Site icon Vistara News

ಎಲೆಕ್ಷನ್‌ ಹವಾ | ದಾವಣಗೆರೆ ಉತ್ತರ | ಗಳಿಸಿಕೊಂಡ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ

election hawa political scenario in davanagere north constituency

ಯಶವಂತ್‌, ದಾವಣಗೆರೆ
ದಾವಣಗೆರೆ ಎಂದಾಕ್ಷಣ ನೆನಪಿಗೆ ಬರುವುದು ಸವಿಸವಿ ಬೆಣ್ಣೆ ದೋಸೆ. ದಾವಣಗೆರೆ ಬೆಣ್ಣೆ ದೋಸೆ ಎಂದರೆ ದೇಶ-ವಿದೇಶಗಳಲ್ಲೂ ಫೇಮಸ್. ಮಧ್ಯ ಕರ್ನಾಟಕದ ಕೇಂದ್ರ ಬಿಂದು, 2ನೇ ರಾಜಧಾನಿ ಆಗಬೇಕೆಂಬ ಬಹು ವರ್ಷಗಳ ಕೂಗು ಇರುವ ಜಿಲ್ಲೆ ದಾವಣಗೆರೆ. ಒಂದು ಕಾಲದಲ್ಲಿ ಮ್ಯಾಂಚೆಸ್ಟರ್‌ ಸಿಟಿ ಎಂದೇ ಖ್ಯಾತಿ ಪಡೆದಿದ್ದ ದಾವಣಗೆರೆ, ಹುಟ್ಟು ಹೋರಾಟದ ಭೂಮಿ, ಕಾರ್ಮಿಕ ವರ್ಗದ ತವರು ಮನೆ ಅಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ದಾವಣಗೆರೆಯ ಕಮ್ಯುನಿಸ್ಟ್‌ ಹೋರಾಟ ಎಂದರೆ ಅದು ಚೀನಾದ ನೆಲದಲ್ಲೂ ಧ್ವನಿಸುತ್ತಿತ್ತು. ಅಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿತ್ತು. ಈಗ ಕ್ಷೇತ್ರವು ಕಾಂಗ್ರೆಸ್‌-ವರ್ಸಸ್‌ ಬಿಜೆಪಿ ಎಂಬಂತಾಗಿದೆ. ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳು ಪರಸ್ಪರ ಬೆಸೆದುಕೊಂಡಿವೆ ಹಾಗೂ ಸಮಾನ ಅಂಶಗಳನ್ನು ಹೊಂದಿವೆ. ಇರಡೂ ಕ್ಷೇತ್ರಗಳನ್ನು ಸಂಪೂರ್ಣ ಬೇರ್ಪಡಿಸಿ ನೋಡುವುದು ಕಷ್ಟ.

ತಂದೆ-ಮಗನ ಕ್ಷೇತ್ರ
ಕಾಂಗ್ರೆಸ್‍ ಪಕ್ಷದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೆಂದರೆ ಶಾಮನೂರು ಶಿವಶಂಕರಪ್ಪ ಅವರ ಕ್ಷೇತ್ರ. ಉತ್ತರ ವಿಧಾನಸಭಾ ಕ್ಷೇತ್ರವೆಂದರೆ ಮಗ ಎಸ್.ಎಸ್.ಮಲ್ಲಿಕಾರ್ಜುನ್‍ ಕ್ಷೇತ್ರ ಎಂಬಂತಾಗಿದೆ. ಡಾ.ಶಾಮನೂರು ಶಿವಶಂಕರಪ್ಪ ಮೂಲ ಕಾಂಗ್ರೆಸಿಗರು. ಕೆಪಿಸಿಸಿ ಕಾಯಂ ಖಜಾಂಚಿ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಅಲ್ಲದೆ ದಾವಣಗೆರೆಯ ಬಾಪೂಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರು. ಹೀಗಾಗಿ ಕಳೆದ ಎರಡು ದಶಕದಿಂದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ.

2008ರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರವಾಗುತ್ತಿದ್ದಂತೆ ಡಾ.ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‍ ಅವರನ್ನು ಕಾಂಗ್ರೆಸ್‍ ಪಕ್ಷಕ್ಕೆ, ಉತ್ತರ ಕ್ಷೇತ್ರದ ಉತ್ತರಾಧಿಕಾರಿಯಾಗಿ ಮಾಡಿದರು. 2008 ಮೊದಲ ಚುನಾವಣೆಯಲ್ಲಿ ಬಿಜೆಪಿಯ ಎಸ್‍.ಎ. ರವೀಂದ್ರನಾಥ್‍ ಶಾಸಕರಾಗಿ ಆಯ್ಕೆಯಾದರು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಸ್‍.ಎಸ್‍. ಮಲ್ಲಿಕಾರ್ಜುನ್‍ ಶಾಸಕರಾಗಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ಪುನಃ ಬಿಜೆಪಿಯ ಎಸ್.ಎ. ರವೀಂದ್ರನಾಥ್‍ ಶಾಸಕರಾಗಿ ಚುನಾಯಿತರಾಗಿದ್ದಾರೆ. ಹೀಗಾಗಿ 2023ರ ಚುನಾವಣೆ ಹೈಟೆಕ್ಷನ್‍ ಕ್ಷೇತ್ರವಾಗಿದೆ.

