Site icon Vistara News

Davanagere Election Result 2024: ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ಗೆ ಗೆಲುವು

Davangere Election Result 2024

Davangere Election Result 2024: Prabha Mallikarjun Wins Against Gayatri Siddheshwar

ದಾವಣಗೆರೆ: ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿರವ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ (Davanagere Election Result 2024) ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆಲುವು ಸಾಧಿಸಿದ್ದಾರೆ. ಆ ಮೂಲಕ ದಾವಣಗೆರೆ ಜಿಲ್ಲೆಯ ಮೇಲೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬವು ಸಂಪೂರ್ಣ ಹಿಡಿತ ಸಧಿಸಿದಂತಾಗಿದೆ. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್‌ ಅವರು ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದು, ಭಾರಿ ಹಿನ್ನಡೆಯಾದಂತಾಗಿದೆ.

ಜಿ.ಎಂ.ಸಿದ್ದೇಶ್ವರ್‌ ಅವರು ಅನಾರೋಗ್ಯದ ಮಧ್ಯೆಯೂ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ನರೇಂದ್ರ ಮೋದಿ ಅವರ ಅಲೆಯು ಕೂಡ ಕ್ಷೇತ್ರದಲ್ಲಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಿಂದಾಗಿ ಕ್ಷೇತ್ರದಲ್ಲಿ ಭುಗಿಲೆದ್ದಿದ್ದ ಭಿನ್ನಮತವು ಶಮನವಾಗಿತ್ತು. ಹಾಗಾಗಿ, ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಗೆಲುವು ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೂ ಕ್ಷೇತ್ರದಲ್ಲಿ ಕಮಲ ಪಾಳಯಕ್ಕೆ ಹಿನ್ನಡೆಯಾದಂತಾಗಿದೆ.

ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ವರ್ಚಸ್ಸಿದೆ. ಇವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಚಿವರೂ ಆಗಿದ್ದಾರೆ. ಲಿಂಗಾಯತ ಮತಗಳ ಮೇಲೆ ಇವರ ಕುಟುಂಬದ ಹಿಡಿತವಿದೆ. ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಕಳೆದ ಒಂದು ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಜನರಿಗೆ ಹತ್ತಿರವಾಗಿದ್ದರು. ಮಾವ, ಪತಿಯ ಬಲದಿಂದ, ಸಮಾಜ ಸೇವೆ, ಕಾಂಗ್ರೆಸ್‌ ಗ್ಯಾರಂಟಿಗಳ ಫಲವಾಗಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಮುನ್ನಡೆಯ ವಿಶ್ವಾಸದಲ್ಲಿದ್ದರು. ಆದರೆ, ಜಿ.ಬಿ.ವಿನಯ್‌ ಕುಮಾರ್‌ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿರುವುದು ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ತುಸು ಹಿನ್ನಡೆ ಎಂದೇ ಹೇಳಲಾಗುತ್ತಿತ್ತು. ಇದೆಲ್ಲವನ್ನೂ ಮೀರಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆಲುವು ಸಾಧಿಸಿದ್ದಾರೆ.

2019, 2014ರ ಫಲಿತಾಂಶ ಏನಾಗಿತ್ತು?

2019ರಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ ಅವರು ಕಾಂಗ್ರೆಸ್‌ನ ಎಚ್‌.ಬಿ.ಮಂಜಪ್ಪ ಅವರ ವಿರುದ್ಧ ಸುಮಾರು 1.69 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ 4 ಲೋಕಸಭೆ ಚುನಾವಣೆಗಳಲ್ಲೂ ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ್‌ ಅವರೇ ಗೆಲುವು ಸಾಧಿಸಿದ್ದಾರೆ. 2004, 2009 ಹಾಗೂ 2014ರಲ್ಲೂ ಜಿ.ಎಂ.ಸಿದ್ದೇಶ್ವರ್‌ ಅವರೇ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: Bagalkot Election Result 2024: ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ್‌ಗೆ ಜಯ

Exit mobile version