Site icon Vistara News

Election Irregularity: ಗಿಫ್ಟ್‌ ಬಾಕ್ಸ್‌ ಹಣ ಹಂಚಿದ ಆರೋಪ: ಶಾಮನೂರು, ಪುತ್ರಗೆ ಸಂಕಷ್ಟ

Shamanuru Shivashankarappa and SS Mallikarjun

ದಾವಣಗೆರೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಮತದಾರರಿಗೆ ಗಿಫ್ಟ್‌ ಬಾಕ್ಸ್‌ ಮತ್ತು ಹಣ (Gift box and money distribution) ಹಂಚಿದ ಆರೋಪ (Election Irregularity) ಎದುರಿಸುತ್ತಿರುವ ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಶಾಸಕರಾದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಮತ್ತು ದಾವಣಗೆರೆ ಉತ್ತರ ಶಾಸಕರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌ (SS Mallikarjun) ಅವರಿಗೆ ಹೈಕೋರ್ಟ್‌ ನೋಟಿಸ್‌ (High Court Notice) ಜಾರಿಗೊಳಿಸಿದೆ.

ಚುನಾವಣೆ ವೇಳೆ ಶಾಮನೂರು ಶಿವಶಂಕರಪ್ಪ (ಎಸ್ಸೆಸ್‌), ಎಸ್‌ಎಸ್‌ ಮಲ್ಲಿಕಾರ್ಜುನ್‌ (ಎಸ್ಸೆಸ್ಸೆಂ) ಭಾವಚಿತ್ರ ಹೊಂದಿರುವ ಗಿಫ್ಟ್‌ ಬಾಕ್ಸ್‌ಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿತ್ತು. ಈ ಬಗ್ಗೆ ಕೆಟಿಜೆ ನಗರ ಠಾಣೆ ಮತ್ತು ಗಾಂಧಿ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೂ ಚಾರ್ಜ್‌ ಶೀಟ್‌ ಸಲ್ಲಿಸಿಲ್ಲ. ‌ ಹೀಗಾಗಿ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಸುಭಾನ್‌ ಖಾನ್‌ ತಿಳಿಸಿದ್ದಾರೆ.

ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸದಿರುವ ಬಗ್ಗೆ, ತನಿಖೆ ನಡೆಸದಿರುವ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೆ. ಆದರೆ, ನನಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಹೀಗಾಗಿ ಹೈಕೋರ್ಟ್‌ಗೆ ದಾವೆ ಸಲ್ಲಿಸಿದ್ದೇನೆ. ಇದರ ಆಧಾರದಲ್ಲಿ ಹೈಕೋರ್ಟ್‌ ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಅವರಲ್ಲದೆ, ಮುಖ್ಯ ಚುನಾವಣಾ ಆಯುಕ್ತರು, ದಾವಣಗೆರೆ ಜಿಲ್ಲಾಧಿಕಾರಿಗಳಿಗೂ ನೋಟಿಸ್‌ ಜಾರಿ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ: Caste Census : ಕಾಂತರಾಜು ವರದಿ ಸ್ವೀಕರಿಸಿದರೆ ಡೇಂಜರ್‌; ಸರ್ಕಾರಕ್ಕೆ ಶಾಮನೂರು ಎಚ್ಚರಿಕೆ

ಚುನಾವಣೆ ಸಮಯದಲ್ಲಿ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ಕುಕ್ಕರ್, ಸೀರೆ ಹಂಚಿಕೆ ಮಾಡಿದ್ದರು ಎಂಬ ಆರೋಪ ಎದುರಾಗಿತ್ತು. ಆಗ ಇವರಿಬ್ಬರ ಮೇಲೆ ಅಂದಿನ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗಿ 6 ತಿಂಗಳಾದರೂ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್‌ ಸಲ್ಲಿಸಿರಲಿಲ್ಲ. ಇದನ್ನು ಸುಭಾನ್ ಖಾನ್ ಪ್ರಶ್ನೆ ಮಾಡಿದ್ದೇ ತಂದೆ ಮತ್ತು ಮಗನಿಗೆ ಸಂಕಷ್ಟ ಎದುರಾಗಿದೆ.

ಆದರೆ, ”ನಾವು ಚುನಾವಣೆಯಲ್ಲಿ ಯಾವುದೇ ಗಿಫ್ಟ್‌ ಬಾಕ್ಸ್‌ ಹಾಗೂ ಹಣ ಹಂಚಿಕೆ ಮಾಡಿ, ಆಮಿಷ ಒಡ್ಡಿಲ್ಲ” ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

Exit mobile version