2023ರಲ್ಲಿ ಮುಖಾಮುಖಿ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್. 2008 ಮತ್ತು 2018ರಲ್ಲಿ ಎಸ್.ಎ. ರವೀಂದ್ರನಾಥ್‍ ಶಾಸಕರಾಗಿ ಚುನಾಯಿತರಾಗಿದ್ದರು. ಅವರಿಗೆ ಪ್ರಬಲ ಪೈಪೋಟಿ ಕೊಟ್ಟಿದ್ದು ಕಾಂಗ್ರೆಸ್‍ನ ಎಸ್.ಎಸ್. ಮಲ್ಲಿಕಾರ್ಜುನ್. 2023ರ ಚುನಾವಣೆಯಲ್ಲಿ ಎಸ್.ಎ.ರವೀಂದ್ರನಾಥ್‍ ಜತೆಗೆ ಬಿಜೆಪಿ ಮುಖಂಡರಾಡ ಎಸ್.ಟಿ. ವೀರೇಶ್, ಲೋಕಿಕೆರೆ ನಾಗರಾಜ್, ಬಿ.ಎಸ್​.ಜಗದೀಶ್‍ ಆಕಾಂಕ್ಷಿಗಳಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಎಸ್.ಎ. ರವೀಂದ್ರನಾಥ್​ ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಇತ್ತೀಚೆಗೆ ನಡೆದ ಎಸ್​.ಎ. ರವೀಂದ್ರನಾಥ್​ ಜನ್ಮ ದಿನದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಆದರೆ, ಚುನಾವಣೆ ಸಮಯದಲ್ಲಿ ವಯಸ್ಸಿನ ಕಾರಣದಿಂದ ಎಸ್​.ಎ. ರವೀಂದ್ರನಾಥ್​ ಬದಲು ಬೇರೆ ಅಭ್ಯರ್ಥಿ ಘೋಷಣೆ ಮಾಡಬಹುದು ಎನ್ನುವ ಲೆಕ್ಕಾಚಾರ ಕೂಡ ಇದೆ.

ಕಾಂಗ್ರೆಸ್‍ನಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್‍ ಅಥವಾ ಪತ್ನಿ ಪ್ರಭಾ ಮಲ್ಲಿಕಾರ್ಜುನ್‍ ಸ್ಪರ್ಧಿಸುವ ಸಾಧ್ಯತೆ ಇದೆ. ಅದರೆ, ಇದುವರೆಗೂ ಮಲ್ಲಿಕಾರ್ಜುನ್​ ಆಗಲಿ, ಪತ್ನಿ ಪ್ರಭಾ ಆಗಲಿ ಕೆಪಿಸಿಸಿಗೆ ಟಿಕೆಟ್​ಗಾಗಿ ಅರ್ಜಿ ಹಾಕಿಲ್ಲ. ಅಲ್ಲದೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್​ನಲ್ಲಿ ಯಾರೂ ಅರ್ಜಿ ಹಾಕಿಲ್ಲ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಇಲ್ಲಿ ಶಾಮನೂರು ಕುಟುಂಬ ವರ್ಸಸ್ ಬಿಜೆಪಿ ಎಂಬ ಪೈಪೋಟಿ ಏರ್ಪಡಲಿದೆ. ಜೆಡಿಎಸ್‌ನಿಂದ ಆನಂದಪ್ಪ ಹಾಗೂ ಆಮ್‌ ಆದ್ಮಿ ಪಕ್ಷದಿಂದ ಶ್ರೀಧರ್‌ ಪಾಟೀಲ್‌ ಕಣಕ್ಕಿಳಿಯುವ ಸಾಧ್ಯತೆಯಿದೆ.

2023ರ ಸಂಭಾವ್ಯ ಅಭ್ಯರ್ಥಿಗಳು
1. ಎಸ್.ಎ. ರವೀಂದ್ರನಾಥ್‍, ಲೋಕೀಕೆರೆ ನಾಗರಾಜ್, ಎಸ್.ಟಿ.ವೀರೇಶ್‍, ಬಿ.ಎಸ್‍.ಜಗದೀಶ್‍ (ಬಿಜೆಪಿ)
2. ಎಸ್.ಎಸ್.ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್)
3. ಆನಂದಪ್ಪ (ಜೆಡಿಎಸ್)
4. ಶ್ರೀಧರ್‌ ಪಾಟೀಲ್‍ (ಎಎಪಿ)

ಚುನಾವಣಾ ಇತಿಹಾಸ

ಮತದಾರರ ಮಾಹಿತಿ

ಇದನ್ನೂ ಓದಿ | ಎಲೆಕ್ಷನ್‌ ಹವಾ | ದಾವಣಗೆರೆ ದಕ್ಷಿಣ | 90ರ ಸೇನಾನಿ ಶಾಮನೂರು ಶಿವಶಂಕರಪ್ಪ ಕೋಟೆಯನ್ನು ಭೇದಿಸುವುದು ಸಾಧ್ಯವೇ?

Exit mobile version