ದಾವಣಗೆರೆ: ಬಿಜೆಪಿ ಶಾಸಕ ಮಡಾಳ್ ವಿರೂಪಾಕ್ಷಪ್ಪ ಪುತ್ರನ ಮೇಲೆ ಲೋಕಾಯುಕ್ತ ದಾಳಿ (Lokayukta Raid) ವಿಚಾರ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈ ಕುರಿತು ಅನೇಕ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ವಿರೂಪಾಕ್ಷಪ್ಪ ನಮ್ಮ ಪಕ್ಷದ ಶಾಸಕರು, ಲೋಕಾಯುಕ್ತರ ರೇಡ್ ಆಗಿದೆ. ಇನ್ನೂ ತನಿಖೆ ಹಂತದಲ್ಲಿದೆ, ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅವರದ್ದು ಅಡಕೆ ವ್ಯವಹಾರ, ಬೇರೆ ಬೇರೆ ವ್ಯವಹಾರ ಇದೆ. ಅಷ್ಟು ಹಣ ಚೆಕ್ ಮೂಲಕ ಬಂದಿದ್ಯೋ, ಕ್ಯಾಶ್ ಮೂಲಕ ಬಂದಿದ್ಯೋ ಚೆಕ್ ಮಾಡಬೇಕು.
ನೋಡೋಣ ತನಿಖೆ ಆಗಲಿ, ಈ ಬಗ್ಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿರೂಪಾಕ್ಷಪ್ಪ ವಿರುದ್ಧ ಕ್ರಮದ ಹೈಕಮಾಂಡ್ ನಿರ್ಧಾರ ಮಾಡತ್ತೆ ಎಂದರು. ಈ ಹಿಂದೆ ಕೆ.ಎಸ್.ಡಿ.ಎಲ್ ನಲ್ಲಿ ಅಧ್ಯಕ್ಷರಾಗಿದ್ದಾಗ ಭೈರತಿ ಬಸವರಾಜ್ ಅಕ್ರಮ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೆ.ಎಸ್.ಡಿ.ಎಲ್ ಅಧ್ಯಕ್ಷನಾಗಿದ್ದು ಕೇವಲ 12 ತಿಂಗಳು. ನಾನು ಅಧ್ಯಕ್ಷನಾಗಿದ್ದಾಗ ನಿಗಮಕ್ಕೆ ಸಿ.ಎಸ್.ಆರ್ ಹಣ ಪಡೆದಿರೋದಿ ನಿಜ. 3.95 ಕೋಟಿ ಸಿ.ಎಸ್.ಆರ್ ಹಣ ಪಡೆದಿರೋದು ನಿಜ.
ನಿಗಮಕ್ಕೆ ಬಂದ ಸಿ.ಎಸ್.ಆರ್. ಹಣವನ್ನು ಚೆಕ್ ಮೂಲಕ ಬಿಬಿಎಂಪಿಗೆ ನೀಡಿದ್ದೆ. ಬಿಬಿಎಂಪಿ ಮೂಲಕ ಸಿಎಸ್ಆರ್ ಹಣ ಬಳಕೆ ಮಾಡಲಾಗಿದೆ. ನನ್ನ ಕ್ಷೇತ್ರದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಿಎಸ್ಆರ್ ಹಣ ಬಳಸಲಾಗಿದೆ. ನಾನು ಕಾಂಗ್ರೆಸ್ನಲ್ಲಿದ್ದಾಗ ಕೆ.ಎಸ್.ಡಿ.ಎಲ್ ಅಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು ಮೂರು ವರ್ಷ ಆಯ್ತು. ಕಾಂಗ್ರೆಸ್ನವರು ಮೂರು ವರ್ಷ ಬಾಯಲ್ಲಿ ಕಡಬು ಇಟ್ಕೊಂಡಿದ್ರಾ? ಪಾರದರ್ಶಕತೆ ಬಗ್ಗೆ ಇಷ್ಟೊಂದು ಮಾತಾಡೋರು ಅಂದೇ ಕೇಳಬೇಕಿತ್ತು ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜನ ಮತ್ತೊಮ್ಮೆ ಬಿಜೆಪಿಯ ಡಬಲ್‌ಇಂಜಿನ್ ಸರ್ಕಾರದ ಬಯಕೆಯಲ್ಲಿದ್ದಾರೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟುಹಾಕಿದ ರಕ್ತಬೀಜಾಸುರ ಪಕ್ಷ. ನೆಹರೂ ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಭ್ರಷ್ಟಾಚಾರ ತಾಂಡವವಾಡ್ತಿತ್ತು. ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನ ಯಾಕೆ ಬಂದ್ ಮಾಡ್ತು.
