ದಾವಣಗೆರೆ: ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು (Caste Census Report) ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿರುವ ಲಿಂಗಾಯತ ಸಮುದಾಯದ (Lingayat Community) ನಾಯಕರು ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಆಯೋಜನೆಯಾಗಿರುವ ಅಹಿಂದ ಸಮಾವೇಶಕ್ಕೆ (Ahinda Samavesha) ಠಕ್ಕರ್ ನೀಡಲು ಮುಂದಾಗಿದ್ದಾರೆ. ಅಹಿಂದ ಪಂಗಡಗಳು ಜಾತಿಗಣತಿ ವರದಿ ಬಿಡುಗಡೆಗೆ ಪರವಾಗಿದ್ದು, ಡಿಸೆಂಬರ್ 30ರಂದು ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಸಿ ಒತ್ತಡ ಹೇರುವ ತಂತ್ರವೊಂದು ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಲಿಂಗಾಯತ ಸಮಾವೇಶದ (Lingayat Samavesha) ಮೂಲಕ ಠಕ್ಕರ್ ಕೊಡಲು ತಾವೂ ಸಿದ್ಧ ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಸುಳಿವು ನೀಡಿದ್ದಾರೆ.
ಸಿಎಂಗೆ ಮನವಿ ನೀಡಿದ್ದ ಶಾಮನೂರು ನಿಯೋಗ
ಕಾಂತರಾಜು ವರದಿಯನ್ನು ಬಿಡುಗಡೆ ಮಾಡಬಾರದು, ಹೊಸದಾಗಿ ಜಾತಿಗಣತಿ ಮಾಡಬೇಕು ಎಂದು ವೀರಶೈವ ಲಿಂಗಾಯತ ಶಾಸಕರ ನಿಯೋಗ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತ್ತು.
ನಾವು ಜಾತಿ ಜನಗಣತಿಯ ವಿರೋಧಿಗಳಲ್ಲ ಎಂದು ಸಿಎಂ ಎದುರು ಸ್ಪಷ್ಟಪಡಿಸಿರುವ ನಿಯೋಗ, ಆದರೆ, ಕಳೆದ 8 ವರ್ಷಗಳ ಹಿಂದೆ ನಡೆಸಲಾದ ಈ ಸಾಮಾಜಿಕ ಆರ್ಥಿಕ ಸಮೀಕ್ಷೆ ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದೆ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಮನವಿ ಮಾಡಿತ್ತು.
ʻʻನಾವು ಮಹಾಸಭಾದ ಅನೇಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಈ ಸಮೀಕ್ಷೆಯ ಬಗ್ಗೆ ಪ್ರಸ್ತಾಪಿಸಿದಾಗ, ಅನೇಕರು, ತಮ್ಮ ಮನೆಗೇ ಸರ್ಕಾರಿ ಅಧಿಕಾರಿಗಳು ಬಂದಿಲ್ಲ. ತಮ್ಮ ಕುಟುಂಬದ ಯಾವುದೇ ಮಾಹಿತಿ ಪಡೆದಿಲ್ಲ. ಕಚೇರಿಯಲ್ಲಿಯೇ ಕುಳಿತು ಈ ಸಮೀಕ್ಷಾ ವರದಿ ಸಿದ್ಧಪಡಿಸಿ ಕಳಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಮಿಗಿಲಾಗಿ ಆರ್ಥಿಕ ಸಾಮಾಜಿಕ ಸಮೀಕ್ಷೆ ನಡೆದಾಗ ನಮ್ಮ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸಲಾತಿಯಲ್ಲಿ ಅನ್ಯಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥವಾ ಲಿಂಗಾಯತ ಎಂದು ಬರೆಸದೆ ತಮ್ಮ ಒಳಪಂಗಡಗಳನ್ನು ನಮೂದಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲಿರುವ ಹಲವರು ತಮ್ಮ ಜಾತಿಯ ಕುರಿತಂತೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ನಿಜವಾಗಿಯೂ ಅವರು ಆ ಜಾತಿ, ಸಮುದಾಯಕ್ಕೆ ಸೇರಿದವರೇ ಎಂಬ ಸತ್ಯಾಸತ್ಯತೆ ಅರಿಯಲು ಯಾವುದೇ ಪರಿಶೀಲನೆ ಅಥವಾ ಪರಾಮರ್ಶೆ ಆಗಿಲ್ಲ ಎಂದು ನಿಯೋಗ ಮನವಿಯಲ್ಲಿ ತಿಳಿಸಿತ್ತು.
ಈ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯಲ್ಲೇ ದೋಷವಿದೆ ಎಂಬುದು ನಮ್ಮ ಮಹಾಸಭಾದ ಒಟ್ಟು ಅಭಿಪ್ರಾಯವಾಗಿದೆ. ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈಗಾಗಲೇ ರಾಜ್ಯದಲ್ಲಿ ನಡೆದಿರುವ ಸಾಮಾಜಿಕ ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ಹಳೆಯದಾಗಿದೆ. ಇದನ್ನು ಯಥಾವತ್ ಅಂಗೀಕರಿಸುವುದು ಸೂಕ್ತವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಸೇರಿಸಿ ಸಂಪೂರ್ಣ ವೈಜ್ಞಾನಿಕವಾಗಿ ಹೊಸದಾಗಿ ಜಾತಿ ಜನಗಣತಿ ನಡೆಸಿ ವಾಸ್ತವಾಂಶ ಆಧಾರಿತವಾಗಿ ಅಂಕಿ-ಅಂಶಗಳನ್ನು ದಾಖಲಿಸಿದರೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ನಿಯೋಗ ಮನವಿ ಮಾಡಿತ್ತು.
60 ಲಿಂಗಾಯತ ಶಾಸಕರಿಂದ ಪತ್ರಕ್ಕೆ ಸಹಿ
ಜಾತಿ ಗಣತಿ ಬಿಡುಗಡೆಗೊಳಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಕ್ಕೆ ಸಂಬಂಧಿಸಿ ಶನಿವಾರ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು, 60ಕ್ಕೂ ಹೆಚ್ಚು ಶಾಸಕರ ಸಹಿ ಹಾಕಿ ಸಿಎಂಗೆ ಪತ್ರ ಕೊಟ್ಟಿದ್ದೇವೆ. ಅವೈಜ್ಞಾನಿಕವಾಗಿ ವರದಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಲಿಂಗಾಯಿತ ಶಾಸಕರು ಎಲ್ಲರು ಸೇರಿ ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.
ʻʻ73 ಲಿಂಗಾಯಿತ ಶಾಸಕರಲ್ಲಿ 60 ಶಾಸಕರು ಸಹಿ ಮಾಡಿ ಪತ್ರ ಕೊಟ್ಟಿದ್ದೇವೆ. ಸಿಎಂ ನಾನೇ ವರದಿ ನೋಡಿಲ್ಲ, ನೀವು ಈಗಲೇ ವಿರೋಧ ಮಾಡುತ್ತೀರಾ ಎಂದು ಹೇಳಿದ್ದಾರೆʼʼ ಎಂದು ಹೇಳಿದರು ಶಾಮನೂರು.
ಡಿಸೆಂಬರ್ ಮೂವತ್ತರಂದು ಹಿಂದುಳಿದ ವರ್ಗಗಳ ವತಿಯಿಂದ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಆಯೋಜನೆಯಾಗಿರುವ ಬಗ್ಗೆ ಕೇಳಿದಾಗ ಅವರು ಅಹಿಂದ ಶಕ್ತಿ ಪ್ರದರ್ಶನ ಮಾಡಲಿ, ನಾವು ಲಿಂಗಾಯಿತ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಕೌಂಟರ್ ಕೊಟ್ಟರು.
ದಾವಣಗೆರೆಯಲ್ಲಿ ಮಹಾ ಅಧಿವೇಶನ ಏರ್ಪಡಿಸಿ ಅಲ್ಲಿ ನಾವೂ ಶಕ್ತಿ ಪ್ರದರ್ಶನ ಮಾಡುತ್ತೇವೆ ಜಾತಿ ಗಣತಿ ಬಿಡುಗಡೆಗೆ ಒಕ್ಕೊರಲಾಗಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಜಾತಿ ಗಣತಿ ಬಿಡುಗಡೆ ಮಾಡಬಾರದು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳ ಬಗ್ಗೆ ಕೇಳಿದಾಗ, ʻʻಈ ವಿಚಾರವಾಗಿ ಅವರ ಜೊತೆ ಚರ್ಚಿಸಿದ್ದಾರೆ ಅಷ್ಟೆ. ನನಗ್ಯಾಕೇ ಹೇಳ್ತಾರೆ.. ನಾನು ಮೋಸ್ಟ್ ಸೀನಿಯರ್. ಹೀಗಾಗಿ ಖರ್ಗೆ ನನಗೆ ಏನೂ ಹೇಳಿಲ್ಲʼʼ ಎಂದರು. ಒಂದು ವರದಿ ಬಿಡುಗಡೆ ಆದರೆ ಎಲ್ಲರೂ ಕೂತು ಯೋಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ನುಡಿದರು.
ಏನಿದು ಚಿತ್ರದುರ್ಗದ ಅಹಿಂದ ಸಮಾವೇಶ?
ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲ್ಯಾನ್‌ನೊಂದಿಗೆ ಸಿಎಂ ಸಿದ್ದರಾಮಯ್ಯ ಉರುಳಿಸಿದ ಮತ್ತೊಂದು ದಾಳವೇ ಡಿಸೆಂಬರ್ 30ಕ್ಕೆ ಚಿತ್ರದುರ್ಗದಲ್ಲಿ ಆಯೋಜಿಸಿದ ಅಹಿಂದ ಸಮಾವೇಶ ಎಂದು ವ್ಯಾಖ್ಯಾನಿಸಲಾಗಿದೆ.
ಸಿದ್ದರಾಮೋತ್ಸವ ಮಾದರಿಯಲ್ಲಿ ಅಹಿಂದ ಸಮಾವೇಶಕ್ಕೂ ಸಿದ್ದರಾಮಯ್ಯ ಆಪ್ತರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಕಳೆದ ಎರಡು ದಿನಗಳಿಂದ ಹಲವು ಸಭೆಗಳು ನಡೆದಿವೆ. ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ಸಭೆ ನಡೆದಿದೆ. ಬಳಿಕ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆ, ಬಳಿಕ ಹಿಂದುಳಿದ ವರ್ಗಗಳ ವಿವಿಧ ಒಕ್ಕೂಟಗಳ ಸಭೆ ಆಯೋಜನೆ ಆಗಿತ್ತು. ಸಿಎಂ ಆಪ್ತ ಹಾಗೂ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್ ಅವರು ಸಭೆ ಮಾಡಿದ್ದರು.
ಸಿದ್ದರಾಮೋತ್ಸವ ಸಂದರ್ಭದಲ್ಲೂ ಇದೆ ಮಾದರಿಯ ಸರಣಿ ಸಭೆಗಳು ನಡೆದಿದ್ದವು. ಇದೀಗ ಅದೇ ಸಿದ್ದರಾಮೋತ್ಸವ ಮಾದರಿಯಲ್ಲೆ ಅಹಿಂದ ಸಮಾವೇಶ ತಯಾರಿ ಸಭೆಗಳ ಆಯೋಜನೆ ನಡೆಯುತ್ತಿದೆ.
ಹಾಗಿದ್ದರೆ ಆ ಮೂರು ತಂತ್ರಗಾರಿಕೆಗಳು ಏನು?
- ತಮ್ಮ ಅಹಿಂದ ಬ್ರ್ಯಾಂಡ್ ಲೋಕಸಭೆ ಚುನಾವಣೆ ತೆಗೆದುಕೊಂಡು ಹೋಗುವುದು.
- ಕಾಂತರಾಜ್ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶ ನೀಡುವುದು.
- ಅತಿ ಹಿಂದುಳಿದ ವರ್ಗಗಳ ಸಮಾವೇಶ ಮಾಡಿದ್ದ ಬಿ.ಕೆ ಹರಿಪ್ರಸಾದ್ ಗೆ ಸೆಡ್ಡು ಹೊಡೆಯುವುದು.