ದಾವಣಗೆರೆ: ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ (Anna Bhagya) ಅಕ್ಕಿ ಪೂರೈಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಹೇಗೆಲ್ಲ ಕಷ್ಟಪಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಕೇಂದ್ರ ಸರ್ಕಾರದ (Central Government) ಬಾಗಿಲು ಮುಚ್ಚಿದ್ದರಿಂದ ಬೇರೆ ಬೇರೆ ರಾಜ್ಯಗಳ ಜತೆಗೆ ನಿತ್ಯವೂ ಒಂದಿಲ್ಲೊಂದು ಮಾತುಕತೆ ನಡೆಸುತ್ತಾ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಕ್ಕಿ ಸಿಗದೆ ಇದ್ದರೂ ಮಾತು ತಪ್ಪಬಾರದು, ಜನರಿಗೆ ಮೋಸ ಆಗಬಾರದು ಎಂಬ ಕಾರಣಕ್ಕೆ ಒಂದು ಕಾರ್ಡ್‌ಗೆ ತಲಾ 170 ರೂ.ಯನ್ನು ನೇರವಾಗಿ ನೀಡುತ್ತಿದ್ದಾರೆ. ಆದರೆ, ಅನ್ನದ ಬೆಲೆ ಅರಿಯದ ಕೆಲವು ಅಧಿಕಾರಿಗಳು, ಕೆಳ ವರ್ಗದ ನೌಕರರು ಅನ್ನ ಭಾಗ್ಯದ ಅಕ್ಕಿಗೇ ಕನ್ನ (Grabbing Anna Bhagya rice) ಹಾಕುತ್ತಿದ್ದಾರೆ.
ಈಗ ನಾವು ತೆರೆದಿಡುತ್ತಿರುವ ಸ್ಟೋರಿ ಒಂದು ಸ್ಯಾಂಪಲ್ ಮಾತ್ರ. ರಾಜ್ಯದ ನಾನಾ ಕಡೆಗಳಲ್ಲಿ ಅಕ್ಕಿ ಕೊಳ್ಳೆ ಹೊಡೆಯುವ ಕೆಲಸ ನಡೆಯುತ್ತಿದೆ. ಕೊಳ್ಳೆ ಹೊಡೆದ ಅಕ್ಕಿಯನ್ನು ಮಾರಾಟ ಮಾಡಿ ದುಡ್ಡು ಮಾಡುವ ದಂಧೆ ವ್ಯವಸ್ಥಿತವಾಗಿದೆ. ಇಲ್ಲೊಂದು ಪಡಿತರ ಅಂಗಡಿಯಲ್ಲಿ ಒಂದು ಕಾರ್ಡ್‌ಗೆ ಕೊಡಬೇಕಾದಷ್ಟು ಅಕ್ಕಿಯನ್ನು ಕೊಡುವುದೇ ಇಲ್ಲ. ಒಂದು ಕಾರ್ಡ್‌ನಲ್ಲಿ ಒಂದು ಕೆಜಿ ಅಕ್ಕಿಗೆ ಕನ್ನ. ಪ್ರಶ್ನಿಸಿದರೆ ಉಡಾಫೆ ಉತ್ತರ!
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಪಡಿತರ ವಿತರಣೆ ಅಂಗಡಿಯಲ್ಲಿ ಈ ಮೋಸ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ವೈರಲ್ ಆಗಿದೆ.
ರಾಜಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾವಿನಹೊಳೆಯ ಈ ಪಡಿತರ ಅಂಗಡಿಯಲ್ಲಿ 10 ಕೆಜಿ ಅಕ್ಕಿ ಕೊಡಬೇಕಾದಲ್ಲಿ ಕೊಡುವುದು ಒಂಬತ್ತು ಕೆಜಿ ಮಾತ್ರ, ಐದು ಕೆಜಿಗೆ ಬರೋದು ನಾಲ್ಕು ಕೆಜಿ ಮಾತ್ರ. ಅಂದರೆ ಒಂದು ಕಾರ್ಡ್‌ನಲ್ಲಿ ಎಷ್ಟೇ ಕೆಜಿ ಅಕ್ಕಿ ಕೊಡಬೇಕಾದರೂ ಒಂದು ಕೆಜಿ ಕಡಿಮೆ ಕೊಡುವುದು ಇಲ್ಲಿನ ಅಧಿಕೃತ ಕಾನೂನು.
ಇದನ್ನು ಗ್ರಾಹಕರೊಬ್ಬರು ವಿಡಿಯೊ ಮಾಡಿದ್ದಲ್ಲದೆ ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಅಂಗಡಿ ಮಾಲೀಕ ಉಡಾಫೆ ಉತ್ತರ ನೀಡಿದ್ದಾನೆ. ಸರ್ಕಾರ ಅಕ್ಕಿ ಮಾತ್ರ ಕೊಡುತ್ತದೆ, ಅದನ್ನು ತೂಕಕ್ಕೆ ಹಾಕೋದಕ್ಕೆ ದುಡ್ಡು ಕೊಡಲ್ಲ. ತೂಕ ಹಾಕಲು ಸರ್ಕಾರ ಕೂಲಿ ಕೊಡೋದಿಲ್ಲ. ಅದಕ್ಕೆ 1 ಕೆಜಿ ಕಡಿಮೆ ಕೊಡ್ತೀವಿ ಎಂದು ಆತ ಉಡಾಫೆಯಾಗಿ ಹೇಳುತ್ತಾನೆ.
