ದಾವಣಗೆರೆ: ಕಾಂಗ್ರೆಸ್ ಮುಕ್ತ ಭಾರತ್ ಎನ್ನುವ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗಳಿಗೆ ಉತ್ತರ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದಿಂದ ಕಾಂಗ್ರೆಸನ್ನು ನಿರ್ನಾಮ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 2024ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ರಾಹುಲ್ ಗಾಂಧಿಯವರೇ ಮುಂದಿನ ಪ್ರಧಾನಮಂತ್ರಿಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ತಮ್ಮ 75ನೇ ವರ್ಷದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದರಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಪಾತ್ರ ಏನೂ ಇಲ್ಲ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ “”ಅವರು ಅಧಿಕಾರಕ್ಕೆ ಬಂದಿರುವುದು ಹಿಂದು ರಾಷ್ಟ್ರ ನಿರ್ಮಾಣ ಮಾಡಬೇಕು, ಲೂಟಿ ಮಾಡಬೇಕು, ದೇಶದ ಸಂವಿಧಾನವನ್ನು ಬುಡಮೇಲು ಮಾಡಬೇಕು, ಸರ್ವಾಧಿಕಾರವನ್ನು ತರಬೇಕು ಎಂಬ ಉದ್ದೇಶದಿಂದ. ನರೇಂದ್ರ ಮೋದಿ ಹಾಗೂ ಬಿಜೆಪಿಯವರೇ ಕೇಳಿ. ನೀವು ಎಂದೆಂದಿಗೂ ಕಾಂಗ್ರೆಸನ್ನು ಮುಗಿಸಲು ಸಾಧ್ಯವಿಲ್ಲ. ನಿಮ್ಮ ಕನಸು ಎಂದಿಗೂ ನನಸಾಗುವುದಿಲ್ಲ. 2024ರ ಲೋಕಸಭೆ ಚುನಾವಣೆ, 2023ರ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯುತ್ತದೆ. 2024ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಗಾಂಧಿಯವರು ಈ ದೇಶದ ಆಶಾಕಿರಣ. ಬಡವರ, ಹಿಂದುಳಿದವರ ಬಗ್ಗೆ ಕಾಳಜಿ ಇರುವವರು ಈ ದೇಶದ ಪ್ರಧಾನಿ ಆಗಬೇಕುʼʼ ಎಂದರು.
“”ಕಳೆದ ಎಂಟು ವರ್ಷದಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಆದರೆ ಅವರು ನುಡಿದಂತೆ ನಡೆಯಲಿಲ್ಲ. 2014ರಲ್ಲಿ ಮೋದಿ ಪ್ರಧಾನಿಯಾದಾಗ ಈ ದೇಶದ ಮೇಲಿದ್ದ ಸಾಲ 53 ಲಕ್ಷ ಕೋಟಿ ರೂಪಾಯಿ. ಎಂಟು ವರ್ಷದ ನಂತರ, ದೇಶದ ಮೇಲೆ 155 ಲಕ್ಷ ಕೋಟಿ ರೂ. ಸಾಲವಾಗಿದೆ. ಎಂಟು ವರ್ಷದಲ್ಲಿ 102 ಲಕ್ಷ ಕೋಟಿ ರೂ. ಸಾಲ ಮಾಡಿದ್ದೀರಿ. ರೈತರನ್ನು, ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಹಾಳು ಮಾಡಿದ್ದೀರಿ. ಅಚ್ಛೇ ದಿನ್ ಎಂದುಕೊಂಡು ಅಧಿಕಾರಕ್ಕೆ ಬಂದ ನೀವು ಇಂದು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಗಗನಕ್ಕೇರಲು ಕಾರಣವಾಗಿದ್ದೀರʼʼ ಎಂದು ಹರಿಹಾಯ್ದರು.
