ಯಶವಂತ್, ದಾವಣಗೆರೆ
ದಾವಣಗೆರೆ ಜಿಲ್ಲೆ, ಜಗಳೂರು ವಿಧಾನಸಭಾ ಕ್ಷೇತ್ರ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕ್ಷೇತ್ರ. ಯಾವುದೇ ನಿರ್ದಿಷ್ಟ ನೀರಾವರಿ ಯೋಜನೆ ಇಲ್ಲದ ಕಾರಣ ಆರ್ಥಿಕ ಸಬಲೀಕರಣ ಇಲ್ಲದಂತಾಗಿದೆ. ರಾಜಕೀಯವಾಗಿ ಎಷ್ಟೇ ಪ್ರಬಲ ನಾಯಕರಿದ್ದರೂ ಕ್ಷೇತ್ರ ಮಾತ್ರ ಇನ್ನೂ ಹಾಗೆಯೇ ಇದೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಜಗಳೂರಿನಲ್ಲಿ 2004ರಿಂದ ಇಲ್ಲಿಯವರೆಗೂ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ. 2004ರಲ್ಲಿ ಬಿಜೆಪಿಯ ಟಿ.ಗುರುಸಿದ್ದನಗೌಡ ವಿಜೇತರಾಗಿದ್ದರು. ಬಳಿಕ 2008ರಲ್ಲಿ ಎಸ್.ವಿ. ರಾಮಚಂದ್ರಪ್ಪ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಂದರು. ಆದರೆ, ಎಸ್.ವಿ.ರಾಮಚಂದ್ರಪ್ಪ ಬಹಳ ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಉಳಿಯದೆ ಆಪರೇಷನ್ ಕಮಲಕ್ಕೆ ಒಳಗಾಗಿ ಹಸ್ತ ಬಿಟ್ಟು ಕಮಲ ಹಿಡಿದುಕೊಂಡರು. ಆಗ ಬಿಜೆಪಿಯಲ್ಲಿದ್ದ ಎಚ್.ಪಿ. ರಾಜೇಶ್ ಕಮಲ ಬಿಟ್ಟು ಕಾಂಗ್ರೆಸ್ ಸೇರಿದರು.
ರಾಮಚಂದ್ರ ವರ್ಸಸ್ ರಾಜೇಶ್
ಜಗಳೂರು ವಿಧಾನಸಭಾ ಕ್ಷೇತ್ರವೆಂದರೆ ಅದು ರಾಮಚಂದ್ರಪ್ಪ ವರ್ಸಸ್ ರಾಜೇಶ್ ಹಣಾಹಣಿಯ ಕ್ಷೇತ್ರ. ಇಲ್ಲಿ ಇಬ್ಬರೂ ಮೂಲ ಪಕ್ಷದವರಲ್ಲ. ಕಾಂಗ್ರೆಸ್ನಲ್ಲಿದ್ದ ಎಸ್.ವಿ. ರಾಮಚಂದ್ರಪ್ಪ ಬಿಜೆಪಿಗೆ ಬಂದವರು. ಬಿಜೆಪಿಯಲ್ಲಿದ್ದ ರಾಜೇಶ್ ಕಾಂಗ್ರೆಸ್ಗೆ ಬಂದವರು. ಹೀಗಾಗಿ ಇಲ್ಲಿ ಕಾಂಗ್ರೆಸ್-ಬಿಜೆಪಿ ಪೈಪೋಟಿ ಎನ್ನುವುದಕ್ಕಿಂತಲೂ ಇವರಿಬ್ಬರ ಪೈಪೋಟೆ ಎನ್ನಬಹುದು. ಎಸ್.ವಿ.ರಾಮಚಂದ್ರಪ್ಪ ಈಗಾಗಲೇ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ನಗೆ ಬೀರಿದ್ದಾರೆ. ಎಚ್.ಪಿ. ರಾಜೇಶ್ 2013ರಲ್ಲಿ ಗೆದ್ದು ಒಂದು ಅವಧಿಗೆ ಶಾಸಕರಾಗಿದ್ದರು. ಆಗ ಅವರದ್ದೇ ಸರ್ಕಾರ ಇದ್ದರೂ ಬರದ ನಾಡು ಜಗಳೂರು ತಾಲೂಕಿಗೆ ಶಾಶ್ವತವಾಗಿ ಉಳಿಯುವಂತಹ, ಜನ ಗುರುತಿಸುವಂತಹ ಯೋಜನೆ ತಂದಿಲ್ಲ ಎನ್ನುವ ಆರೋಪ ಇದೆ. ಎಸ್.ವಿ. ರಾಮಚಂದ್ರಪ್ಪಗೆ ಪಕ್ಷದಲ್ಲಿ ಇವರನ್ನು ಬಿಟ್ಟರೆ ಬೇರೆ ಪ್ರಬಲ ಆಕಾಂಕ್ಷಿ ಇಲ್ಲ.
