ಬೆಂಗಳೂರು/ಚಿಕ್ಕಮಗಳೂರು/ದಾವಣಗೆರೆ: ಸಿದ್ದರಾಮಯ್ಯ ಅವರೇ ಶ್ರೀರಾಮ (CM Siddaramaiah himself Srirama), ನಾನೇ ಆಂಜನೇಯ (I am Anjaneya), ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಚ್. ಆಂಜನೇಯ (H Anjaneya) ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿಯ ಹಲವು ನಾಯಕರು ಆಂಜನೇಯ ಮತ್ತು ಸಿದ್ದರಾಮಯ್ಯ ಇಬ್ಬರ ಮೇಲೂ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಎಂದಾದರೂ ರಾಮನಾಗಲೂ ಸಾಧ್ಯವೇ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ರಾಮನಿಗೆ ತದ್ವಿರುದ್ಧ ಎಂದ ರೇಣುಕಾಚಾರ್ಯ
ʻʻಸಿದ್ದರಾಮಯ್ಯನ ಹೆಸರಿನಲ್ಲಿ ರಾಮ ಇದೆ ಆದರೆ ಅದಕ್ಕೆ ಅವರು ತದ್ವಿರುದ್ಧʼʼ ಎಂದು ಬಿಜೆಪಿ ನಾಯಕ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.
ʻʻಕಾಂಗ್ರೆಸ್ ನವರು ಪ್ರತಿಯೊಂದಕ್ಕೂ ರಾಜಕಾರಣವನ್ನು ಮಾಡುತ್ತಾರೆ. ರಾಮ ಅಲ್ಲಿ ಹುಟ್ಟಿದ್ನಾ? ಇಲ್ಲಿ ಹುಟ್ಟಿದ್ನಾ ದಾಖಲೆ ಕೊಡಿ ಅಂತ ಕೇಳ್ತಾರೆ. ನೀನು ನಿನ್ನ ತಾಯಿಗೆ ಹುಟ್ಟಿದ್ಯಾ ಅಂತಾನೂ ಕೇಳ್ತಾರೆʼʼ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಂ.ಪಿ. ರೇಣುಕಾಚಾರ್ಯ.
ಸಿದ್ದರಾಮಯ್ಯನೇ ಶ್ರೀರಾಮ ಎಂಬ ಆಂಜನೇಯ ಅವರ ಹೇಳಿಕೆ ಇದು ಪ್ರಭು ಶ್ರೀರಾಮನಿಗೆ ಮಾಡಿದ ಅವಮಾನ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದರು.
ʻʻಸಿಎಂ ಸಿದ್ದರಾಮಯ್ಯ ಅವರು ಮೌಲ್ವಿಗಳ ಸಮಾವೇಶದಲ್ಲಿ ಟೋಪಿ ಹಾಕಿಕೊಳ್ಳುತ್ತಾರೆ. ಹಿಂದೂಗಳ ಕೇಸರಿ ಪೇಟ, ಶಾಲು ಹಾಕಿಸಿಕೊಳ್ಳಲು ವಿರೋಧ ಮಾಡುತ್ತಾರೆ. ಹೆಣ್ಣು ಮಕ್ಕಳ ಮೂಗುತಿ, ಕುಂಕುಮದ ಬಗ್ಗೆ ಪ್ರಶ್ನೆ ಮಾಡ್ತಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಹಿಂದುಗಳ ಹತ್ಯೆಯಾಗುವಾಗ ಯಾಕೆ ಖಂಡಿಸುವುದಿಲ್ಲ ಎಂದು ಪ್ರಶ್ನಿಸಿದರು ರೇಣುಕಾಚಾರ್ಯ.
ಸಿದ್ದರಾಮಯ್ಯ ಅವರಿಗೆ ರಾಮ ಮಂದಿರ ಉದ್ಘಾಟನೆಗೆ ಅಹ್ವಾನ ಇಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಎಲ್ಲ ಎಡ ಪಂಥೀಯ ನಾಯಕರನ್ನು ಕೂಡ ಆಹ್ವಾನ ಮಾಡಿದ್ದಾರೆ. ಅಲ್ಲಿನ ಭದ್ರತೆ ನೋಡಿಕೊಂಡು ಕರೆಯುತ್ತಾರೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಬಹುಸಂಖ್ಯಾತ ಹಿಂದೂಗಳ ಕಾರ್ಯಕ್ರಮʼ ಎಂದರು.
ʻʻಕಾಂಗ್ರೆಸಿಗರು ರಾಮ ಮಂದಿರದ ವಿರೋಧಿಗಳು. ಅವರು ರಾಮನ ಬದಲಾಗಿ, ಬಾಬರ್, ಟಿಪ್ಪು ಔರಂಗಜೇಬನ ನನ್ನು ವೈಭವೀಕರಿಸುವ ವಿಕೃತ ಜನʼʼ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಮ ಎಲ್ಲರಿಗೂ ನ್ಯಾಯ ಕೊಟ್ಟ, ಸಿದ್ದರಾಮಯ್ಯ ಕೊಟ್ರಾ?