ಇದನ್ನೂ ಓದಿ | ಸಿದ್ದರಾಮೋತ್ಸವದ ವೇದಿಕೆಯಲ್ಲಿ ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ ಡಿ.ಕೆ ಶಿವಕುಮಾರ್
ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಾರೆ. ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಕಂಟ್ರಾಕ್ಟರ್ ಅಸೋಸಿಯೇಷನ್ ಹೇಳಿದೆ, ನಿಮಗೆ ನೇರವಾಗಿ ಪತ್ರ ಬರೆದಿದೆ ಎಂದರು.
“”ಸಬ್ ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂದಿರಿ. ಕರಾವಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೂರು ಕೊಲೆ ಆಗಿವೆ. ಮಸೂದ್, ಪ್ರವೀಣ್ ಹಾಗೂ ಫಾಜಿಲ್ ಕೊಲೆ ಆಯಿತು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿಗೆ ಭೇಟಿ ನೀಡಿದ್ದರು. ಮಸೂದ್ ಮನೆಗೂ ಹೋಗಲಿಲ್ಲ, ಫಾಜಿಲ್ ಮನೆಗೂ ಹೋಗಲಿಲ್ಲ. ಪ್ರವೀಣ್‌ಗೆ ಮಾತ್ರವೇ ಪರಿಹಾರ ಕೊಟ್ಟಿರಿ. ಪ್ರವೀಣ್‌ಗೆ ಪರಿಹಾರ ಕೊಟ್ಟಿದ್ದು ಸರಿ. ಆದರೆ ಉಳಿದಿಬ್ಬರಿಗೆ ಏಕೆ ಕೊಟ್ಟಿಲ್ಲ? ನೀವು ಇಡೀ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿಯೋ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದಕ್ಕೆ ನೈತಿಕತೆ ಇದೆಯ? ನೀವು ಈ ರಾಜ್ಯ ಆಳುವುದಕ್ಕೆ ಲಾಯಕ್ಕ? ನೀವು ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿʼʼ ಎಂದರು.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಿಗೆ ಇ.ಡಿ ವಿಚಾರಣೆ ನಡೆಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ “”ಜನಶಕ್ತಿ ಎದ್ದೇ ಏಳುತ್ತದೆ. ಇಂದು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಅಕ್ರಮ ಹಣ ವರ್ಗಾವಣೆ ನಡೆಯದಿದ್ದರೂ ಐವತ್ತು ಗಂಟೆ ವಿಚಾರಣೆ ಮಾಡುತ್ತಿದ್ದೀರ. ಸೋನಿಯಾ ಗಾಂಧಿಯವರ ವಯಸ್ಸನ್ನೂ ಲೆಕ್ಕಿಸದೆ ಇ.ಡಿ. ಕಚೇರಿಗೆ ಕರೆದು ವಿಚಾರಣೆ ಮಾಡಿದ್ದೀರಿ. ನರೇಂದ್ರ ಮೋದಿಯವರೇ, ಕಾಂಗ್ರೆಸ್‌ಗೆ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಅವರೆಲ್ಲರೂ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಜತೆಗೆ ಇದ್ದಾರೆ. ಅಮಾಯಕರನ್ನು ವಿಚಾರಣೆ ನಡೆಸಲು ಕಾನೂನು, ಸಂವಿಧಾನ ಅವಕಾಶ ನೀಡುವುದಿಲ್ಲ. ಸೇಡಿನ ರಾಜಕಾರಣ ಮಾಡುವ ಕೋಮುವಾದಿ ಬಿಜೆಪಿ ಸರ್ಕಾರವನ್ನು ಆದಷ್ಟೂ ಬೇಗ ಕಿತ್ತೊಗೆಯಬೇಕುʼʼ ಎಂದರು.
ಇದನ್ನೂ ಓದಿ | ನಾನು ಹಾಗೂ ಡಿ.ಕೆ. ಶಿವಕುಮಾರ್ ಒಟ್ಟಾಗಿದ್ದೇವೆ: ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಮಾತು