Site icon Vistara News

Electric shock : ಮೋಟಾರ್‌ ಆನ್‌ ಮಾಡುವಾಗ ಕರೆಂಟ್‌ ಶಾಕ್‌ಗೆ ಮಹಿಳೆ ಸಾವು; ಮೀನು ಹಿಡಿಯಲು ಹೋಗಿ ವ್ಯಕ್ತಿ ನೀರುಪಾಲು

Electric shock

ದಾವಣಗೆರೆ: ಮೋಟಾರ್ ಆನ್ ಮಾಡುವಾಗ ವಿದ್ಯುತ್ ಶಾಕ್‌ಗೆ (Electric shock) ಸ್ಥಳದಲ್ಲಿಯೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಸೌಭಾಗ್ಯ ನರಸಿಂಹಪ್ಪ (46) ವಿದ್ಯುತ್ ಶಾಕ್‌ನಿಂದ ಮೃತಪಟ್ಟವರು.

ಸೌಭಾಗ್ಯ ಬೇಲಿ ಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯಲ್ಲಿ ಮುಖ್ಯ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿದ್ದರು. ಮನೆಗೆ ನೀರು ತುಂಬಿಸುವ ವೇಳೆ ಮೋಟಾರ್ ಆನ್ ಮಾಡುವಾಗ ವಿದ್ಯುತ್ ಶಾಕ್‌ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಮೀನು ಹಿಡಿಯುವಾಗ ಕೊಚ್ಚಿ ಹೋದ ವ್ಯಕ್ತಿ

ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಬಳಿ ಘಟನೆ ನಡೆದಿದೆ. ಮೈಕಲ್ (53) ನೇತ್ರಾವತಿ ನದಿಗೆ ಬಿದ್ದು ನಾಪತ್ತೆಯಾದವರು.

ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿದ್ದ ಮೈಕಲ್‌, ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನೇತ್ರಾವತಿ ನದಿಗೆ ಇಳಿದಿದ್ದರು. ಈ ವೇಳೆ ನೋಡನೋಡುತ್ತಲೇ ಮೈಕಲ್‌ ನೀರುಪಾಲಾಗಿದ್ದಾರೆ. ಈತ ನೀರಿನಲ್ಲಿ ಕೊಚ್ಚಿಹೋದ ಮೈಕಲ್‌ಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

Electric shock

ನದಿ‌ದಾಟಲು ಹೋದ ವ್ಯಕ್ತಿ ನೀರು ಪಾಲು

ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲಿರುವ ಮುಲ್ಲಾಮಾರಿ ನದಿ ದಾಟಲು ಹೋದ ವ್ಯಕ್ತಿ ನೀರುಪಾಲಾಗಿದ್ದಾರೆ. ಸಾಯಬಣ್ಣ(45)ನೀರು ಪಾಲಾದವರು. ಪೊತಂಗಲ ಗ್ರಾಮದಿಂದ ತೆಲಂಗಾಣದ ನಾವದಗಿ ಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಸುಲೇಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ

ಇಂದೋರ್: ಮಳೆಗಾಲದಲ್ಲಿ ರಸ್ತೆಗಳಲ್ಲಿ ಹೊಂಡಗಳ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡಗಳು, ಚರಂಡಿಗಳನ್ನು ತೆರೆದಿಡುವುದರಿಂದ ಮಳೆಗಾಲದಲ್ಲಿ ಪ್ರಾಣಕ್ಕೇ ಕುತ್ತು ಬರುವಂತಾಗುತ್ತದೆ. ಇದೀಗ ಅಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರೀ ಮಳೆಯ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡದೇ ರಸ್ತೆ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತೋರಿತ್ತು. ಇದು ಬಾಲಕಿಯೊಬ್ಬಳ ಜೀವವನ್ನೇ ಅಪಾಯದಂಚಿಗೆ ದೂಡಿದ ಸನ್ನಿವೇಶವದು. ಇಂದೋರ್‌ನ ಅಮ್ಮರ್ ನಗರದಲ್ಲಿ ರಸ್ತೆ ದಾಟಲು ಪ್ರಯತ್ನಿಸುವಾಗ ಹನ್ನೆರಡು ವರ್ಷದ ಬಾಲಕಿಯೊಬ್ಬಳು 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ನಂತರ ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಅಲ್ಲಿಗೆ ಬಂದ ಹುಡುಗನೊಬ್ಬ ಕಾಪಾಡಿದ್ದಾನೆ. ಈ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಹೆಂಡತಿಯನ್ನು ಯಾಮಾರಿಸಿ ಪ್ರೇಯಸಿಯನ್ನು ಮನೆಗೆ ಕರೆಸಬಾರದಿತ್ತು! ಗೂಸಾ ತಿಂದವನ ಪ್ರತಿಕ್ರಿಯೆ!

ಬಾಲಕಿ ಅಜ್ಜಿಯ ಜೊತೆಗೆ ರಸ್ತೆ ದಾಟಲು ಮುಂದಾಗಿದ್ದಾಳೆ. ಅಜ್ಜಿ ಮುಂದೆ ಹೋಗಿದ್ದು, ಹಿಂದಿನಿಂದ ಬಂದ ಹುಡುಗಿ ರಸ್ತೆಯಲ್ಲಿ ಸಣ್ಣ ಹೊಂಡವೆಂದು ನೀರಿಗೆ ಕಾಲಿಡಲು ಪ್ರಯತ್ನಿಸಿದ್ದಾಳೆ. ಆಗ ಬ್ಯಾಲೆನ್ಸ್ ತಪ್ಪಿ ಬಾಲಕಿ 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ಆಕೆ ಮುಳುಗಿ ನಂತರ ಸಮತೋಲನ ಮಾಡಿ ಗುಂಡಿಯ ಬದಿಗೆ ಬಂದಿದ್ದಾಳೆ. ಆಕೆ ಗುಂಡಿಯಿಂದ ಹೊರಗೆ ಬರಲು ಹೆಣಗಾಡುತ್ತಿರುವಾಗ ಅಲ್ಲಿಗೆ ಬಂದ ಹುಡುಗನೊಬ್ಬ ಆಕೆಯನ್ನು ಮೇಲಕ್ಕೆ ಎತ್ತಿದ್ದಾನೆ. ಇದರಿಂದ ಆಕೆಯ ಜೀವ ಉಳಿದಿದೆ.

ಮಾಹಿತಿಯ ಪ್ರಕಾರ, ನಿರ್ಮಾಣ ಕಾರ್ಯಕ್ಕಾಗಿ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಗುಂಡಿಯನ್ನು ಅಗೆದಿದ್ದರು ಆದರೆ ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ಅದು ಮಳೆಯ ಸಮಯದಲ್ಲಿ ತುಂಬಿದ್ದರಿಂದ ಈ ಘಟನೆ ಸಂಭವಿಸಿದೆ. ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮರ್ ನಗರದ ವಾರ್ಡ್ ನಂ.1ರಲ್ಲಿ ಜೂನ್ 29ರಂದು ಈ ಘಟನೆ ನಡೆದಿದೆ. ಇಡೀ ಘಟನೆಯನ್ನು ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದು ಬುಧವಾರ ವೈರಲ್ ಆಗಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ದಾಖಲಾಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version