ʻʻನಿಮ್ಮ ಹೆಸರು ಅಂಜನೇಯ, ನೀವು ಹೇಳಿದ್ರಿ ಸಿದ್ದರಾಮಯ್ಯ ಅವರು ಹೆಸರಲ್ಲಿ ರಾಮ ಇದ್ದಾನೆ ಅಂತ. ರಾಮ ಎಲ್ಲರಿಗೂ ನ್ಯಾಯ ಕೊಟ್ಟು, ಧರ್ಮದ ಪರ ಕೆಲಸ ಮಾಡಿದ. ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ರಾ?ʼʼ ಹೀಗೆಂದು ಪ್ರಶ್ನೆ ಮಾಡಿದ್ದಾರೆ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ʻʻದಲಿತರ ಕಲ್ಯಾಣಕ್ಕೆ ಇಟ್ಟ 11 ಸಾವಿರ ಕೋಟಿ ರೂ.ಯನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದೆ. ಅದೇ ಸರ್ಕಾರ ವೋಟ್ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಮೀಸಲು ಇಟ್ಟಿದೆ. ಹೀಗೆ ಒಬ್ಬರಿಗೆ ಆನ್ಯಾಯ ಮಾಡುವವರು ರಾಮನಿಗೆ ಸಮಾನಾಗಲು ಸಾಧ್ಯನಾ?.ʼʼ ಎಂದು ಪ್ರಶ್ನೆ ಮಾಡಿದರು.
ʻʻಹುಬ್ಬಳ್ಳಿಯಲ್ಲಿ ಅಯೋಧ್ಯಾ ಹೋರಾಟದಲ್ಲಿ ಪಾಲ್ಗೊಂಡರು ಎಂಬ ಕಾರಣಕ್ಕಾಗಿ 31 ವರ್ಷದ ನಂತರ ಆ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ. ರವಿ ಅವರು, ʻʻರಾಮನ ಹೆಸ್ರು ಇಟ್ಕೊಂಡಿದ್ದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಅಗುತ್ತಾ? ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಆದ್ರೆ ಗುಣ ಇದೆಯಾʼʼ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ಗೆ ಬೇರೆ ರಾಮ ಇರಬಹುದು, ದೇಶಕ್ಕೊಬ್ಬನೇ ರಾಮ ಎಂದ ಬೆಲ್ಲದ್
ಕಾಂಗ್ರೆಸ್‌ನವರಿಗೆ ಬೇರೆ ಬೇರೆ ರಾಮರು ಇರಬಹುದು. ಆದರೆ, ಇಡೀ ದೇಶಕ್ಕೆ ಮರ್ಯಾದಾ ಪುರುಷೋತ್ತಮ ರಾಮ ಒಬ್ಬನೇ ಇರುವುದು ಎಂದು ಆಂಜನೇಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್. ಅವರಿಗೆಲ್ಲ ಸಿದ್ದರಾಮಯ್ಯ, ಆ ರಾಮಯ್ಯ, ಈ ರಾಮಯ್ಯ ಅಂತ ಬಹಳ ಇದಾರೆ, ಆದರೆ ದೇಶದ ಜನತೆಗೆ ಒಬ್ಬನೇ ರಾಮ ಎಂದು ಧಾರವಾಡದಲ್ಲಿ ಬೆಲ್ಲದ್ ಹೇಳಿದರು.
ರಾಮನನ್ನು ಬೇರೆಯವರಿಗೆ ಹೋಲಿಸಬೇಡಿ ಎಂದ ಮಂತ್ರಾಲಯ ಶ್ರೀಗಳು
ಸಿದ್ದರಾಮಯ್ಯನೇ ಶ್ರೀರಾಮ ಇದ್ದಂತೆ ಎಂಬ ಮಾಜಿ ಸಚಿವ ಆಂಜನೇಯ ಅವರ ಹೇಳಿಕೆಗೆ ರಾಯಚೂರಿನಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರತಿಕ್ರಿಯೆ ನೀಡಿದ್ದಾರೆ.
ʻʻಯಾರು ಏನು ಹೇಳಿಕೆ ಕೊಟ್ಟಿದ್ದಾರೋ ನಾನು ಗಮನಿಸಿಲ್ಲ. ರಾಮ ಎನ್ನುವಂತದ್ದು ಎಲ್ಲರಿಗೂ ಆದರ್ಶ ಮತ್ತು ಅನುಕರಣೀಯ. ರಾಮನನನ್ನು ಇನ್ನೊಬ್ಬರಿಗೆ ಹೋಲಿಸುವುದು ಸರಿಯಲ್ಲʼʼ ಎಂದು ಶಾಸ್ತ್ರದ ಉದಾಹರಣೆ ನೀಡಿದರು ಮಂತ್ರಾಲಯ ಶ್ರೀಗಳು.
ʻʻರಾಮದೀದಾ ವರ್ತಿತಾದಂ, ನಾ ರಾವಣಾದಿ ವರ್ತಿತಂ: ನೀನು ಹೇಗೆ ಇರಬೇಕು ಅಂತ ಹೇಳುವಾಗ ಎಲ್ಲರೂ ರಾಮನಂತೆ ಇರು ಎನ್ನುತ್ತಾರೆ, ರಾವಣನಂತೆ ವರ್ತಿಸಬೇಡ ಎನ್ನುತ್ತಾರೆ. ಸಿಎಂ ಸಿದ್ದರಾಮಯ್ಯ ರಾಮನ ಹೆಸರು ಇಟ್ಟುಕೊಂಡಿದ್ದಾರೆ. ರಾಮನ ಆದರ್ಶ, ರಾಮನ ವಿಶೇಷವಾದ ಜನಾನುರಾಗಿ ಗುಣವನ್ನು ಅವರು ಕೂಡಾ ಪಡೆಯಲಿʼʼ ಎಂದು ಶ್ರೀಗಳು ಹಾರೈಸಿದರು.