ರಾಜೇಶ್ಗೆ ಟಿಕೆಟ್ ಸಿಗುವುದೇ?
ಕಾಂಗ್ರೆಸ್ನ ಎಚ್.ಪಿ.ರಾಜೇಶ್ಗೆ ಈ ಬಾರಿ ಟಿಕೆಟ್ ಸಿಗುವುದೇ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. 2018ರ ಚುನಾವಣೆಯಲ್ಲಿ ಮೊದಲಿಗೆ ಟಿಕೆಟ್ ಕೈತಪ್ಪಿತ್ತು. ಇನ್ನೇನು ರಾಜೇಶ್ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ, ಪುಷ್ಪಾ ಲಕ್ಷ್ಮಣಸ್ವಾಮಿಗೆ ಟಿಕೆಟ್ ಸಿಗತ್ತದೆ ಎನ್ನುವುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದ ಆಶೀರ್ವಾದದಿಂದ ಕಾಂಗ್ರೆಸ್ ಬಿ ಫಾರಂ ರಾಜೇಶ್ ಪಾಲಾಯಿತು. ಆದರೂ ರಾಜೇಶ್ 29,221 ಮತಗಳ ಅಂತರದಿಂದ ಸೋಲನ್ನಪ್ಪಿದರು. ಹಾಗಾಗಿ ಈ ಬಾರಿಯೂ ರಾಜೇಶ್ಗೆ ಪಕ್ಷದೊಳಗೆ ಪ್ರಬಲ ಪೈಪೋಟಿ ಇದೆ. ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ, ಪುಷ್ಪಾ ಲಕ್ಷ್ಮಣಸ್ವಾಮಿ ರೇಸ್ನಲ್ಲಿದ್ದಾರೆ. ಇಷ್ಟು ಜನ ಟಿಕೆಟ್ಗಾಗಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ.
ರಾಮಚಂದ್ರಪ್ಪ ವರ್ಸಸ್ ಕಾಂಗ್ರೆಸ್
ಈಗಾಗಲೇ 3 ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್.ವಿ.ರಾಮಚಂದ್ರಪ್ಪ ಕ್ಷೇತ್ರದ ಜನತೆಗೆ ಚಿರಪರಿಚಿತ. ಅಲ್ಲದೆ ಬಿಜೆಪಿ ಆಡಳಿತದ ಅವಧಿಯಲ್ಲಿ ತಾಲೂಕಿನ 57 ಕೆರೆ ತುಂಬಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆ ಕೊಡಿಸಲು ಹೋರಾಟ ನಡೆಸಿದ ಪರಿಣಾಮ ಜನರ ಮುಂದೆ ಹೋಗುವ ಧೈರ್ಯವಿದೆ. ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಎನ್ನುವುದೇ ಫೈನಲ್ ಆಗಿಲ್ಲ. ಕಾಂಗ್ರೆಸ್ನಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ರಾಮಚಂದ್ರಪ್ಪ ವರ್ಸಸ್ ಕಾಂಗ್ರೆಸ್ ಫೈಟ್ ನಡೆಯಲಿದೆ. ಸದ್ಯದ ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿಯ ಎಸ್.ವಿ.ರಾಮಚಂದ್ರಪ್ಪ ಪ್ರಬಲರಿದ್ದಾರೆ. ಇತ್ತೀಚೆಗೆ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಎಸ್.ವಿ.ರಾಮಚಂದ್ರಪ್ಪನೇ ಮುಂದಿನ ಅಭ್ಯರ್ಥಿ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಪ್ರಬಲ ಅಭ್ಯರ್ಥಿಗಳು ಇಲ್ಲಿಯವರೆಗೂ ಕಾಣಿಸಿಕೊಂಡಿಲ್ಲ.
2023ರಲ್ಲಿ ಸಂಭಾವ್ಯ ಸ್ಪರ್ಧಿಗಳು
1. ಎಸ್.ವಿ. ರಾಮಚಂದ್ರಪ್ಪ (ಬಿಜೆಪಿ
2. ಎಚ್.ಪಿ. ರಾಜೇಶ್, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ, ಪುಷ್ಪಾ ಲಕ್ಷ್ಮಣಸ್ವಾಮಿ (ಕಾಂಗ್ರೆಸ್)
ಚುನಾವಣಾ ಇತಿಹಾಸ
ಮತದಾರರ ವಿವರ
ಇದನ್ನೂ ಓದಿ | ಎಲೆಕ್ಷನ್ ಹವಾ | ಯಲಬುರ್ಗಾ | ರಾಯಲ್ ವರ್ಸಸ್ ಸಾವ್ಕಾರ್ ಸಮರದಲ್ಲಿ ಮೂರನೆಯವರ ಪ್ರವೇಶ ಆಗುವುದೇ?