ದಾವಣಗೆರೆ: ಸಿದ್ದರಾಮಯ್ಯ ಅವರು 75ನೇ ವರ್ಷಕ್ಕೆ ಕಾಲಿಸುತ್ತಿರುವ ಸಂದರ್ಭದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸುಮಾರು ಎಂಟು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಇದೆಲ್ಲದರ ನಡುವೆ ಗಮನ ಸೆಳೆದ ಅಂಶವೆಂದರೆ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕುತ್ತಿಗೆಯಲ್ಲಿ ಸ್ಟೆಥೋಸ್ಕೋಪ್ ಧರಿಸಿಯೇ ಭಾಗವಹಿಸಿದ್ದಾರೆ.
ಸಿದ್ದರಾಮಯ್ಯ ಅವರ ಜೀವನದಲ್ಲಿ ಪ್ರಮುಖ ಘಟ್ಟ ಇದು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರಿಗೆ ಇದು ಮೊದಲ ಬೃಹತ್ ಕಾರ್ಯಕ್ರಮ ಅಲ್ಲ. ಈ ಹಿಂದೆ ಜಿಡಿಎಸ್‌ನಲ್ಲಿದ್ದಾಗ ಲಕ್ಷಾಂತರ ಜನರ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಹಿಂದ ಸಮಾವೇಶಗಳನ್ನು ರಾಜ್ಯಾದ್ಯಂತ ಆಯೋಜಿಸಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಬಳ್ಳಾರಿ ಗಣಿ ಧಣಿಗಳ ವಿರುದ್ಧ ವಿಧಾನಸಭೆಯಲ್ಲೇ ಭುಜ ತಟ್ಟಿ ಸವಾಲೆಸೆದು ಬೆಂಗಳೂರಿನಿಂದ ಪಾದಯಾತ್ರೆ ಮಾಡಿದ್ದಾರೆ. ವಯಸ್ಸಿಗೆ ಅನುಗುಣವಾದ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಈಗಲೂ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವ ಸಿದ್ದರಾಮಯ್ಯ ಈಗ ಎಪ್ಪತೈದನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ | ರಾಹುಲ್ ಗಾಂಧಿ ಫಿಟ್‌ನೆಸ್: ಸಿದ್ದರಾಮೋತ್ಸವಕ್ಕೂ ಮುನ್ನ 52 ವರ್ಷದ ನಾಯಕನ ವರ್ಕೌಟ್
ಬೃಹತ್ ಕಾರ್ಯಕ್ರಮಕ್ಕೆ ತಯಾರಿ ಆರಂಭವಾದ ದಿನದಿಂದಲೇ ಸಾಕಷ್ಟು ಸಭೆಗಳಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ, ಈ ನಡುವೆ ನಿರಂತರ ಭಾಷಣಗಳು, ಅನೇಕ ಮಾಧ್ಯಮಗಳಿಗೆ ಸಂದರ್ಶನ ಸೇರಿ ಕಳೆದ ಕೆಲ ದಿನಗಳಿಂದ ಬಿರುಸಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಮೂಲತಃ ವೈದ್ಯರಾದ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಇದೆಲ್ಲವನ್ನೂ ಅರಿತಿದ್ದಾರೆ.
ಬೃಹತ್ ಕಾರ್ಯಕ್ರಮದಲ್ಲಿ ತಂದೆ ಯಾವುದೇ ಕಾರಣಕ್ಕೆ ಅನಾರೋಗ್ಯಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಅವರನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ದಾವಣಗೆರೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ದಾವಣಗೆರೆ ನಗರದ ದುರ್ಗಾಂಭ ದೇವಸ್ಥಾನ, ನಂತರ ದರ್ಗಾ ಭೇಟಿ ಮಾಡುತ್ತಿದ್ದಾರೆ. ಇದೆಲ್ಲ ಸಮಯದಲ್ಲಿ ನೂರಾರು, ಸಾವಿರಾರು ಜನರು ಸಿದ್ದರಾಮಯ್ಯ ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ. ಜೈಕಾರ ಕೂಗುವುದಷ್ಟೆ ಅಲ್ಲದೆ ಪ್ರತಿಯೊಬ್ಬರೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.
ಇದೆಲ್ಲ ಸಮಯದಲ್ಲಿ ಯತೀಂದ್ರ ಸಿದ್ದರಾಮಯ್ಯ ಜತೆಯಲ್ಲೇ ಇದ್ದಾರೆ. ಕುತ್ತಿಗೆಯಲ್ಲಿ ಸ್ಟೆಥೋಸ್ಕೋಪ್ ಧರಿಸಿಕೊಂಡು, ತುರ್ತುಪರಿಸ್ಥಿತಿಗೆ ಅಗತ್ಯವಿರುವ ಔಷಧಗಳನ್ನೂ ಜತೆಗೇ ಇರಿಸಿಕೊಂಡಿದ್ದಾರೆ. ಎಪ್ಪತ್ತೈದರ ಸಂಭ್ರಮದಲ್ಲಿ ಯಾವುದೇ ಅನಾರೋಗ್ಯ ಉಂಟಾದರೂ ಚಿಕಿತ್ಸೆ ನೀಡಲು ಸನ್ನದ್ಧರಾಗಿ ಬಂದಿದ್ದಾರೆ.
ಇದನ್ನೂ ಓದಿ | ರಾಹುಲ್ ಗಾಂಧಿ ಕೊರಳಿಗೆ ಇಷ್ಟಲಿಂಗ ಧಾರಣೆ: ಚಿತ್ರದುರ್ಗ ಮುರುಘಾಮಠಕ್ಕೆ ಭೇಟಿ