಯ ಶಾಮನೂರು ಪ್ಯಾಲೇಸ್ ಮೈದಾನಕ್ಕೆ ಆಗಮಿಸುತ್ತಾರೆ. 12.45ಕ್ಕೆ ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಲಿದ್ದು, ಡಿ.ಕೆ.ಶಿವಕುಮಾರ್ ಅವರು ಜತೆಗಿರಲಿದ್ದಾರೆ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿ ವೇದಿಕೆಯಲ್ಲಿ 3 ಗಂಟೆವರೆಗೂ ಉಪಸ್ಥಿತರಿರಲಿದ್ದಾರೆ. 4.30ರ ವೇಳೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು, ಸಿದ್ದರಾಮಯ್ಯ ಅವರು ಕಾರ್ಯಕ್ರಮದಿಂದ ನಿರ್ಗಮಿಸಲಿದ್ದಾರೆ. 5ಕ್ಕೆ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠ (ಬೆಳ್ಳೂಡಿ ಹರಿಹರ)ಕ್ಕೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. 6.30ಕ್ಕೆ ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಲಿರುವ ಅವರು, 7.30ಕ್ಕೆ ಚಿತ್ರದುರ್ಗ ಮುರುಘಾ ಮಠಕ್ಕೆ ತೆರಳಿದ್ದಾರೆ. ಬಳಿಕ ರಾತ್ರಿ 8 ಗಂಟೆಗೆ ರಸ್ತೆ ಮೂಲಕ ಬೆಂಗಳೂರು ಕಡೆ ಪ್ರಯಾಣ ಬೆಳೆಸಲಿದ್ದಾರೆ.
ಕಾರ್ಯಕ್ರಮಕ್ಕೆ ಮಳೆ ಭೀತಿ
ದಾವಣಗೆರೆ ಜಿಲ್ಲಾದ್ಯಂತ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಗೆ ರಸ್ತೆಗಳು ಜಲಾವೃತವಾಗಿ, ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ಇನ್ನೂ ಎರಡು ದಿನ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿರುವ ಸಿದ್ದರಾಮೋತ್ಸವಕ್ಕೆ ಮಳೆ ಅಡಚಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ವಾಟರ್ ಪ್ರೂಫ್ ಶಾಮಿಯಾನ ಹಾಕಿರುವುದರಿಂದ ಒಳಗೆ ಕೂರುವ ೨.೫ ಲಕ್ಷ ಜನರಿಗೆ ತೊಂದರೆಯಾಗದು ಎಂದು ಭಾವಿಸಲಾಗಿದೆ. ಆದರೆ, ಮಳೆಯ ಪ್ರಮಾಣದ ಮೇಲೆ ಇದು ನಿಂತಿದೆ. ಇನ್ನು ವೇದಿಕೆ ಹೊರಗೆ ನಿಲ್ಲುವ ಲಕ್ಷಾಂತರ ಮಂದಿಗೆ ಸಮಸ್ಯೆಯಾಗಲಿದ್ದು, ಮಳೆ ಬಂದರೆ ಏನಾಗಲಿದೆ ಎಂಬ ಚಿಂತೆ ಆಯೋಜಕರನ್ನು ಕಾಡಿದೆ.
ಇದನ್ನೂ ಓದಿ | ಎಸಿಬಿ ವಿಚಾರಣೆಗೆ ಹಾಜರಾಗಲು ಜಮೀರ್ ಹಿಂದೇಟು, ಈಗ ಸಿದ್ದರಾಮೋತ್ಸವ ನೆಪ, 3ನೇ ನೋಟಿಸ್ ರೆಡಿ