ಹಲ್ಲಿಲ್ಲದ ಹುಲಿ ಮಾಡಿ, ಎಸಿಬಿಗೂ ಪವರ್ ಇಲ್ಲದಂತೆ ಮಾಡಿದ್ರು. ನಾವು ಲೋಕಾಯುಕ್ತ ಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಸಿಎಂ, ಸರ್ಕಾರ ಇದನ್ನು ತಡೆಯಬಹುದಿತ್ತು, ಆದರೆ, ನಾವು ತಡೆಯಲಿಲ್ಲ. ಬಿಜೆಪಿ ಭ್ರಷ್ಟಾಚಾರದ ವಿರುದ್ಧವಾಗಿದೆ, ಅದಕ್ಕೆ ಲೋಕಯುಕ್ತ ಬಲ ಮಾಡಿದ್ದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಯಾರನ್ನೂ ಉಳಿಸುವ ಕೆಲಸ ಮಾಡಲ್ಲ ಎಂದಿದ್ದಾರೆ.
ಇದನ್ನೂ ಓದಿ: Lokayukta Raid: ತಲೆ ಮರೆಸಿಕೊಂಡಿರುವ ಶಾಸಕ ಮಾಡಾಳುಗೆ ವಿಚಾರಣೆಗೆ ನೋಟಿಸ್; ಆದಾಯಕ್ಕಿಂತ ಅಧಿಕ ಆಸ್ತಿ?
ಬೆಳಗಾವಿಯಲ್ಲಿ ಮಾತನಾಡಿರುವ ಸಚಿವ ಗೋವಿಂದ ಕಾರಜೋಳ, 9 ವರ್ಷಗಳ ಮೋದಿಯವರ ಕಾಲದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿವೆ. ದೇಶದ ಐಕ್ಯತೆ ಮತ್ತು ಸಮಗ್ರತೆಯ ಬಗ್ಗೆ ಮೋದಿಯವರು ವಿಶೇಷ ಒತ್ತು ನೀಡುತ್ತಿದ್ದಾರೆ. 60 ವರ್ಷ ಆಡಳಿತ ಮಾಡಿ ಮೂಲೆಪುಂಪಾಗಿರುವ ಕಾಂಗ್ರೇಸ್ ನ ಅಳಿದುಳಿದ ನಾಯಕರು ಬಿಜೆಪಿ ಬಗ್ಗೆ ಟೀಕೆ ಮಾಡ್ತಾರೆ. ಲೋಕಾಯುಕ್ತದ ಬಾಯನ್ನೆ ಕಾಂಗ್ರೇಸ್ಮನವರು ಮುಚ್ಚಿ ಹಾಕಿದ್ರು. ನಾವು ಅಧಿಕಾರಕ್ಕೆ ಬಂದಮೇಲೆ ಲೋಕಾಯುಕ್ತಕ್ಕೆ ಅಧಿಕಾರ ನೀಡಿದ್ದೇವೆ.
ಬಿಜೆಪಿ ಪಕ್ಷಕ್ಕೆ ಇದರಿಂದ ಯಾವುದೇ ಮುಜುಗರ ಆಗುವುದಿಲ್ಲ. ಒಬ್ಬ ವ್ಯಕ್ತಿ ತಪ್ಪು ಮಾಡಿದ್ರೆ ಅದು ಹೇಗೆ ಪಕ್ಷಕ್ಕೆ ಮುಜುಗರ ಆಗುತ್ತೆ? ಕಾರಜೋಳ ಪ್ರಶ್ನೆ ಮಾಡಿದರು.