ನಮಗೆ ಸರ್ಕಾರ ಕರೆನ್ಸಿಗೆ ದುಡ್ಡುಕೊಡಲ್ಲ, ತೂಕ ಹಾಕಿಸಲು ದುಡ್ಡು ಕೊಡಲ್ಲ.. ಹೀಗಾಗಿ ಇದೇ ನಮ್ಮ ವ್ಯವಸ್ಥೆ ಎನ್ನುವ ಮಾಲೀಕನಲ್ಲಿ ಈ ಬಗ್ಗೆ ನಿಯಮ ಇದೆಯಾ ಎಂದು ಗ್ರಾಹಕ ಕೇಳುತ್ತಾರೆ. ಆಗ ಮಾಲೀಕ, ನಿನಗೀಗ ಫುಲ್ ಬೇಕಾ ತಗೊಂಡು ಹೋಗು, ಹೆಚ್ಚು ಮಾತನಾಡಬೇಡ ಎಂದು ದಬಾಯಿಸುತ್ತಾನೆ.
ಆಗ ಗಾಹಕ ಇದು ನನ್ನೊಬ್ಬನ ವಿಷಯ ಅಲ್ಲ, ಎಲ್ಲರಿಗೂ ಇದೇ ರೀತಿ ಮೋಸ ಮಾಡುತ್ತೀರಲ್ಲಾ ಎನ್ನುತ್ತಾನೆ. ಆಗ ಮಾಲೀಕ, ಬೇಕಿದ್ರೆ ಕೇಳಿ ತಗೋ, ಹೋಗು ಅಂತಾನೆ. ಆಗ ಗ್ರಾಹಕ, ಇದರಲ್ಲಿ ಕೇಳಿ ಪಡೆಯುವ ಪ್ರಶ್ನೆ ಬರುವುದಿಲ್ಲ. ಸರ್ಕಾರ ಕೊಟ್ಟಿದ್ದನ್ನು ನೀವು ಗ್ರಾಹಕರಿಗೆ ಕೊಡುತ್ತೀರಿ ಅಷ್ಟೆ ಎನ್ನುತ್ತಾನೆ.
ಹಾಗಿದ್ದರೆ ನಾನು ಬಿಲ್ ಮಾಡಿ ಬಂದು ತೂಕ ಹಾಕಿಕೊಡುವವರೆಗೆ ಕಾಯಬೇಕು ಅನ್ನುತ್ತಾನೆ ಮಾಲೀಕ. ಅದಕ್ಕೆ ಗ್ರಾಹಕ, ನಾನು ಈಗಲೇ ನೀವು ಅಕ್ಕಿ ಕೊಡುವವರೆಗೆ ಸರತಿಯಲ್ಲೇ ನಿಂತು ಬಂದಿದ್ದೇವೆ ಎನ್ನುತ್ತಾನೆ.
ಇದಲ್ಲಿ ಅಂಗಡಿ ಮಾಲೀಕ ತನ್ನ ಸಹಾಯಕ್ಕೆ ಒಬ್ಬನನ್ನು ನೇಮಿಸಿಕೊಂಡಿದ್ದಾನೆ. ಅವನ ವೇತನದ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡಲಾಗುತ್ತಿದೆ. ಒಂದು ಕಾರ್ಡ್‌ನಿಂದ 1 ಕೆಜಿ ಅಂದರೂ 800 ಕಾರ್ಡ್‌ಗಳಿವೆ ಎಂದು ಭಾವಿಸಿದರೂ ಎಂಟು ಕ್ವಿಂಟಲ್ ಅಕ್ಕಿ ಸಿಗುತ್ತದೆ. ಈ ಅಕ್ಕಿಯನ್ನು 15 ರೂ.ಗಳಿಗೆ ಮಾರಿದರೂ ಕುಳಿತಲ್ಲೇ 12 ಸಾವಿರ ರೂ. ಸಿಕ್ಕಿದಂತಾಗುತ್ತದೆ.
ಇದೀಗ ಈ ರೀತಿ ರಾಜ್ಯದ ಹಲವು ಕಡೆ ಮೋಸ ನಡೆಯುವ ಸಾಧ್ಯತೆ ಇದ್ದು, ಆಹಾರ ನಿರೀಕ್ಷಕರು, ತಹಸೀಲ್ದಾರ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಜತೆಗೆ ಒಂದು ಕೆಜಿ ಅಕ್ಕಿಯೂ ಕಡಿಮೆಯಾಗಬಾರದು ಎಂದು ಶತಪ್ರಯತ್ನ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರೂ ಇದನ್ನು ಗಮನಿಸಬೇಕು ಎನ್ನುವುದು ವಿಡಿಯೊ ಮಾಡಿದ ಗ್ರಾಹಕನ ಆಗ್ರಹ.