Site icon Vistara News

Drowned in water : ಉಕ್ಕಿ ಹರಿಯುತ್ತಿದ್ದ ತುಂಗಭದ್ರ ನದಿಯಲ್ಲಿ ಕೊಚ್ಚಿ ಹೋದ ಯುವಕ

Drowned in water

ದಾವಣಗೆರೆ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರ ನದಿಗಿಳಿದು ದನಗಳ (Drowned in water) ಮೈ ತೊಳೆಯಲು ಹೋದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಇಂಗಳಗೊಂದಿ ಜಯಪ್ಪ (32) ನದಿಪಾಲಾದವರು. ದಾವಣಗೆರೆಯ ಹರಿಹರ ತಾಲೂಕಿನ ದೂಳೆಹೊಳೆ ಗ್ರಾಮದ ಬಳಿ ತುಂಗಭದ್ರ ನದಿಯಲ್ಲಿ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೂಳೆಹೊಳೆ ಗ್ರಾಮದ ನಿವಾಸಿ ಜಯಪ್ಪ ನದಿ ಹರಿವಿನ ಪ್ರಮಾಣ ಹೆಚ್ಚಾಗಿದ್ದು ಗಮನಿಸದೆ, ಏಕಾಏಕಿ ಇಳಿದಿದ್ದ. ನದಿಗಿಳಿದು ಜಾನುವಾರುಗಳ ಮೈ ತೊಳೆಯಲು ಮುಂದಾಗಿದ್ದಾಗ, ಇದ್ದಕ್ಕಿದಂತೆ ನೀರಿನ ಸೆಳೆತಕ್ಕೆ‌ ಒಳಗಾಗಿ ನದಿ ಪಾಲಾಗಿದ್ದಾರೆ. ದೂಳೆಹೊಳೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.

ಮಲೇಬೆನ್ನೂರು‌ ಪೊಲೀಸ್ ಠಾಣೆಯಲ್ಲಿಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Karnataka Weather : ಕರಾವಳಿ, ಮಲೆನಾಡಿನಲ್ಲಿ ತಪ್ಪಲ್ಲ ಮಳೆ ಕಾಟ; ಬೆಂಗಳೂರಿನಲ್ಲಿ ಹೇಗಿರಲಿದೆ ಮಳೆಯಾಟ

ಮನೆ ಕುಸಿದು ಬಿದ್ದು ನಾಲ್ವರಿಗೆ ಗಾಯ

ಶಿವಮೊಗ್ಗ: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದೆ. ಜತೆಗೆ ಅಲ್ಲಲ್ಲಿ ಅವಾಂತರವೂ ಸೃಷ್ಟಿಯಾಗಿದೆ. ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಿವಮೊಗ್ಗದ ಶಿಕಾರಿಪುರದಲ್ಲಿ ಮನೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ (Karnataka Rain).

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಶಿವಮೂರ್ತಿ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದು ನಾಲ್ಕು ಮಂದಿಗೆಗೆ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೂರ್ತಿ, ಪತ್ನಿ ಸೇರಿ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಆರೋಗ್ಯ ವಿಚಾರಿಸಿದ್ದಾರೆ.

ರಸ್ತೆ ಪಕ್ಕದಲ್ಲಿಯೇ ನಿಂತ ನೂರಾರು ಲಾರಿಗಳು

ಬೆಳಗಾವಿ: ಪಶ್ಚಿಮ‌ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಶಿಥಿಲವಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಲಾರಿಗಳನ್ನು ತಡೆದು ನಿಲ್ಲಿಸಲಾಗಿದೆ. ಚೋರ್ಲಾ ಮಾರ್ಗವಾಗಿ ಬೆಳಗಾವಿಗೆ ಬರುವ ವಾಹನಗಳನ್ನು ಅಧಿಕಾರಿಗಳು ತಡೆದಿದ್ದು, ಇದರಿಂದ ಕಳೆದ 24 ಗಂಟೆಗಳಿಂದ ಸರಕು ಹೊತ್ತು ನೂರಾರು ಲಾರಿಗಳು ನಿಂತಲ್ಲಿಯೇ ನಿಂತಿವೆ. ಏಕಾಏಕಿ ಭಾರಿ ವಾಹನಗಳನ್ನು ತಡೆದಿದ್ದರಿಂದ ಲಾರಿ ಚಾಲಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಬಂದ್ ಮಾಡುವುದನ್ನು ಅಧಿಕಾರಿಗಳು ಮೊದಲೇ ಹೇಳಬೇಕಿತ್ತು. ಏಕಾಏಕಿ ಬಂದ್ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಚಾಲಕರು ಪ್ರಶ್ನಿಸಿದ್ದಾರೆ. ಲಾರಿಯಲ್ಲಿರುವ ಸರಕೆಲ್ಲ ಮಳೆಯಲ್ಲಿ ನೆನೆದು ಹೋಗುವ ಭೀತಿಯೂ ಚಾಲಕರನ್ನು ಕಾಡುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version