Site icon Vistara News

Father-son Drowned : ಮರಣ ಯಾತ್ರೆಯಾದ ಪಿಕ್ನಿಕ್; ಅಪ್ಪ-ಮಗ ನೀರಲ್ಲಿ ಮುಳುಗಿ ಸಾವು

Father and son Drowned in dam water

ದಾವಣಗೆರೆ: ರಜೆ ಇದ್ದ ಹಿನ್ನೆಲೆಯಲ್ಲಿ ಒಂದು ದಿನ ಎಲ್ಲಾದರೂ ಪಿಕ್ನಿಕ್‌ ಹೋಗಿ (family picnic) ಬರೋಣ ಎಂದು ಹೊರಟ ಆ ಕುಟುಂಬಕ್ಕೆ ಭಾರಿ ಆಘಾತವಾಗಿದೆ. ಇಬ್ಬರು ಮಕ್ಕಳೊಂದಿಗೆ ಹೋಗಿದ್ದ ಆ ಕುಟುಂಬದಲ್ಲಿ ಅಪ್ಪ ಮತ್ತು ಮಗ ನೀರಿನಲ್ಲಿ ಮುಳುಗಿ (Father-son Drowned) ಮೃತಪಟ್ಟರೆ, ಇನ್ನೊಬ್ಬ ಮಗ ಮತ್ತು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆ (Davanagere News) ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ (Devarabelakere pickup dam). ಮಿಟ್ಲಕಟ್ಟೆ ಗ್ರಾಮದ ಚಂದ್ರು(42), ಶೌರ್ಯ(9) ಸಾವನ್ನಪ್ಪಿದ ದುರ್ದೈವಿಗಳು.

ಗುರುವಾರ ಈದ್‌ ಮಿಲಾದ್‌ ರಜೆ ಇದ್ದ ಹಿನ್ನೆಲೆಯಲ್ಲಿ ಚಂದ್ರು ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ದೇವರ ಬೆಳಕೆರೆ ಪಿಕಪ್‌ ಡ್ಯಾಂಗೆ ಹೋಗಿದ್ದರು. ಅಲ್ಲಿನ ಜಲರಾಶಿಯ ಸೌಂದರ್ಯವನ್ನು ಸವಿಯುತ್ತಿರುವಂತೆಯೇ ಮೃತ್ಯು ಎರಗಿಬಿಟ್ಟಿದೆ.

ಮಕ್ಕಳಾದ ಶೌರ್ಯ ಮತ್ತು ಇನ್ನೊಬ್ಬ ಅಣೆಕಟ್ಟಿನ ಹಿನ್ನೀರಿನ ನೀರಿನಲ್ಲಿ ಆಟವಾಡುತ್ತಿದ್ದರು. ಈಜುತ್ತಾ ಆಡುತ್ತಾ ಇಬ್ಬರೂ ಮಕ್ಕಳು ನೀರಿನ ಸುಳಿಗೆ ಸಿಲುಕಿದರು. ಆಗ ತಕ್ಷಣವೇ ಜಾಗೃತರಾದ ತಂದೆ ಚಂದ್ರು ಅವರು ಕೂಡಲೇ ನೀರಿಗೆ ಹಾರಿದರು. ಒಬ್ಬ ಪುತ್ರನನ್ನು ರಕ್ಷಿಸಿ ಮೇಲೆ ದಡಕ್ಕೆ ಬಿಟ್ಟರು. ಅಷ್ಟು ಹೊತ್ತಿಗೆ ಇನ್ನೊಬ್ಬ ಪುತ್ರ ಇನ್ನೂ ದೂರ ಹೋಗಿದ್ದ. ಅವನನ್ನು ಬೆನ್ನಟ್ಟಿ ಹೋದ ಚಂದ್ರು ಅವರು ತಾವೇ ನೀರಿನಲ್ಲಿ ಮುಳುಗಿದರು.

ಚಂದ್ರು ಅವರು ನೀರಿನಲ್ಲಿ ಮುಳುಗೇಳುತ್ತಿದ್ದಾಗ ಅಲ್ಲಿದ್ದ ಇತರರು ಅವರನ್ನು ದಡ ಸೇರಿಸಿದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಪ್ರಾಣ ಕಳೆದುಕೊಂಡರು. ಅಗ್ನಿಶಾಮಕ ಸಿಬ್ಬಂದಿ ಶೌರ್ಯ ಶವಕ್ಕಾಗಿ ಡ್ಯಾಂನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Drowned In River : ಕಳೆದು ಹೋದ ಎಮ್ಮೆ ಹುಡುಕುವಾಗ ಕಾಲು ಜಾರಿ ಕೆರೆಗೆ ಬಿದ್ದ ರೈತ!

ಲಕ್ಕುಂಡಿ ಕ್ರಾಸ್‌ನಲ್ಲಿ ಅಪಘಾತದಲ್ಲಿ ತಂದೆ ಮಗ ಸಾವು

ಗದಗ: ಗದಗ ತಾಲೂಕಿನ ಲಕ್ಕುಂಡಿ‌ ಕ್ರಾಸ್‌ನ (Lakkundi cross at gadag) ಅಯ್ಯಪ್ಪಸ್ವಾಮಿ‌ ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರಿನ (Accident between bus and Car) ನಡುವೆ ಭೀಕರ‌ ಅಪಘಾತ (Road accident) ಸಂಭವಿಸಿ ತಂದೆ ಮತ್ತು ಮಗ ಮೃತಪಟಿದ್ದಾರೆ.

ಗದಗದಿಂದ ಕೊಪ್ಪಳ ಕಡೆ ತೆರಳುತ್ತಿದ್ದ KSRTC ಬಸ್ ಮತ್ತು ಹೊಸಪೇಟೆಯಿಂದ ಗದಗ ಮಾರ್ಗವಾಗಿ ಬರುತ್ತಿದ್ದ ಕಾರಿನ ನಡುವೆ ಈ ಅವಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ತಂದೆ ಮತ್ತು ಮಗ ಆಗಿದ್ದಾರೆ. ತಂದೆ ಡಾ. ಎಚ್ ಬಾಲರಾಜ್ (64) ಅವರು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾಗಿದ್ದರೆ, ಮಗ ಡಾ ವಿನಯ ಅವರು ಪ್ರೊಫೆಸರ್ ಆಗಿದ್ದಾರೆ. ಅವರು ವಿಜಯನಗರ ಜಿಲ್ಲೆಯ ಮೂಲದವರಾಗಿದ್ದು, ಗದಗ ಮಾರ್ಗವಾಗಿ ಬರುತ್ತಿದ್ದರು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ಕಳೆದುಕೊಂಡ ಬಸ್‌ ಅಲ್ಲೇ ಮಗುಚಿ ಬಿದ್ದಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version